ಬಿಸಿಲಿನ ತಾಪ ಏರಿದಂತೆ ನಮ್ಮ ದೇಹ ಅದಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತದೆ. ಸೆಕೆಗಾಲದಲ್ಲಿ ವಾತ ದೋಷವು ಉಲ್ಬಣಗೊಳ್ಳುತ್ತದೆ. ಅಲ್ಪ ಶರೀರ ಬಲ ಹಾಗೂ ದುರ್ಬಲ ಜೀರ್ಣ ಶಕ್ತಿಯಿಂದ ದೇಹವು ಜರ್ಜರಿತವಾಗುತ್ತದೆ. ಇದನ್ನೆಲ್ಲಾ ತಡೆಯಲು ಇಲ್ಲಿದೆ ಕೆಲವು ಟಿಪ್ಸ್
• ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಪ್ರಖರ ಸೂರ್ಯ ಕಿರಣವಿರುವುದರಿಂದ ಆದಷ್ಟು ಬಿಸಿಲಿನಲ್ಲಿ ಸಮಯ ಕಳೆಯಬೇಡಿ. ಅನಿವಾರ್ಯವಿದ್ದರೆ ತಲೆಗೆ ಕ್ಯಾಪ್ ಅಥವಾ ಛತ್ರಿಯನ್ನು ಉಪಯೋಗಿಸಿ. ಕಣ್ಣಿಗೆ ಗಾಗಲ್ ಹಾಕಿ. ತಿಳಿ ಬಣ್ಣದ ಬಟ್ಟೆಯನ್ನು ಧರಿಸಿ. ಹತ್ತಿ ಬಟ್ಟೆಯನ್ನು ಧರಿಸಿದರೆ ಉತ್ತಮ.
• ಕಣ್ಣಿನ ರಕ್ಷಣೆ ಬಹಳ ಮುಖ್ಯ. ಹೊರಗಿನಿಂದ ಬಂದ ತಕ್ಷಣ ಕೆಲವರು ಕಣ್ಣನ್ನು ನೀರಿನಿಂದ ತೊಳೆಯುತ್ತಾರೆ ಅದು ಕಣ್ಣಿಗೆ ಹಾನಿ ಉಂಟು ಮಾಡುತ್ತದೆ. ಹೊರಗಿನಿಂದ ಬಂದ 20 ನಿಮಿಷಗಳ ಬಳಿಕ ಕಣ್ಣನ್ನು ತಣ್ಣೀರಿನಿಂದ ತೊಳೆಯಿರಿ.
• ಬೇಸಿಗೆಯಲ್ಲಿ ನಮ್ಮ ದೇಹದ ನೀರಿನ ಅಂಶ ಕಡಿಮೆಯಾಗುತ್ತದೆ. ಬೇಸಿಗೆಯಲ್ಲಿ ಐಸ್‌ಕ್ರೀಮ್, ಕೋಡ್‌ರಿಂಗ್ಸ್, ಕಾರ್ಬೋಹೈಡ್ ಪಾನೀಯಗಳು ದೇಹಕ್ಕೆ ಹಾನಿ ಉಂಟು ಮಾಡುತ್ತವೆ. ಇದರ ಬದಲು ನೈಸರ್ಗಿಕವಾಗಿ ದೊರೆಯುವ ಪಾನೀಯ ಸೇವಿಸಿ. ಎಳನೀರು, ಬಾರ್ಲಿ ನೀರು ಒಳ್ಳೆಯದು. ಕುಡಿಯುವ ನೀರಿನಲ್ಲಿ ಲಾವಂಚದ ಬೇರು ಅಥವಾ ಚೂರ್ಣವನ್ನು ಹಾಕಿ ಇಡಿರಿ. ಇದನ್ನು ನಿತ್ಯ ಕುಡಿಯಿರಿ. ರಾತ್ರಿ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ನೆನೆಸಿ ಮರುದಿನ ಬೆಳಿಗ್ಗೆ ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
• ಆಹಾರದಲ್ಲಿ ದ್ರವ ಆಹಾರ ಅಧಿಕ ಸೇವಿಸಿದರೆ ದೇಹಕ್ಕೆ ಹಿತ. ತುಪ್ಪ ಒಳ್ಳೆಯದು. ದಿನಕ್ಕೆ ಒಂದು ಚಮಚ ತುಪ್ಪ ಆಹಾರದಲ್ಲಿ ಬಳಸಿ ಜಾಸ್ತಿ ಸೇವಿಸುವುದು ಬೇಡ. ಗೋಧಿ, ಅಕ್ಕಿ, ಬಾರ್ಲಿ, ಹೆಸರುಬೇಳೆ, ಹಾಲು, ಹಣ್ಣುಗಳು ಒಳ್ಳೆಯದು. ಬೆಲ್ಲದ ಪಾನಕ, ಲಿಂಬೆ ಶರ್ಬತ್, ಕೋಕಂ ಶರಬತ್ , ಕಬ್ಬಿನ ಹಾಲು, ರಾಗಿ ಜ್ಯೂಸ್, ಹೆಸರುಕಾಳಿನ ಜ್ಯೂಸ್ ಬಳಸಿ. ಮಡಕೆಯಲ್ಲಿ ಶೇಖರಿಸಿದ ನೀರು ಆರೋಗ್ಯಕ್ಕೆ ಒಳ್ಳೆಯದು. ಮದ್ಯ ಸೇವನೆ ಕಡಿಮೆ ಮಾಡಿ. ಉಪ್ಪು, ಖಾರ, ಹುಳಿ ಪದಾರ್ಥ ಸೇವಿಸುವುದು ಕಡಿಮೆ ಮಾಡಿ. ತರಕಾರಿ ಸೂಪ್, ಜ್ಯೂಸ್ ಕುಡಿಯಿರಿ. ಸುಪಾಚ್ಯ ಹಾಗೂ ಬಿಸಿಯಾದ ಆಹಾರ ಸೇವಿಸಿ. ಆಹಾರದ ಪ್ರಮಾಣ ಕಡಿಮೆ ಇರಲಿ.
• ಮಧ್ಯಾಹ್ನದ ಹೊತ್ತು ಸ್ವಲ್ಪ ನಿದ್ದೆ ಮಾಡಬಹುದು. ಬೇಸಿಗೆಯಲ್ಲಿ ಅದು ಅಗತ್ಯ. ಬೇರೆ ಕಾಲದಲ್ಲಿ ಮಧ್ಯಾಹ್ನದ ಹೊತ್ತು ನಿದ್ದೆ ಮಾಡುವುದು ಆಯುರ್ವೇದದಲ್ಲಿ ನಿಷೇಧಿಸಿದೆ.
• ದೇಹಕ್ಕೆ ಚಂದನದ ಕಲ್ಕ ಹಚ್ಚುವುದು, ಸುಗಂಧ ಯುಕ್ತ ಹೂವಿನ ಮಾಲೆ ಧರಿಸುವುದು ಆಯುರ್ವೇದದಲ್ಲಿ ಹೇಳಿದೆ. ಗಿಡಗಳ ಮಧ್ಯೆ ಸಮಯವನ್ನು ಕಳೆಯುವುದು ಒಳ್ಳೆಯದು. ಮನೆಯ ಸುತ್ತ ಗಿಡಗಳನ್ನು ಬೆಳೆಸಿ. ಇದು ಮನೆಯನ್ನು ತಂಪಾಗಿಸಲು ಸಹಾಯ ಮಾಡುತ್ತದೆ ಆರೋಗ್ಯಕರ ಕೂಡ.
• ಅಧಿಕ ವ್ಯಾಯಾಮ, ಅಧಿಕ ಶಾರೀರಿಕ ಶ್ರಮ, ದೇಹವನ್ನು ದಣಿಯುಂತೆ ಮಾಡುವ ಯಾವುದೇ ಕಾರ್ಯವನ್ನು ಮಾಡದಿರಿ.
• ಬೇಸಿಗೆಯಲ್ಲಿ ತ್ವಚೆಯ ಆರೈಕೆ ಬಹಳ ಮುಖ್ಯ. ಸೆಕೆಗೆ ತ್ವಚೆಯು ಶುಷ್ಕಗೊಳ್ಳುತ್ತದೆ. ತೆಂಗಿನಎಣ್ಣೆಯ ಅಭ್ಯಂಗ, ರೋಸ್ ವಾಟರ್, ಅಲೋವೆರಾ ರಸ ಹಚ್ಚಬಹುದು.ಇದನ್ನೆಲ್ಲ ಪಾಲಿಸಿ ಆರೋಗ್ಯದಿಂದಿರಿ.
✒️ಡಾ.ಹರ್ಷಾ ಕಾಮತ್
ಖ್ಯಾತ ಆಯುರ್ವೇದ ವೈದ್ಯರು.