85 ಸಾವಿರ ಕೋಟಿ ರೂ. ಮೌಲ್ಯದ ಜಂಗಮವಾಣಿ ರಫ್ತು
ದೆಹಲಿ : ಮಾ. 31 ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಭಾರತವು 85,000 ಕೋಟಿ ರೂ.ಗಿಂತ ಹೆಚ್ಚಿನ ಮೊಬೈಲ್ ರಫ್ತು ಮಾಡಿದೆ ಎಂಬುದು ಅಂಕಿ ಅಂಶಗಳಿಂದ ದೃಢಪಟ್ಟಿದೆ. ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ( ಐಸಿಇಎ) ಐಎಎನ್‌ಎಸ್‌ಗೆ ಈ ಬಗ್ಗೆ ಮಾಹಿತಿ ಒದಗಿಸಿದ್ದು, ಸ್ಥಳೀಯ ಉತ್ಪಾದನೆಯತ್ತ ಸರ್ಕಾರದ ಪ್ರೋತ್ಸಾಹದಿಂದ ಉತ್ತೇಜನದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಅಂಕಿ ಅಂಶಗಳು ವಿವರಿಸಿವೆ.
ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಭಾರತದಿಂದ ಸ್ಮಾರ್ಟ್‌ಫೋನ್ ರಫ್ತುಗಳು ದ್ವಿಗುಣಗೊಂಡಿದೆ. ಐಸಿಇಎ ದತ್ತಾಂಶ ಪ್ರಕಾರ ಭಾರತ ಯುಎಇ, ಯುಎಸ್, ನೆದರ್ಲ್ಯಾಂಡ್ಸ್, ಯುಕೆ ಮತ್ತು ಇಟಲಿಗೆ ಮೊಬೈಲ್‌ಗಳನ್ನು ರಫ್ತು ಮಾಡುತ್ತಿದೆ. ಭಾರತದಲ್ಲಿ ಮಾರಾಟವಾಗುವ ಶೇಕಡಾ 97 ಕ್ಕಿಂತ ಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ಈಗ ಸ್ಥಳೀಯವಾಗಿ ಉತ್ಪಾದಿಸಲಾಗುತ್ತಿದೆ ಎಂದು ಅಂಕಿಅಂಶಗಳು ದೃಢಪಡಿಸಿವೆ. ಭಾರತ ಈಗ ವಿಶ್ವದ ಎರಡನೇ ಅತಿ ದೊಡ್ಡ ಮೊಬೈಲ್ ಫೋನ್ ತಯಾರಕ ರಾಷ್ಟ್ರವಾಗಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರ ಪ್ರಕಾರ, ದೇಶ ಮೊಬೈಲ್ ಫೋನ್ ಉತ್ಪಾದನೆಯಲ್ಲಿ ನೂತನ ಮೈಲಿಗಲ್ಲನ್ನು ದಾಟಲಿದೆ. ಈ ವರ್ಷ ದೇಶದ ಮೊಬೈಲ್ ರಫ್ತು 1 ಲಕ್ಷ ಕೋಟಿ ರೂ.ಗಳನ್ನು ಮೀರಲಿದೆ ಎಂದು ವಿವರಿಸಿದ್ದಾರೆ. 2027ರ ವೇಳೆಗೆ ಆಪಲ್‌ನ ಫೋನ್ ಉತ್ಪಾದನೆಯಲ್ಲಿ ಚೀನಾಕ್ಕೆ ಸರಿಸಮನಾಗಿ ದೇಶ ನಿಲ್ಲಲಿದೆ ಎಂದು ರಾಜೀವ್ ತಿಳಿಸಿದ್ದಾರೆ.
ಪ್ರಸ್ತುತ ಮೊಬೈಲ್ ಉತ್ಪಾದನೆ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಚೈನಾದಿಂದ ಹೊರಬಂದಿರುವ ಮೊಬೈಲ್ ಉತ್ಪಾದನಾ ಕಂಪನಿಗಳಿಗೆ ವಿಯೆಟ್ನಾಂ ಮತ್ತು ಭಾರತ ಶ್ರೇಷ್ಠ ಹೂಡಿಕೆ ತಾಣಗಳಾಗಿ ಮಾರ್ಪಟ್ಟಿವೆ. 2022 ರಲ್ಲಿ ಒಟ್ಟು ಐಫೋನ್ ಉತ್ಪಾದನೆಯ ಶೇ. 10-15 ಪಾಲನ್ನು ಭಾರತ ಪಡೆದಿದೆ.