ಪುತ್ತೂರು: ಹೊಸತನದ ಹುಡುಕಾಟದ ಕಲಿಕೆಯೇ ಇಂದಿನ ಅಗತ್ಯ ಎಂದು ಕರ್ನಾಟಕದ ಹಿರಿಯ ಶೈಕ್ಷಣಿಕ ಚಿಂತಕ ಕಲಾ ನಿಧಿ ಗೋಪಾಡ್ಕರ್ ಮಂಗಳೂರು ಹೇಳಿದರು.
ಅವರು ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರ, ಸಂಯುಕ್ತ ಆಶ್ರಯದಲ್ಲಿ ಪುಣ್ಚಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಣ್ಚಪ್ಫಾಡಿ ಇಲ್ಲಿ ನಡೆದ ಮೂರು ದಿನಗಳ ಮಕ್ಕಳರಂಗ ಶಿಬಿರ ಬಣ್ಣದ ಬಣ್ಣವನ್ನು ಉದ್ಘಾಟಿಸಿ ಮಾತನಾಡಿದರು.
ಕಲಿಕೆ ಎನ್ನುವುದು ಮಕ್ಕಳ ಮನಸ್ಸಿನ ಹುಡುಕಾಟ ಮಕ್ಕಳ ಸ್ವತಹ ಅನುಭವಿಸಿದಾಗ ಮಾತ್ರ ಕಲಿಕೆ ಉಂಟಾಗಲು ಸಾಧ್ಯ. ಅನುಭವದ ಸಾಧ್ಯತೆಯನ್ನು ಮಕ್ಕಳ ಮುಂದೆ ತೆರೆದಿಡುವುದೇ ಕಲಿಕೆಯ ಸಾಧ್ಯತೆ. ಇಂತಹ ಮಕ್ಕಳ ಶಿಬಿರಗಳು ಹೊಸತನದ ಹುಡುಕಾಟಕ್ಕೆ ದಾರಿ ಎಂದು ಅವರು ಹೇಳಿದರು.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಸೃಜನಶೀಲತೆ ಎನ್ನುವುದೇ ಕಲಿಕೆಯ ಮೂಲ. ಎಲ್ಲ ಮಕ್ಕಳನ್ನು ಸೃಜನಶೀಲರನ್ನಾಗಿಸುವುದು ಪ್ರತಿಯೊಬ್ಬ ಶಿಕ್ಷಕನ ಕರ್ತವ್ಯ ವಾಗಬೇಕು. ಇಂತಹ ಶಿಬಿರಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.
ಸವಣೂರು ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿ ಕುಶಾಲಪ್ಪ ಬಿ. ಮಾತನಾಡಿ, ಅನುಭವದ ಕಲಿಕೆಯನ್ನು ನೀಡುವುದು ಶಾಲಾ ಪಠ್ಯದ ಮೂಲ ಮಂತ್ರವಾಗಬೇಕು ಎಂದು ಹೇಳಿದರು
ಅತಿಥಿಯಾಗಿ ಕೃಷ್ಣಕುಮಾರ್ ರೈ ಮಾತನಾಡಿ, ಶಾಲೆಗಳು ಮಕ್ಕಳ ಚಟುವಟಿಕೆಯ ಕೇಂದ್ರಗಳಾಗಬೇಕು ಆಗಾಗ ವಿಭಿನ್ನ ವಿಶೇಷ ಚಟುವಟಿಕೆಗಳು ಶಾಲೆಗಳಲ್ಲಿ ನಡೆಯುತ್ತಿರಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಕುಶಲ ಪಿ ರೈ ಪುಣ್ಚಪ್ಪಾಡಿ, ವಿಶಾಖ್ ರೈ ತೋಟತ್ತಡ್ಕ, ಎಸ್.ಡಿ.ಎಮ್.ಸಿ. ಸದಸ್ಯೆ ಕಾವೇರಿ ಅಜಿಲೋಡಿ, ಮುಂತಾದವರು ಉಪಸ್ಥಿತರಿದ್ದರು.
ಹರಡಿದ ಬಾಳೆ ಎಲೆಯಲ್ಲಿ ಪುಷ್ಪದ ಹೆಸರುಗಳಿಂದ ಬಣ್ಣದ ಬಣ್ಣ ಎಂಬ ಅಕ್ಷರಗಳನ್ನು ಮೂಡಿಸುವುದರ ಮೂಲಕ ಉದ್ಘಾಟನೆಗೊಂಡ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ರಶ್ಮಿತಾ ನರಿಮೊಗರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಪದವೀಧರ ಶಿಕ್ಷಕಿ ಫ್ಲಾವಿಯಾ ವಂದಿಸಿದರು. ಅತಿಥಿ ಶಿಕ್ಷಕಿ ಚಂದ್ರಿಕಾ, ಗೌರವ ಶಿಕ್ಷಕಿ ತೃಪ್ತಿ ಸಹಕರಿಸಿದರು.