ಮಡಿವಂತಿಕೆಯ ರಥಕ್ಕೆ ಆನುವಂಶಿಕ ಸೇವೆ | ಮಹಾಲಿಂಗೇಶ್ವರ ದೇವರ ಹೂತೇರು ಶೃಂಗಾರದ ಚಾಕರಿ | ಸೇರಿಗಾರ ವೃತ್ತಿಯಿಂದ ಚಾಕರಿ ವೃತ್ತಿಗೆ ರಮಾನಾಥ ಕುಟುಂಬ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರ ಉತ್ಸವಗಳ ಪೈಕಿ ಹೂತೇರು ಅಥವಾ ಪುಷ್ಪ ರಥಕ್ಕೆ ಹೆಚ್ಚಿನ ಮಹತ್ವ. ಬ್ರಹ್ಮರಥ, ಚಂದ್ರಮಂಡಲ ಇದ್ದರೂ, ಪುಷ್ಪರಥ ಅತೀ ಶ್ರದ್ಧೆಯ, ಭಕ್ತಿಯ ರಥ ಎಂದೇ ಜನಜನಿತ.

ಹೂತೇರಿಗೆ ಮಡಿವಂತಿಕೆಯ ರಥ ಎಂದೂ ಕರೆಯಲಾಗುತ್ತದೆ. ಈ ರಥದ ಮೇಲ್ಭಾಗಕ್ಕೆ ಯಾರೆಂದರೆ ಯಾರು ಹೋಗುವಂತಿಲ್ಲ. ಅರ್ಚಕರು ರಥ ಏರಬೇಕಾದರೂ, ಮಡಿವಂತಿಕೆಯಲ್ಲಿ ಇರಬೇಕು ಎಂಬ ನಿಯಮವೂ ಇದೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಗೆ ಧ್ವಜಾರೋಹಣ ಏರಿದ ತಕ್ಷಣ ನಂದಿ ಮಂಟಪದ ನಂದಿಗೆ ನೈವೇದ್ಯ ಸಮರ್ಪಣೆ ಮಾಡಲಾಗುತ್ತದೆ. ಇದಾದ ತಕ್ಷಣ ಹೂತೇರಿನ ಮುಗುಳಿ ಇಡಲಾಗುತ್ತದೆ. ದೇವರ ಎದುರಿನಲ್ಲಿ ಪ್ರಾರ್ಥನೆ ಮಾಡಿ, ಮಡಿವಾಳ ಜನಾಂಗದ ಓರ್ವ ವ್ಯಕ್ತಿ ಮುಗುಳಿಯನ್ನು ಪುಷ್ಪ ರಥದ ಮೇಲ್ಭಾಗದಲ್ಲಿ ಪ್ರತಿಷ್ಠೆ ಮಾಡುತ್ತಾರೆ. ಅಂದರೆ ಮಡಿವಾಳ ಎಂದರೆ ಮಡಿವಂತಿಕೆಯ ಜನಾಂಗ ಎಂಬುದು ತುಳುವರ ನಂಬಿಕೆ.































 
 

ಇಂತಹ ಪುಷ್ಪ ರಥದ ಚಾಕರಿಯನ್ನು ಸದ್ಯ ರಮಾನಾಥ ಎನ್ನುವವರು ನಡೆಸಿಕೊಂಡು ಬರುತ್ತಿದ್ದಾರೆ. ಇವರು ದೇವಸ್ಥಾನದ ಸೆಕ್ಯೂರಿಟಿ ಗಾರ್ಡ್ ಕೂಡ ಹೌದು. ಪುಷ್ಪ ರಥದ ಚಾಕರಿಗೆಂದು ಪ್ರಾರಂಭದಲ್ಲಿ ಒಂದೂಕಾಲು ರೂಪಾಯಿ ಹಾಗೂ ಒಂದು ಮುಡಿ ಅಕ್ಕಿ ನೀಡಲಾಗುತ್ತಿತ್ತು. ಈಗ ಮುಡಿ ಅಕ್ಕಿಯ ಬದಲು ಹಣವನ್ನೇ ನೀಡಲಾಗುತ್ತಿದೆ.

ರಮಾನಾಥ ಅವರ ಅಜ್ಜನ ಕಾಲದಿಂದಲೂ ಈ ಪುಷ್ಪ ರಥದ ಚಾಕರಿಯನ್ನು ಮಾಡಿಕೊಂಡು ಬರಲಾಗುತ್ತಿದೆ. ಇದಕ್ಕೂ ಒಂದು ಸುಂದರವಾದ ಹಿನ್ನೆಲೆಯಿದೆ.

ರಮಾನಾಥ ಅವರ ಅಜ್ಜ ತನಿಯ ಪುರುಷ. ಇವರು ಮೂಲತಃ ಬಂಟ್ವಾಳ ತಾಲೂಕಿನ ಇರಾದವರು. ಅಲ್ಲಿ ಉಳ್ಳಾಲ್ತಿಯ ಚಾಕರಿ ಮಾಡಿಕೊಂಡು ಇದ್ದ ಮನೆತನ. ಕಣ್ವತೀರ್ಥದಲ್ಲೂ ಚಾಕರಿ ಮನೆತನವಾಗಿ ಗುರುತಿಸಿಕೊಂಡಿದ್ದರು. ಇವರು ಸೇರಿಗಾರ ವೃತ್ತಿ ಅಂದರೆ ಜಾತ್ರೆಗೆ ವಾದ್ಯ ನುಡಿಸಲೆಂದು ಪುತ್ತೂರು ದೇವಸ್ಥಾನಕ್ಕೆ ಆಗಮಿಸಿದ್ದರು. ಇದೇ ಸಂದರ್ಭ ಬಲ್ನಾಡಿನಿಂದ ಕಿರುವಾಳು ಭಂಡಾರ ಸಹಿತ ಆಗಮಿಸಿದ್ದ ಉಳ್ಳಾಲ್ತಿಯ ಅಭಯದಂತೆ ದೇವಸ್ಥಾನದ ಚಾಕರಿಗೆ ಮುಂದಾಗುತ್ತಾರೆ. ಆಗ ನೀಡಿದ ಜವಾಬ್ದಾರಿಯೇ ಪುಷ್ಪ ರಥವನ್ನು ಜಾತ್ರೆಗೆ ಸಜ್ಜುಗೊಳಿಸುವುದು.

ಆ ಬಳಿಕ ಪುತ್ತೂರು ದೇವಸ್ಥಾನದಲ್ಲಿ ಸೇರಿಗಾರ ವೃತ್ತಿಯನ್ನು ತನಿಯ ಪುರುಷ ಅವರ ಸಹೋದರ ಅಮ್ಮು ಸೇರಿಗಾರ ಮುಂದುವರಿಸುತ್ತಾರೆ. ಇವರ ಮಗಳ ಮಗ ಸ್ಯಾಕ್ಸೋಫೋನ್ ವಾದನದಲ್ಲಿ ಪ್ರಾವಿಣ್ಯತೆ ಪಡೆದಿರುವ ಪಿ.ಕೆ. ಗಣೇಶನ್ ಅವರು.

ವರ್ಷಕ್ಕೆ 3 ಬಾರಿ ಪುಷ್ಪ ರಥೋತ್ಸವ:

ಶಿವರಾತ್ರಿ, ಲಕ್ಷದೀಪೋತ್ಸವ ಹಾಗೂ ಜಾತ್ರೆ ಸಂದರ್ಭದಲ್ಲಿ ಪುಷ್ಪ ರಥವನ್ನು ಶೃಂಗರಿಸಿ, ದೇವರ ಉತ್ಸವ ನಡೆಯುತ್ತದೆ. ಈ ಮೂರು ಸಂದರ್ಭದಲ್ಲೂ ಪುಷ್ಪ ರಥವನ್ನು ಸಿದ್ಧಗೊಳಿಸುವ ಜವಾಬ್ದಾರಿ ರಮಾನಾಥ ಅವರದ್ದು.

ಬ್ರಹ್ಮರಥ ನಿರ್ಮಾಣಕ್ಕೆ ಮೊದಲು ಏಪ್ರಿಲ್ 16ರಂದು ನಡೆಯುವ ಪುಷ್ಪ ರಥವನ್ನೇ ಏಪ್ರಿಲ್ 17ರಂದು ದೇವಳದ ಗದ್ದೆಯಲ್ಲಿ ರಥೋತ್ಸವವಾಗಿ ಆಚರಿಸಲಾಗುತ್ತಿತ್ತು. ಇದೀಗ ಏಪ್ರಿಲ್ 17ರಂದು ಬ್ರಹ್ಮರಥೋತ್ಸವ ನಡೆಯುತ್ತದೆ. ಏಪ್ರಿಲ್ 16ರಂದು ಬಲ್ನಾಡು ಉಳ್ಳಾಲ್ತಿ ದಂಡನಾಯಕ ದೈವಗಳ ಕಿರುವಾಳು ಭಂಡಾರ ಆಗಮನವಾಗಿ, ಬಳಿಕ ಪುಷ್ಪ ರಥೋತ್ಸವ ನಡೆಯುತ್ತದೆ.

ಹೆಗಲು ಕೊಡುವ ಸಹೋದರರು:

ತನಿಯ ಪುರುಷ ಅವರ ಬಳಿಕ ಅವರ ಪುತ್ರ ಆನಂದ ಪುರುಷ ಸುಮಾರು 40 ವರ್ಷ ಪುಷ್ಪ ರಥವನ್ನು ಸಿದ್ಧಗೊಳಿಸುವ ಕಾಯಕ ನಡೆಸಿಕೊಂಡು ಬಂದರು. ತನಿಯ ಪುರುಷ ಅವರ ಪತ್ನಿಯ ಸಹೋದರ ಸೇಸಪ್ಪ ಪುರುಷ, ಕುಂಞಿ ಪುರುಷ ಅವರು ಹೆಗಲು ನೀಡಿದರು. 2007ರಲ್ಲಿ ಆನಂದ ಪುರುಷ ಅವರು ನಿಧನರಾದ ಬಳಿಕ, ರಮಾನಾಥ ಅವರು ರಥಕಟ್ಟುವ ಕಾಯಕಕ್ಕೆ ಮುಂದಾದರು. ರಮಾನಾಥ ಅವರಿಗೆ ಸಹೋದರರಾದ ರಘುನಾಥ ಹಾಗೂ ಜಗನ್ನಾಥ ಜೊತೆಯಾಗುತ್ತಾರೆ. ರಮಾನಾಥ ಅವರ ಪುತ್ರ ಕೃಷ್ಣ ಪ್ರಸಾದ್ ಬೆಂಗಳೂರಿನಲ್ಲಿ ಚಾಲಕ ವೃತ್ತಿ ನಡೆಸುತ್ತಿದ್ದಾರೆ. ಜಾತ್ರೆಯ ಸಂದರ್ಭ ರಜೆ ಮಾಡಿ, ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಮುಂದೆ ಅವರೇ ಈ ಸೇವೆಯನ್ನು ಮುಂದುವರಿಸಬೇಕು ಎನ್ನುವ ಅಪೇಕ್ಷೆ ರಮಾನಾಥ ಅವರದ್ದು.

ಆಧುನಿಕ ತಂತ್ರಜ್ಞಾನ:

ಪುಷ್ಪ ರಥವನ್ನು ಮೊದಲು ಸೆಣಬಿನ ಹಗ್ಗ ಹಾಗೂ ಹುರಿ ಹಗ್ಗವನ್ನು ಬಳಸಿಕೊಂಡು ಕಟ್ಟಲಾಗುತ್ತಿತ್ತು. ಇದೀಗ ಕಬ್ಬಿಣದ ಕ್ಲ್ಯಾಂಪ್ ಅಳವಡಿಸಲಾಗಿದೆ. ಅದಕ್ಕೆ ಬಾವುಟವನ್ನು ಸಿಕ್ಕಿಸಿದರೆ ಮುಗಿಯಿತು. ಆಧುನಿಕ ತಂತ್ರಜ್ಞಾನಗಳು ರಥ ಕಟ್ಟುವ ಕಾಯಕವನ್ನು ಸುಲಭವಾಗಿಸಿದೆ ಎನ್ನುತ್ತಾರೆ ರಮಾನಾಥ.

ಸ್ವಚ್ಛತೆ, ನಿಷ್ಠೆಗೇ ಆದ್ಯತೆ:

ಪುಷ್ಪ ರಥದಲ್ಲಿ ಸ್ವಚ್ಛತೆ, ನಿಷ್ಠೆಗೇ ಮೊದಲ ಆದ್ಯತೆ. ಎಲ್ಲಾ ರಥವನ್ನು ನಿರ್ಮಿಸಿದಂತೆ, ಪುಷ್ಪ ರಥವನ್ನು ನಿರ್ಮಾಣ ಮಾಡುವಂತಿಲ್ಲ. ಎಲ್ಲರೂ ರಥವನ್ನು ಏರುವಂತಿಲ್ಲ. ನಿರ್ದಿಷ್ಟ ಚಾಕರಿಯವರು, ಶುದ್ಧಚಾರದೊಂದಿಗೇ ರಥವನ್ನು ಕಟ್ಟುವ ಕೆಲಸಕ್ಕೆ ಮುಂದಾಗಬೇಕು. ಇಲ್ಲಿ ಸ್ವಚ್ಛತೆಗೂ ಆದ್ಯತೆ ನೀಡಿದ್ದು, ಪೂಜೆ ಮಾಡುವ ಅರ್ಚಕರಿಗೂ ಕೆಲ ನಿಯಮಗಳಿವೆ ಎಂಬ ಮಾಹಿತಿಯಿದೆ.

ಪ್ರತಿಫಲದ ಬಯಕೆ ಇಲ್ಲ:

ಅಜ್ಜನ ಕಾಲದಿಂದ ಮಾಡಿಕೊಂಡ ಬಂದ ಚಾಕರಿ ಪುಷ್ಪ ರಥ ಕಟ್ಟುವ ಕಾಯಕ. ಅಜ್ಜನ ಕಾಲಾನಂತರ ತಂದೆ ಆನಂದ ಪುರುಷ ರಥ ಕಟ್ಟುತ್ತಿದ್ದರು. ಎಳವೆಯಿಂದಲೇ ಅವರ ಜೊತೆಗಿದ್ದು, ರಥ ಕಟ್ಟುವುದನ್ನು ಕಲಿತಿದ್ದೆ. 2007ರ ಬಳಿಕ ಸಹೋದರರ ಜೊತೆಗೂಡಿ ರಥವನ್ನು ಕಟ್ಟುತ್ತಿದ್ದೇವೆ. ಮುಂದೆ ಮಗನೂ ಜೊತೆಗೂಡುತ್ತಾನೆ ಎಂಬ ಭರವಸೆ ಇದೆ. ಈ ಚಾಕರಿಗೆ ಯಾವುದೇ ಪ್ರತಿಫಲದ ಬಯಕೆ ಇಟ್ಟುಕೊಂಡಿಲ್ಲ. ಇದು ದೇವರಿಗೆ ನಾವು ಮಾಡುವ ಸೇವೆ.

ರಮಾನಾಥ, ಪುಷ್ಪ ರಥದ ಚಾಕರಿಯವರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top