ರಾಷ್ಟ್ರವೇ ಮೊದಲು, ಉಳಿದೆಲ್ಲವೂ ನಂತರ – ಕ್ಯಾಪ್ಟನ್ ಪವನ್ ಕುಮಾರ್

ಉಗ್ರರ ಜತೆ ಹೋರಾಡಿ ಪ್ರಾಣ ಕಳೆದುಕೊಂಡಾಗ ಆ ಸೈನಿಕನ ವಯಸ್ಸು ಕೇವಲ 23

ಕಿಸಿಕೊ ರಿಸರ್ವೇಶನ್ ಚಾಹಿಯೆ, ಕಿಸಿಕೋ ಆಜಾದಿ.
ಭಾಯಿ ಹಮೇ ಕುಚ್ ನಹೀಂ ಚಾಹಿಯೆ ಬಸ್ ಅಪ್ನಿ ರಜಾಯಿ.
(ಕೆಲವರಿಗೆ ಮೀಸಲಾತಿ ಬೇಕು, ಇನ್ನೂ ಕೆಲವರಿಗೆ ಸ್ವಾತಂತ್ರ್ಯ. ಸೋದರ ನನಗೆ ಬೇರೇನೂ ಬೇಡ, ಬೆಚ್ಚನೆ ಹೊದಿಕೆ ಬಿಟ್ಟು)
ಆ ಸೈನಿಕ ಹುತಾತ್ಮನಾಗುವ ಕೆಲವು ನಿಮಿಷ ಮೊದಲು ತನ್ನ ಫೇಸ್‌ಬುಕ್ಕಲ್ಲಿ ಬರೆದುಕೊಂಡ ಕವಿತೆಯ ಸಾಲುಗಳು ಇವು. ದೇಶದಲ್ಲಿ ನಡೆದ ಕೆಲವು ಘಟನೆಗಳು ಅವರ ಮನಸನ್ನು ತಲ್ಲಣ ಮಾಡಿದ್ದವು.

ಉಗ್ರನ ಪರವಾಗಿ ನಿಂತಿದ್ದ ಜೆಎನ್‌ಯು ವಿದ್ಯಾರ್ಥಿಗಳು































 
 

ಸಂಸತ್ ಭವನದ ಮೇಲೆ ದಾಳಿಯ ಸಂಚು ರೂಪಿಸಿದ್ದ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿ ಆಗಲೇ ಮೂರು ವರ್ಷ ಆಗಿತ್ತು. ಆಗ ದಿಲ್ಲಿಯ ಜೆಎನ್‌ಯು ವಿದ್ಯಾರ್ಥಿಗಳು ಅಫ್ಜಲ್ ಗುರುವಿನ ಪರವಾಗಿ ಘೋಷಣೆ ಕೂಗುತ್ತ ದೇಶ ತುಕ್ಡೆ ತುಕ್ಡೆ ಹೋಂಗೆ ಎಂದು ಘೋಷಣೆ ಕೂಗಿದ್ದರು. ಈ ಘಟನೆ ಆ ಸೈನಿಕನ ಹೃದಯವನ್ನು ಹಿಂಡಿತ್ತು. ನಾವಿಲ್ಲಿ ದೇಶಕ್ಕಾಗಿ ಪ್ರಾಣ ಪಣವಾಗಿಟ್ಟು ಹೋರಾಡುತ್ತಿರುವ ಸಂದರ್ಭ ನಮ್ಮ ರಾಷ್ಟ್ರದ ಯುವಕರು ಯಾಕೆ ದೇಶದ್ರೋಹದ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಯೋಚನೆ ಮಾಡಿ ಆ ಸೈನಿಕನು ತುಂಬಾ ನೊಂದುಕೊಂಡಿದ್ದರು.

ಆ ಸೈನಿಕನ ಹೆಸರು ಕ್ಯಾಪ್ಟನ್ ಪವನ್ ಕುಮಾರ್

ಮೂಲತಃ ಹರ್ಯಾಣ ರಾಜ್ಯದ ಜಿಂಧ್ ಜಿಲ್ಲೆಯವರು. ಸ್ವಂತ ಆಸಕ್ತಿಯಿಂದ ಸೇನೆಗೆ ಸೇರಿದವರು. ಅಪ್ಪಟ ರಾಷ್ಟ್ರಪ್ರೇಮಿ. ಮರೂನ್ ಬಣ್ಣದ ಸಮವಸ್ತ್ರ, ಬಲಿದಾನ್ ಬ್ಯಾಜ್ ಧರಿಸಿ ಓಡಾಡುವುದೆಂದರೆ ಆತನ ಎದೆ ಉಬ್ಬುತ್ತಿತ್ತು. ಮರುಭೂಮಿಯಲ್ಲಿ ಯುದ್ಧ ಮಾಡುವ ತರಬೇತಿ ಪಡೆದ ಪಡೆಯಲ್ಲಿ ಕಾರ್ಯಾಚರಣೆ ಮಾಡುತ್ತಿದ್ದರು. ಪ್ರತಿಯೊಬ್ಬ ಸೈನಿಕನ ಜೀವನದಲ್ಲಿ ಅತ್ಯಂತ ಮಹತ್ವದ ಒಂದು ದಿನ ಬಂದೇ ಬರುತ್ತದೆ. ಹಾಗೆಯೇ ಕ್ಯಾಪ್ಟನ್ ಪವನ್ ಕುಮಾರ್ ಅವರ ಜೀವನದಲ್ಲಿಯೂ ಅಂತಹ ಒಂದು ದಿನ ಬಂದೇ ಬಿಟ್ಟಿತು.

ಅಂದು ಫೆಬ್ರುವರಿ 20, 2019

ಉಗ್ರರು ಜಮ್ಮು ಕಾಶ್ಮೀರದ ಪಾಂಪೋರೆ ಎಂಬಲ್ಲಿ CRPF ಪೊಲೀಸ್ ಪಡೆಯ ಮೇಲೆ ದಾಳಿ ಮಾಡಿ ನಾಲ್ವರು ಯೋಧರನ್ನು ಕೊಂದು ಹಾಕಿದ್ದರು. ನಮ್ಮ ಯೋಧರಿಂದ ಪ್ರತಿ ದಾಳಿ ಆರಂಭ ಆದಾಗ ಉಗ್ರರು ಅಲ್ಲಿಯೇ ಇದ್ದ ಒಂದು ಬಹುಮಹಡಿಯ ಕಟ್ಟಡದಲ್ಲಿ ನುಸುಳಿ ಅಡಗಿ ಕುಳಿತಿದ್ದರು. ಅದೇ ಕಟ್ಟಡದಲ್ಲಿ ಕಾಶ್ಮೀರದ ನೂರು ಯುವಕರಿಗೆ ಸ್ವೋದ್ಯೋಗದ ತರಬೇತಿ ನೀಡಲಾಗುತ್ತಿತ್ತು. ಉಗ್ರರು ಅವರ ಮೇಲೆ ದಾಳಿ ಮಾಡಿದ್ದರೆ ದೇಶದಾದ್ಯಂತ ಕ್ಷೋಭೆ ಉಂಟಾಗುತ್ತಿತ್ತು. ಅತ್ಯಂತ ನಾಜೂಕಿನ ಸನ್ನಿವೇಶ ಅದು. ಯಾಕೆಂದರೆ ಉಗ್ರರ ಬಳಿ ಅತ್ಯಂತ ಮಾರಕವಾದ ಆಯುಧಗಳು ಇದ್ದವು.
ತನ್ನ ಮೇಲಧಿಕಾರಿಗಳಿಂದ ಟಾಸ್ಕ್ ಪಡೆದ ಕ್ಯಾಪ್ಟನ್ ಪವನ್ ಕುಮಾರ್ ಒಂದಿಷ್ಟೂ ವಿಳಂಬ ಮಾಡದೆ ಆ ಕಟ್ಟಡದ ಕಡೆಗೆ ಸೇನೆಯ ಜೀಪಿನಲ್ಲಿ ಧಾವಿಸಿದರು.

ದಾರಿಯ ಮಧ್ಯೆ ಅವರಿಗೆ ನೂರಾರು ಅಡ್ಡಿಗಳು

ಜೀಪು ಪಾಂಪೋರೆಯ ಕಡೆಗೆ ಹೋಗುತ್ತಿದ್ದಾಗ ಜೋರಾದ ಮಳೆ ಸುರಿಯಲು ಆರಂಭವಾಯಿತು. ರಸ್ತೆಯ ಹೊಂಡದಲ್ಲಿ ಅವರ ಜೀಪಿನ ಚಕ್ರ ಹೂತು ಹೋಯಿತು. ಜಪ್ಪಯ್ಯ ಅಂದರೂ ಚಕ್ರ ಮೇಲೆರಲಿಲ್ಲ. ಇನ್ನೊಬ್ಬ ಸೈನಿಕ ಮೇಜರ್ ತುಷಾರ್ ಮತ್ತು ಕ್ಯಾಪ್ಟನ್ ಪವನ್ ಕುಮಾರ್ ಒಂದು ಗಂಟೆಗೂ ಅಧಿಕ ಹೊತ್ತು ತಮ್ಮ ತ್ರಾಣವನ್ನೆಲ್ಲ ಬಸಿದು ಚಕ್ರವನ್ನು ಮೇಲಕ್ಕೆತ್ತಿದರು. ಅವರಿಬ್ಬರ ಡ್ರೆಸ್ ಕೆಸರಲ್ಲಿ ಮುಳುಗಿ ಹೋಗಿತ್ತು. ಅವರಿಗೆ ಸಮೀಪದ ಸೇನಾನೆಲೆಗೆ ಹೋಗಿ ಡ್ರೆಸ್ ಬದಲಾವಣೆ ಮಾಡಿಕೊಂಡು ಬರಲು ಸೂಚನೆ ದೊರಕಿತು. ಆದರೆ ಆಗಲೇ ತಡವಾಗಿದೆ ಮತ್ತು ಕತ್ತಲೆಯು ಆವರಿಸುತ್ತಿದೆ ಎಂಬ ಕಾರಣಕ್ಕೆ ಕ್ಯಾಪ್ಟನ್ ಪವನ್ ಕುಮಾರ್ ಅದೇ ಕೆಸರಿನಲ್ಲಿ ಮುಳುಗಿ ಹೋಗಿದ್ದ ಡ್ರೆಸ್ಸಿನಲ್ಲಿ ಗಮ್ಯದ ಕಡೆಗೆ ನುಗ್ಗಿದ್ದರು. ಇನ್ನೇನು ಅವರು ಉಗ್ರರು ಅಡಗಿ ಕೂತಿದ್ದ ಕಟ್ಟಡವನ್ನು ಸಮೀಪಿದರು ಎನ್ನುವಷ್ಟರಲ್ಲಿ ಅವರ ಜೀಪಿನ ಮೇಲೆ ಕಲ್ಲಿನ ಮಳೆಯೇ ಸುರಿಯಿತು. ಈ ಬಾರಿ ಕಲ್ಲೆಸೆದವರು ಜಮ್ಮು ಕಾಶ್ಮೀರದ ದೇಶದ್ರೋಹಿ ಯುವಕರು. ಅದನ್ನು ತಪ್ಪಿಸಿಕೊಂಡು ಅವರ ಜೀಪು ಆ ಉಗ್ರರಿದ್ದ ಕಟ್ಟಡದ ಬುಡಕ್ಕೆ ಬಂದಿತ್ತು.

ಕತ್ತಲೆಯಲ್ಲಿ ಜೀಪ್ ಮೇಲೆ ಸುರಿಯಿತು ಉಗ್ರರ ಗ್ರೇನೆಡಗಳು

ಆ ಕಟ್ಟಡದ ಮೇಲಿನ ಮಹಡಿಯಲ್ಲಿ ಅಡಗಿ ಕುಳಿತವರು ಮೂವರು ಉಗ್ರರು. ಜೀಪು ಕಟ್ಟಡದ ಬುಡಕ್ಕೆ ಬಂದಂತೆ ಅವರು ಜೀಪಿನ ಮೇಲೆ ಗ್ರೆನೇಡ್ ದಾಳಿ ನಡೆಸಿದರು. ಕತ್ತಲೆಯಲ್ಲಿ ಏನೂ ಕಾಣುತ್ತಿರಲಿಲ್ಲ. ಜತೆಗಿದ್ದ ಸೈನಿಕರು ರಾತ್ರಿ ಕಳೆದು ಹಗಲಾಗುವ ತನಕ ಕಾಯೋಣ ಎಂದು ಹೇಳಿದಾಗ ಕ್ಯಾಪ್ಟನ್ ಪವನ್ ಕುಮಾರ್ ಒಪ್ಪಲೇ ಇಲ್ಲ. ಆದಷ್ಟು ಬೇಗ ಉಗ್ರರ ಸೊಕ್ಕಡಗಿಸಬೇಕು ಎನ್ನುವುದು ಅವರ ವಾದವಾಗಿತ್ತು.
ಹಿಂಬದಿಯ ಮೆಟ್ಟಿಲುಗಳ ಮೂಲಕ ಆ ಕಟ್ಟಡವನ್ನು ಏರುತ್ತಾ ಒಂದೊಂದೇ ಕೋಣೆಯನ್ನು ಪರೀಕ್ಷೆ ಮಾಡುತ್ತಾ ಮುಂದೆ ಹೋಗುವುದು ಸುಲಭದ ಮಾತಾಗಿರಲಿಲ್ಲ. ಕೊನೆಗೆ ಒಂದು ಬಾಗಿಲು ಒಡೆದು ಒಳಗೆ ನುಗ್ಗಿದಾಗ ಉಗ್ರರು ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಅದರಲ್ಲಿ ಒಂದು ಗುಂಡು ಕ್ಯಾಪ್ಟನ್ ಹೃದಯವನ್ನು ಸೀಳಿಕೊಂಡು ಹೋಯಿತು. ರಕ್ತದ ಕೋಡಿ ಹರಿಯಿತು. ಆದರೂ ಮುನ್ನುಗ್ಗಿದ ಅವರು ತನ್ನ ಮೆಷಿನ್ ಗನ್ನಿನಿಂದ ಗುಂಡಿನ ಮಳೆ ಸುರಿಸಿ ಒಬ್ಬ ಉಗ್ರನನ್ನು ಹೊಡೆದು ಉರುಳಿಸುತ್ತಾರೆ ಮತ್ತು ಕುಸಿದು ಬೀಳುತ್ತಾರೆ. ಆಗಲೂ ಅವರು ಕಿರುಚಿ ಹೇಳುತ್ತಿದ್ದ ಒಂದೇ ವಾಕ್ಯ , ಇನ್ನೂ ಇಬ್ಬರು ಉಗ್ರರು ಒಳಗೆ ಅವಿತು ಕುಳಿತಿದ್ದಾರೆ. ನಾನವರನ್ನು ಕೊಲ್ಲಬೇಕು.
ಮುಂದೆ ಭಾರತೀಯ ಸೈನಿಕರ ಸಾಹಸದಿಂದ ಆ ಉಳಿದ ಇಬ್ಬರು ಉಗ್ರರನ್ನು ಹತ್ಯೆ ಮಾಡಿ ಆ ಕಟ್ಟಡವನ್ನು ಮುಕ್ತವನ್ನಾಗಿ ಮಾಡಲಾಯಿತು. ಅದೇ ಹೊತ್ತಿಗೆ ಶ್ರೀನಗರದ ಆಸ್ಪತ್ರೆಯಲ್ಲಿ ಕ್ಯಾಪ್ಟನ್ ಪವನ್ ಕುಮಾರ್ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಆಗ ಅವರ ವಯಸ್ಸು ಕೇವಲ 23.
ಮುಂದೆ ಅವರಿಗೆ ಮರಣೋತ್ತರ ಆಗಿ ‘ ಶೌರ್ಯ ಚಕ್ರ ‘ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಅದನ್ನು ಸ್ವೀಕಾರ ಮಾಡಲು ಅವರು ಇರಲಿಲ್ಲ. ಜೈ ಹಿಂದ್.
✒️ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top