ಬಂಡೀಪುರ ಅರಣ್ಯದಲ್ಲಿ ಹುಲಿ ಸಫಾರಿ
ಬೆಂಗಳೂರು : ಬಂಡೀಪುರ ಅರಣ್ಯವನ್ನು ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೆಂದು ಘೋಷಿಸಿ 50 ವರ್ಷ ಸಂದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ನೀಡಲಿದ್ದಾರೆ.
ಇಂದು ರಾತ್ರಿ 8.40ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, ಬಳಿಕ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ರಾತ್ರಿ 8.50ಕ್ಕೆ ಮೈಸೂರಿನ ಅಡಿಸನ್ ಬ್ಲೂ ಹೋಟೆಲ್ಗೆ ತೆರಳಲಿದ್ದಾರೆ. ಇಂದು ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ನಾಳೆ ಬೆಳಗ್ಗೆ 6.20ಕ್ಕೆ ಹೋಟೆಲ್ನಿಂದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬಂಡೀಪುರಕ್ಕೆ ತೆರಳಲಿದ್ದಾರೆ.
ಬಂಡೀಪುರದಲ್ಲಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ನಮನ ಸಲ್ಲಿಸಿ ಅದೇ ಸ್ಥಳದಲ್ಲಿ ಅಂಚೆ ಲಕೋಟೆ ಬಿಡುಗಡೆಗೊಳಿಸಿ ಬಳಿಕ ಬಂಡೀಪುರದ ಕಾಡಿನಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಸಫಾರಿ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಡೀಪುರದ ಎಲ್ಲ ಅರಣ್ಯ ಸಿಬ್ಬಂದಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಆರ್.ಟಿ. ಪಿ.ಸಿ.ಆರ್. ತಪಾಸಣೆ ನಡೆಸಲಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ನಡೆಸಿ ನಂತರ ಮುದುಮಲೈ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಅಲ್ಲಿಯ ತೆಪ್ಪಕಾಡು ಆನೆಕ್ಯಾಂಪ್ನಲ್ಲಿ ಬೊಮ್ಮ ಮತ್ತು ಬೆಳ್ಳಿ ದಂಪತಿಯನ್ನು ಸನ್ಮಾನಿಸಲಿದ್ದಾರೆ.
ದೇಶದ 12 ಹುಲಿ ಯೋಜನೆ ನಿರ್ದೇಶಕರ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ಈ ಹಿನ್ನೆಲೆ ಬಂಡೀಪುರ ಹಾಗೂ ಮಧುಮಲೈ ಮಾರ್ಗವಾಗಿ ಸಂಚರಿಸುವ ಎಲ್ಲ ವಾಹನಗಳ ತಪಾಸಣೆ ನಡೆಯುತ್ತಿದೆ. ಇಂದು ಸಂಜೆ 4 ಗಂಟೆಯಿಂದ ನಾಳೆ ಮಧ್ಯಾಹ್ನ 12 ರವರಗೆ ಬಂಡೀಪುರ ಮಾರ್ಗವಾಗಿ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟೀಯ ಹೆದ್ದಾರಿ 181 ಹಾಗೂ ಕೇರಳ ರಾಜ್ಯಕ್ಕೆ ಸಂಪರ್ಕ ಕಲಿಸುವ ರಾಷ್ಟ್ರೀಯ ಹೆದ್ದಾರಿ 766 ಅನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿದೆ.
ಹುಣಸೂರು ರಸ್ತೆ ಮೂಲಕ ನಾಳೆ ಬೆಳಗ್ಗೆ 10.30ಕ್ಕೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಆಗಮಿಸಿ ಕೆಎಸ್ಒಯು ಘಟಿಕೋತ್ಸವ ಭವನದಲ್ಲಿ ಹುಲಿ ಸಂರಕ್ಷಣಾ ಯೋಜನೆ 50ನೇ ವರ್ಷಾಚರಣೆ ಕಾರ್ಯಕ್ರಮವನ್ನ ಉದ್ಘಾಟಿಸಲಿದ್ದಾರೆ. ನಂತರ ಮಧ್ಯಾಹ್ನ 12.05 ಕ್ಕೆ ಕೆಎಸ್ಒಯುನಿಂದ ಹುಣಸೂರು ರಸ್ತೆ ಮಾರ್ಗವಾಗಿ ಮೈಸೂರು ಹೆಲಿಪ್ಯಾಡ್ಗೆ ತಲುಪಿ, ಬಳಿಕ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 12.35 ಕ್ಕೆ ದಿಲ್ಲಿಗೆ ವಾಪಸ್ ಆಗಲಿದ್ದಾರೆ.