ಪುತ್ತೂರು: ಆಮ್ ಆದ್ಮಿ ಪಕ್ಷ ಕಳೆದ 10 ವರ್ಷಗಳಲ್ಲಿ ಒಂದು ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಂಡಿದ್ದು, ರಾಷ್ಟ್ರಾದ್ಯಂತ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಈಗಾಗಲೇ ದ.ಕ.ಜಿಲ್ಲೆಯಲ್ಲಿ ಐದು ಸ್ಥಾನಗಳಲ್ಲಿ ಅಭ್ಯರ್ಥಿಯ ಪಟ್ಟಿ ಪ್ರಕಟಗೊಳಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ ತಿಳಿಸಿದ್ದಾರೆ.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಪುತ್ತೂರಿನ ಸರಕಾರ ಆಸ್ಪತ್ರೆ ಮೇಲ್ದರ್ಜೆ ಸಹಿತ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಬೆಂಬಲ ನೀಡುವ ಮೂಲಕ ಗುಣಮಟ್ಟದ ಆರೋಗ್ಯ ಹಾಗೂ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಗುರುತಿಸಲ್ಪಡುತ್ತಿದೆ.
ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯ ಮೂಲಭೂತ ಹಕ್ಕು ಎಂಬ ಪ್ರತಿಪಾದನೆಯೊಂದಿಗೆ ಜನತೆಗೆ ಅದನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡಲಿದ್ದೇವೆ. ಈ ನಿಟ್ಟಿನಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಡಾ.ಬಿ.ಕೆ.ವಿಶುಕುಮಾರ್ ಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೇವೆ. ಉಳಿದಂತೆ ಮಂಗಳೂರು ದಕ್ಷಿಣ ಸಂತೋಷ್ ಕಾಮತ್, ಉತ್ತರ ಸಂದೀಪ್ ಶೆಟ್ಟಿ, ಸುಳ್ಯದಲ್ಲಿ ಸುಮನಾ ಬೆಳ್ಳಾರ್ ಕರ್, ಮೂಡಬಿದ್ರೆಗೆ ವಿಜಯ ವಠಲನಾಥ ಶೆಟ್ಟಿ, ಅಭ್ಯರ್ಥಿಯಾಗಿ ಆಯ್ಮೆಗೊಂಡಿದ್ದಾರೆ ಎಂದು ತಿಳಿಸಿದರು.
ಪಕ್ಷದ ಸದಸ್ಯತ್ವಕ್ಕೆ ಒತ್ತು ನೀಡದೆ ಕಾರ್ಯಕರ್ತರಾಗಲು ಜನರೇ ನಮ್ಮ ಬಳಿ ಬರುವ ರೀತಿಯಲ್ಲಿ ನಾವು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇವೆ. ಚುನಾವಣೆ ಪ್ರಕ್ರಿಯೆ ವೇಗ ಪಡೆಯುತ್ತಿದ್ದಂತೆ ರಾಷ್ಟ್ರೀಯ ನಾಯಕರು ಪುತ್ತೂರಿಗೆ ಆಗಮಿಸಲಿದ್ದಾರೆ. ಇದಕ್ಕಾಗಿ ವೇಳಾ ಪಟ್ಟಿಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ಪಕ್ಷದ ಪ್ರಣಾಳಿಕೆ ಹಿನ್ನಲೆಯಲ್ಲಿ ಕರ್ನಾಟಕ, ಪ್ರಾದೇಶಿಕ ಹಾಗೂ ಪುತ್ತೂರಿಗೆ ಹಲವು ಗ್ಯಾರಂಟಿಗಳ ಪ್ರಕಟಣೆಯನ್ನು ಮುಂದಿಟ್ಟ ಅವರು, ಕರ್ನಾಟಕದ ಗ್ಯಾರಂಟಿಯಾಗಿ ಶೂನ್ಯ ಭ್ರಷ್ಟಾಚಾರ, ವಿದ್ಯುಚ್ಛಕ್ತಿ., ಶಿಕ್ಷಣ, ಆರೋಗ್ಯ, ಉದ್ಯೋಗವಕಾಶ, ಮಹಿಳೆಯರಿಗೆ ಸರಕಾರಿ ಉದ್ಯೋಗದಲ್ಲಿ ಶೇ.32 ವಿನಾಯಿತಿ, ರೈತರಿಗೆ, ಸಮಾಜ ಕಲ್ಯಾಣ, ನಾಗರಿಕ ಸೇವೆ, ಉದ್ಯೋಗ ಖಾತರಿ ಹೀಗೆ ಹತ್ತು ಗ್ಯಾರಂಟಿಗಳ ಪಟ್ಟಿಯನ್ನು ನೀಡಿದರು. ಅಲ್ಲದೆ ಪ್ರಾದೇಶಿಕ ಅಭಿವೃದ್ಧಿ ಹಿನ್ನಲೆಯಲ್ಲಿ ಎಲ್ಲಾ ಪ್ರದೇಶಗಳ ಅಭಿವೃದ್ಧಿಗೆ ಖಾತರಿ, ಪ್ರತೀ ಪ್ರದೇಶಕ್ಕೆ 5 ಕೋಟಿ ಮೂಲಸೌಕರ್ಯ ಅಭಿವೃದ್ಧಿ ನಿಧಿ, ರಾಜ್ಯಾದ್ಯಂತ 10 ಶೈಕ್ಷಣಿಕ ಸಂಕೀರ್ಣ, 10 ಆರೋಗ್ಯ ಸಂಕೀರ್ಣ, 10 ಪ್ರವಾಸೋದ್ಯಮ ಸಂಕೀರ್ಣ ಹಾಗೂ ಉತ್ತಮ ಗುಣಮಟ್ಟದ ರಸ್ತೆಗಳ ಸಂಪರ್ಕ ಗ್ಯಾರಂಟಿಯ ಪಟ್ಟಿ ನೀಡಿದರು. ಪುತ್ತೂರಿಗಾಗಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಉತ್ತೇಜನ, ಅಡಕೆ ಹಳದಿ ರೋಗ ನಿರ್ಮೂಲನೆಗಾಗಿ ಉನ್ನತ ಮಟ್ಟದ ಸಂಶೋಧನೆ, ತೆಂಗಿನ ಬೆಳೆಗೆ ಬೆಂಬಲ ಬೆಲೆ ಸಹಿತ ರಫ್ತು ಘಟಕ ಸ್ಥಾಪನೆ, ರಬ್ಬರ್ ಉತ್ಪನ್ನಗಳ ಉತ್ಪಾದನೆಗೆ ಉತ್ತೇಜನ, ಸಿದ್ಧ ಉಡುಪುಗಳ ಉತ್ಪಾದನಾ ಘಟಕ ಸ್ಥಾಪನೆ, ಹೈನುಗಾರಿಕೆಗೆ ಉತ್ತೇಜನ, ಸಾವಯವ ಉತ್ಪಾದನಾ ಘಟಕ ಸ್ಥಾಪನೆ ಹಾಗೂ ಅಸಂಘಟಿತ ಕಾರ್ಮಿಕರಿಗೆ ಸರಕಾರ ಸೌಲಭ್ಯದ ಗ್ಯಾರಂಟಿ ಪಟ್ಟಿ ಬಿಡುಗಡೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪುತ್ತೂರು ಅಭ್ಯರ್ಥಿ ಡಾ.ಬಿ.ಕೆ.ವಿಶುಕುಮಾರ್ ಗೌಡ, ಪ್ರಮುಖರಾದ ಜನಾರ್ದನ ಬಂಗೇರ, ಮಹಮ್ಮದಾಲಿ, ಪುರುಷೋತ್ತ,ಮ ಕೋಲ್ಪೆ, ಉಪಸ್ಥಿತರಿದ್ದರು.