ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಈ ಬಾರಿಯ ಜಾತ್ರೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಈ ನಿಟ್ಟಿನಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ವಿವಿಧ ಇಲಾಖೆಗಳು ಪೂರ್ಣ ಸಹಕಾರ ನೀಡುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ವಿನಂತಿಸಿದ್ದಾರೆ.
ಜಾತ್ರೋತ್ಸವದ ಅಂಗವಾಗಿ ವಿವಿಧ ಜವಾಬ್ದಾರಿಗೆ ಸಂಬಂಧಿಸಿ ಬುಧವಾರ ದೇವಸ್ಥಾನದ ಸಭಾಭವನದಲ್ಲಿ ನಡೆದ ವಿವಿಧ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜಾತ್ರೆಗೆ ಬರುವ ಜನಸಂಖ್ಯೆ, ವಾಹನಗಳ ಲೆಕ್ಕಾಚಾರ ಹಾಗೂ ಪೇಟೆ ಸವಾರಿ ಸಂದರ್ಭ ವಾಹನ ಅಡಚಣೆ ಆಗದಂತೆ ಹಾಗೂ ನಿರಂತರ ವಿದ್ಯುತ್ ಸರಬರಾಜು, ಆರೋಗ್ಯ ಸೇವೆ, ನೀರಿನ ವ್ಯವಸ್ಥೆ ಮುಂತಾದ ವಿಚಾರಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.
ಸ್ವಚ್ಛತೆ್ಗೆ ಸಂಬಂಧಿಸಿ ನಗರಸಭೆ ವತಿಯಿಂದ ಏನೆಲ್ಲಾ ಅಗತ್ಯ ವ್ಯವಸ್ಥೆಳು ಬೇಕಾಗಿದೆಯೋ ಅದೆಲ್ಲವನ್ನು ನಿರ್ವಹಣೆ ಮಾಡಲಾಗುತ್ತಿದೆ ಎಂದು ಪೌರಾಯುಕ್ತ ಮಧು ಎಸ್.ಮನೋಹರ್ ತಿಳಿಸಿದ್ದಾರೆ.
ಬ್ರಹ್ಮರಥೋತ್ಸವದಂದು ಹೆಚ್ಚುವರಿ ಬಸ್ ಸೌಲಭ್ಯ :
ಏ.16 ರ ಕಿರುವಾಳು ಆಗಮನ ಹಾಗೂ ಏ.17 ಬ್ರಹ್ಮರಥೋತ್ಸವದಂದು ಊರ, ಪರವೂರಿನ ಲಕ್ಷಾಂತರ ಭಕ್ತರು, ಸಾರ್ವಜನಿಕರು ಜಾತ್ರೆಯಲ್ಲಿ ಸೇರುವ ನಿರೀಕ್ಷೆಯಿದ್ದು, ರಥೋತ್ಸವ ಮುಗಿದು ತೆರಳುವಾಗ ತಡರಾತ್ರಿ ವರೆಗೆ ಬಸ್ ಸೌಲಭ್ಯ ಮಾಡುವಂತೆ ಕೆಎಸ್‍ಆರ್‍ಟಿಸಿ ಅಧಿಕಾರಿಗಳಲ್ಲಿ ತಿಳಿಸಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ಮುರಳೀಧರ್, ಏ.17 ರಂದು ಹೆಚ್ಚುವರಿ 60 ಬಸ್‍ಗಳನ್ನು ಓಡಿಸಲಾಗುವುದು ಎಂದು ತಿಳಿಸಿದರು.
ಆರೋಗ್ಯ ಸೇವೆಗೆ ಪ್ರತ್ಯೇಕ ಕೌಂಟರ್ :
ಆರೋಗ್ಯ ಸೇವೆಗಾಗಿ ಆರೋಗ್ಯ ಇಲಾಖೆಯಿಂದ ಪ್ರತ್ಯೇಕ ಕೌಂಟರ್ ವ್ಯವಸ್ಥೆ, ಒಂದು ಆಂಬುಲೆನ್ಸ್ ವ್ಯವಸ್ಥೆ ಜತೆಗೆ ಆರೋಗ್ಯ ಸಹಾಕಿಯರು, ಆಶಾ ಕಾರ್ಯಕರ್ತರು ಇರುತ್ತಾರೆ ಎಂದು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ತಿಳಿಸಿದರು.
ನಿಗದಿಪಡಿಸಿದಲ್ಲಿ ವಾಹನ ಪಾರ್ಕಿಂಗ್ :
ವಾಹನ ಪಾರ್ಕಿಂಗ್‍ವ್ಯವಸ್ಥೆಗಾಗಿ ನಿಗದಿಪಡಿಸಿದ ಪಾರ್ಕಿಂಗ್‍ನಲ್ಲಿ ತಮ್ಮ ವಾಹನಗಳನ್ನು ನಿಲುಗಡೆಗೊಳಿಸಬೇಕು. ಈ ಕುರಿತು ಈಗಾಗಲೇ ಕೊಂಬೆಟ್ಟು ಕ್ರೀಡಾಂಗಣ, ಎಪಿಎಂಸಿ, ಕೆಲವೊಂದು ಶಾಲಾ ಕ್ರೀಡಾಂಗಣವನ್ನು ಬಳಸಲಾಗುವುದು ಎಂದು ಪೊಲೀಸ್ ಇಲಾಖೆಯವರು ಮಾಹಿತಿ ನೀಡಿದರು.
ವಿದ್ಯುತ್ ವ್ಯವಸ್ಥೆ ಅಂಗವಾಗಿ ಹೆಚ್ಚುವರಿ ವಿದ್ಯುತ್ ಬೇಕಾದವರು ಮೊದಲೇ ತಿಳಿಸಬೇಕು. ಕೊನೆಯ
ಕ್ಷಣದಲ್ಲಿ ತಿಳಿಸಿದರೆ ಪರಿಶೀಲನೆ ಕಷ್ಟ. ಜಾತ್ರೆ ಸಂದರ್ಭದಲ್ಲಿ ಮೊಬೈಲ್ ನೆಟ್ ವರ್ಕ್ ಸಿಗುವುದು ಕಷ್ಟ. ಪ್ರತ್ಯೇಕ ಟವರ್‍ಅಳವಡಿಸುವುದು ಒಳ್ಳೆಯದು ಎಂದು ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ತಿಳಿಸಿದರು.
ಉಳಿದಂತೆ ಅಗ್ನಿಶಾಮಕ ದಳದ ಒಂದು ವಾಹನ ಜಾತ್ರಾ ಗದ್ದೆಯಲ್ಲಿ ಇರುವಂತೆ ಅಧ್ಯಕ್ಷರು ವಿನಂತಿಸಿದರು.
ವೇದಿಕೆಯಲ್ಲಿ ಗ್ರೇಡ್ 2 ತಹಶೀಲ್ದಾರ್ ಲೋಕೇಶ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ, ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ರಾಮಚಂದ್ರ ಕಾಮತ್, ವೀಣಾ ಬಿ.ಕೆ., ಶೇಖರ್ ನಾರಾವಿ, ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್‍ಭಂಡಾರಿ ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ, ಸದಸ್ಯರಾದ ಕಿರಣ್, ಅಶೋಕ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಭಕ್ತಾದಿಗಳು ಉಪಸ್ಥಿತರಿದ್ದರು.