ಮೈಸೂರು : ಇತ್ತೀಚೆಗಷ್ಟೇ ನಿಧನರಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಅವರ ಪತ್ನಿ ವೀಣಾ ಧ್ರುವನಾರಾಯಣ ಏ. 7ರಂದು ನಿಧನರಾಗಿದ್ದಾರೆ. ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಅವರು ಸುಮಾರು 10 ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ಇತ್ತೀಚೆಗೆ, ಪತಿ ಧ್ರುವನಾರಾಯಣ ಅವರ ಅಕಾಲಿಕ ಸಾವಿನಿಂದಾಗಿ ಶಾಕ್ ಗೆ ಒಳಗಾಗಿದ್ದ ಅವರ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಹಾಗಾಗಿ, ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಶುಕ್ರವಾರ ನಿಧನರಾಗಿದ್ದಾರೆ.
ಇವರು ಮೂವರು ಪುತ್ರರನ್ನು ಅಗಲಿದ್ದಾರೆ. ವಿಜಯನಗರದ ಅವರ ಸ್ವಗೃಹದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ ಚಾಮರಾಜನಗರ ಜಿಲ್ಲೆಯ ಸ್ವಗ್ರಾಮ ಹೆಗ್ಗವಾಡಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮಾ. 11ರಂದು ಧ್ರುವನಾರಾಯಣ್ ಅವರು ನಿಧನರಾಗಿದ್ದರು. ಅಂದು ಬೆಳಗಿನ ಜಾವದಲ್ಲಿ ಅವರಿಗೆ ಹೃದಯಾಘಾತ ಸಂಭವಿಸಿದ ಸಂದರ್ಭ ಆಸ್ಪತ್ರೆಗೆ ಹೋಗುವಷ್ಟರಲ್ಲಿ ನಿಧನರಾಗಿದ್ದರು.
ಕಳೆದ 2 ವರ್ಷಗಳಿಂದ ಧ್ರುವನಾರಾಯಣ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಈ ಬಾರಿ ನಂಜನಗೂಡಿನಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದರು. ಇವರು 2 ಬಾರಿ ಶಾಸಕರಾಗಿ 1 ಬಾರಿ ಸಂಸದರಾಗಿದ್ದರು. ಧ್ರುವನಾರಯಣ್ ಮೃತಪಟ್ಟ ಹಿನ್ನೆಲೆಯಲ್ಲಿ ಮಗ ದರ್ಶನ್‌ಗೆ ನಂಜನಗೂಡು ಕ್ಷೇತ್ರದಿಂದ ಕಾಂಗ್ರೇಸ್ ಟಿಕೆಟ್ ನೀಡಲಾಗಿದೆ.