ಬಂಟ್ವಾಳ : ಕಾರೊಂದು ಡಿವೈಡರ್ ಗೆ ಡಿಕ್ಕಿ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಎ. 7 ರಂದು ರಾಷ್ಟ್ರೀಯ ಹೆದ್ದಾರಿ ಮಂಗಳೂರು – ಬೆಂಗಳೂರು ರಸ್ತೆಯ ಬಿಸಿರೋಡಿನಲ್ಲಿ ಸಂಭವಿಸಿದೆ.
ನಂದರಬೆಟ್ಟು ನಿವಾಸಿ ಸದಾಶಿವ ಆಚಾರ್ಯ (77) ಎಂಬವರೇ ಮೃತಪಟ್ಟ ವ್ಯಕ್ತಿ.
ಮಂಗಳೂರು – ಬೆಂಗಳೂರು ರಸ್ತೆಯ ಬಿಸಿರೋಡಿನಲ್ಲಿ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ, ಸದಾಶಿವ ಆಚಾರ್ಯ ಮೃತಪಟ್ಟು, ಅವರ ಮೊಮ್ಮಗ ಚಾಲಕ ಅಕಾಶ್, ಅಳಿಯ ಸುರೇಶ್ ಆಚಾರ್ಯ, ಮಗ ಗಣೇಶ್ ಆಚಾರ್ಯ ಅವರು ಅಲ್ಪಸ್ವಲ್ಪ ಗಾಯಗಳಿಂದ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ಎರಿಟಿಗ ಕಾರಿನಲ್ಲಿ ಪುತ್ತೂರಿನಿಂದ ದೇವರ ಕಾರ್ಯದಲ್ಲಿ ಭಾಗಿಯಾಗಿ ವಾಪಾಸು ಮನೆಗೆ ಬರುವ ವೇಳೆ ಬಿಸಿರೋಡಿನ ಅಜ್ಜಿಬೆಟ್ಟು ಕ್ರಾಸ್ ಸಮೀಪದಲ್ಲಿ ಈ ಅವಘಡ ಸಂಭವಿಸಿದೆ. ಚಾಲಕನ ಅಜಾಗರೂಕತೆಯಿಂದ ಕಾರು ಡಿವೈಡರ್ ಗೆ ಗುದ್ದಿ ಬಳಿಕ ಪಲ್ಟಿಯಾಗಿದೆ. ಕಾರಿನಲ್ಲಿ ಚಾಲಕ ಸೇರಿ ನಾಲ್ಕು ಜನ ಒಂದೇ ಮನೆಯವರು ಪ್ರಯಾಣಿಸುತ್ತಿದ್ದರು.
ಅಪಘಾತದಲ್ಲಿ ಗಂಭೀರವಾಗಿ ತಲೆಗೆ ಗಾಯವಾಗಿದ್ದ ಸದಾಶಿವ ಅವರನ್ನು ಕೈಕಂಬ ಪರ್ಲಿಯಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಮೃತಪಟ್ಟ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.
ಈ ಕುರಿತು ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಸ್.ಐ.ಮೂರ್ತಿ ಅವರು ಬೇಟಿ ನೀಡಿದ್ದಾರೆ