ಪುತ್ತೂರು: ಪ್ರಭು ಯೇಸುಕ್ರಿಸ್ತರನ್ನು ಶಿಲುಬೆಗೇರಿಸುವ ದಿನವಾದ ಗುಡ್ ಫ್ರೈಡೇ(ಶುಭ ಶುಕ್ರವಾರ) ದಿನವನ್ನು ವಿಶ್ವದಾದ್ಯಂತ ಕ್ರೈಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದು, ಪುತ್ತೂರು ತಾಲೂಕಿನ ಚರ್ಚ್ಗಳಲ್ಲಿಯೂ ಗುಡ್ ಫ್ರೈಡೇ ದಿನವನ್ನು ಶ್ರದ್ಧಾಭಕ್ತಿಯಿಂದ ಶುಕ್ರವಾರ ಆಚರಿಸಲಾಯಿತು.
ಕಲ್ವಾರಿ ಬೆಟ್ಟದ ಮೇಲೆ ಪ್ರಭು ಕ್ರಿಸ್ತರು ಮನುಕುಲದ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ದಿನವನ್ನು ಶುಭ ಶುಕ್ರವಾರವನ್ನಾಗಿ ಆಚರಿಸಲಾಗುತ್ತದೆ. ಆ ದಿನದಂದು ಜಗತ್ತಿನಾದ್ಯಂತ ಕ್ರೈಸ್ತ ದೇವಾಲಯಗಳಲ್ಲಿ ಬಲಿಪೂಜೆಗಳು ಇರುವುದಿಲ್ಲ. ಆದರೆ ಅರ್ಥವತ್ತಾದ ಆರಾಧನೆ ಮತ್ತು ಪ್ರಾರ್ಥನೆಗಳು ಶುಕ್ರವಾರ ಬೆಳಿಗ್ಗೆಯಿಂದಲೇ ಆಯಾ ಚರ್ಚ್ ಗಳಲ್ಲಿ ನಡೆಯುತ್ತದೆ. ಆಯಾ ಚರ್ಚ್ ಗಳಲ್ಲಿ ಏಸು ಕ್ರಿಸ್ತರನ್ನು ಶಿಲುಬೆಗೆ ಏರಿಸುವ ಮುನ್ನ ಶಿಲುಬೆಯನ್ನು ಹೊತ್ತು ಸಾಗಿದ ಘಟನಾವಳಿಯನ್ನು ಸ್ಮರಿಸುವ ವೇ ಆಫ್ ದಿ ಕ್ರಾಸ್(ಶಿಲುಬೆಯ ಹಾದಿ)ವನ್ನಾಗಿ ಆಚರಿಸಲಾಗುತ್ತದೆ.
ಪುತ್ತೂರಿನ ಮಾಯಿದೆ ದೇವುಸ್ ಚರ್ಚ್, ಮರೀಲಿನ ಸೆಕ್ರೇಡ್ ಹಾರ್ಟ್ ಚರ್ಚ್, ಬನ್ನೂರಿನ ಸಂತ ಅಂತೋನಿ ಚರ್ಚ್, ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯ, ಬೆಳ್ಳಾರೆ ಚರ್ಚ್ ಸಹಿತಿ ಇನ್ನಿತರ ಚರ್ಚ್ ಗಳಲ್ಲಿ ಗುಡ್ ಫ್ರೈಡೇ ದಿನವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಆಯಾ ಚರ್ಚ್ ನ ಪಾಲನಾ ಸಮಿತಿಯ ಉಪಾಧ್ಯಕ್ಷ, ಕಾರ್ಯದರ್ಶಿ, ಚರ್ಚ್ ಪಾಲನಾ ಸಮಿತಿ ಸದಸ್ಯರು, ಸ್ಯಾಕ್ರಿಸ್ಟಿಯನ್, ಗುರಿಕಾರರು, ಧರ್ಮಭಗಿನಿಯರು, ವೇದಿ ಸೇವಕರು, ಗಾಯನ ಮಂಡಳಿ ಸದಸ್ಯರು ಸಹಕರಿಸಿದರು. ನೂರಾರು ಸಂಖ್ಯೆಯಲ್ಲಿ ಭಕ್ತರು ಧಾರ್ಮಿಕ ವಿದಿವಿಧಾನಗಳಲ್ಲಿ ಪಾಲ್ಗೊಂಡರು.
ಮಾಯಿದೆ ದೇವುಸ್ ಚರ್ಚ್ ನಲ್ಲಿ ಗುಡ್ ಫ್ರೈಡೇ ದಿನದ ಅಂಗವಾಗಿ ಯೇಸುಕ್ರಿಸ್ತರ ಪೂಜ್ಯ ಶರೀರದೊಂದಿಗೆ ಕ್ರೈಸ್ತ ವಿಶ್ವಾಸಿ ಭಕ್ತರು ಚರ್ಚ್-ಕೋರ್ಟ್ರೋಡ್-ಎಂ.ಟಿರೋಡ್ ಮುಖೇನ ಯೇಸುಕ್ರಿಸ್ತರ ಸ್ಮರಣಾ ಮೆರವಣಿಗೆಯನ್ನು ಶ್ರದ್ಧಾ ಭಕ್ತಿಯಿಂದ ಹಮ್ಮಿಕೊಳ್ಳಲಾಯಿತು. ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ ಸೋಜ, ವಂ|ಸ್ಟ್ಯಾನಿ ಪಿಂಟೋ, ವಂ|ಅಶೋಕ್ ರಾಯನ್ ಕ್ರಾಸ್ತಾ, ಬನ್ನೂರು ಚರ್ಚ್ ನಲ್ಲಿ ವಂ|ಬಾಲ್ತಜಾರ್ ಪಿಂಟೋ, ಹಿರಿಯ ಧರ್ಮಗುರು ವಂ|ಆಲ್ಪೋನ್ಸ್ ಮೊರಾಸ್, ಮರೀಲು ಚರ್ಚ್ ನಲ್ಲಿ ವಂ|ವಲೇರಿಯನ್ ಫ್ರ್ಯಾಂಕ್, ವಂ|ಡೆನ್ಜಿಲ್ ಲೋಬೊ, ಉಪ್ಪಿನಂಗಡಿ ಚರ್ಚ್ ನ ಲ್ಲಿ ವಂ|ಅಬೆಲ್ ಲೋಬೊ ನೇತೃತ್ವದಲ್ಲಿ ನಡೆಯಿತು.
ಬನ್ನೂರು ಚರ್ಚ್ನಲ್ಲಿ ಚರ್ಚ್ ನಿಂದ ಆನೆಮಜಲು ಕೋರ್ಟ್ ಮೂಲಕ ಪುನಃ ಚರ್ಚ್ ಗೆ ಆಗಮಿಸುವ ಹಾದಿಯಲ್ಲಿ ಯೇಸುಕ್ರಿಸ್ತರ ಶಿಲುಬೆಯ ಹಾದಿಯ 14 ಸ್ಥಳಗಳನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.