ಗೋ ಗರ್ಭ ಅಣೆಕಟ್ಟು ದಾಟಿದ ತಿಮ್ಮಪ್ಪನ ದರ್ಶನದ ಸಾಲು
ಕೊಲ್ಲೂರು ಶ್ರೀ ಮೂಕಾಂಬಿಕೆ ಕ್ಷೇತ್ರದಲ್ಲಿ ಸಾಲುಗಟ್ಟಿ ನಿಂತ ಭಕ್ತಸಮೂಹ
ಪುತ್ತೂರು : ರಜೆಯ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಭಕ್ತಜನಸಾಗರವೇ ಹರಿದು ಬರುತ್ತಿದೆ. ಈ ವಾರಾಂತ್ಯದಲ್ಲಿ ಬರೋಬ್ಬರಿ ನಾಲ್ಕು ದಿನಗಳ ರಜೆ ಇರುವುದರಿಂದ ಅಧಿಕ ಸಂಖ್ಯೆಯಲ್ಲಿ ಜನರು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ.
ತಿರುಮಲದಲ್ಲಿ ದೇವರ ದರ್ಶನಕ್ಕೆ ಎರಡು ದಿನ ಬೇಕಾಗುವುದರಿಂದ ಟ್ರಾಫಿಕ್ ಅನ್ನು ಗಮನದಲ್ಲಿಟ್ಟುಕೊಂಡು ಭಕ್ತರು ತಮ್ಮ ಪ್ರವಾಸವನ್ನು ಯೋಜಿಸಬೇಕೆಂದು ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಕೋರಿದೆ. ತಿರುಮಲ ಶ್ರೀವಾರಿ ದರ್ಶನಕ್ಕೆ ಭಕ್ತಕೋಟಿ ಸಾಲುಗಟ್ಟಿ ನಿಂತಿದೆ. ಸತತ ರಜೆ ಇರುವ ಕಾರಣ ಭಕ್ತರ ದಂಡು ತಿರುಮಲದತ್ತ ನುಗ್ಗಿಬರುತ್ತಿದೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ಸಾರ್ವಜನಿಕ ದರ್ಶನದ ಕ್ಯೂ ಗೋ ಗರ್ಭ ಅಣೆಕಟ್ಟು ದಾಟಿ ಸಾಗಿದೆ. ಸದ್ಯ ತಿಮ್ಮಪ್ಪನ ದರ್ಶನಕ್ಕೆ 48 ಗಂಟೆ ಕಾಲಾವಧಿ ಬೇಕಾಗಿದೆ. ಇದರೊಂದಿಗೆ ತಿರುಮಲ ಬೆಟ್ಟದಲ್ಲಿ ಭಕ್ತ ಸಾಗರ ಪ್ರವಾಹೋಪಾದಿಯಲ್ಲಿದೆ. ಇದೇ ವೇಳೆ ಸರ್ವ ದರ್ಶನ ಸರತಿ ಸಾಲಿನಲ್ಲಿ ಟೋಕನ್ ರಹಿತ ಭಕ್ತರು ಸಂಯಮದಿಂದ ಇರುವಂತೆ ಟಿಟಿಡಿ ಅಧಿಕಾರಿಗಳು ಪದೇ ಪದೇ ಮನವಿ ಮಾಡುತ್ತಿದ್ದಾರೆ.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಜನಸಾಗರ
ಕೊಡಚಾದ್ರಿ ಶಿಖರದ ತಪ್ಪಲು ಪ್ರದೇಶದಲ್ಲಿ ಮೂಕಾಂಬಿಕಾ ದೇವಿಯ ದೇವಸ್ಥಾನವು ನೆಲೆಗೊಂಡಿದೆ. ಶಿವ ಮತ್ತು ಶಕ್ತಿ ಇಬ್ಬರನ್ನೂ ಸಂಯೋಜಿಸಿರುವ ಜ್ಯೋತಿರ್ಲಿಂಗದ ಸ್ವರೂಪದಲ್ಲಿ ಈ ದೇವತೆಯು ಕಂಡುಬರುತ್ತಾಳೆ.
ದಕ್ಷಿಣ ಭಾರತದ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕಳೆದ ಮೂರು ದಿನಗಳಲ್ಲಿ 25,000 ಕ್ಕೂ ಅಧಿಕ ಜನರು ಭೇಟಿ ನೀಡಿದ್ದು ಶ್ರೀ ಕ್ಷೇತ್ರದಲ್ಲಿ ಭಕ್ತ ಸಮೂಹವೆ ಕಂಡು ಬಂದಿದೆ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತುಕೊಂಡು ದೇವಿಯ ದರ್ಶನವನ್ನು ಕಣ್ತುಂಬಿಕೊಂಡಿದ್ದಾರೆ. ಕುಡಿಯುವ ನೀರು,ಪಾರ್ಕಿಂಗ್, ವಾಸ್ತವ್ಯದ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.