ಪುತ್ತೂರು: ಚುನಾವಣೆ ದಿನ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ಕಸರತ್ತು ನಡೆಸುತ್ತಿದೆ. ಇದೀಗ ಸಾಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷರಾಗಿ, ಎಬಿವಿಪಿ ತಾಲೂಕು ಪ್ರಮುಖ್ ಸೇರಿದಂತೆ ಹಲವು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿರುವ ದಿನೇಶ್ ಮೆದು ಹೆಸರು ಕೇಳಿಬರುತ್ತಿದೆ.
ಹಾಲಿ ಶಾಸಕ ಸಂಜೀವ ಮಠಂದೂರು ಅವರ ಹೆಸರು ಚಾಲ್ತಿಯಲ್ಲಿರುವಂತೆ, ಕೊನೆಕ್ಷಣದಲ್ಲಿ ಹೊಸ ಅಭ್ಯರ್ಥಿಗಳತ್ತಲೂ ಬಿಜೆಪಿ ದೃಷ್ಟಿ ಹಾಯಿಸುತ್ತಿದೆ. ಒಂದು ವೇಳೆ ಹೊಸ ಮುಖಗಳನ್ನು ಆಯ್ದುಕೊಂಡದ್ದೇ ಆದರೆ, ಅದರಲ್ಲಿ ದಿನೇಶ್ ಮೆದು ಅವರ ಹೆಸರು ಅಗ್ರಪಂಕ್ತಿಯಲ್ಲಿ ಗುರುತಿಸಿಕೊಂಡಿದೆ.
ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾಗಿ, ಪುತ್ತೂರು ಎಪಿಎಂಸಿ ಅಧ್ಯಕ್ಷರಾಗಿ, ರಾಜ್ಯ ಕೃಷಿ ಮಾರಾಟ ಮಂಡಳಿಯಲ್ಲಿ ಜಿಲ್ಲೆಯ ನಿರ್ದೇಶಕರಾಗಿ, ಎಬಿವಿಪಿ ತಾಲೂಕು ಹೋರಾಟ ಪ್ರಮುಖ್ ಆಗಿ, ಮಂಗಳೂರು ವಿವಿ ಸೆನೆಟ್ ಸದಸ್ಯರಾಗಿ, ಸವಣೂರು ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷರಾಗಿ ಮೊದಲಾದ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಕೊರೋನಾ ಸಂದರ್ಭ ಕಂಗಾಲಾಗಿದ್ದ ಅಡಿಕೆ ಹಾಗೂ ಇತರ ವಾಣಿಜ್ಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿಕೊಟ್ಟು, ರೈತಸ್ನೇಹಿಯಾಗಿಯೂ ಗುರುತಿಸಿಕೊಂಡಿದ್ದರು.
ಪುತ್ತೂರು ಎಪಿಎಂಸಿ ಅಧ್ಯಕ್ಷರಾದ ಬಳಿಕ, ಎಪಿಎಂಸಿ ರಸ್ತೆಗೆ ರೈಲ್ವೇ ಅಂಡರ್ ಪಾಸ್ ಯೋಜನೆಯನ್ನು ಮಂಜೂರುಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಬಹುದಿನಗಳ ಬೇಡಿಕೆಯ ರೈಲ್ವೇ ಅಂಡರ್ ಪಾಸ್ ಸಂಚಾರಕ್ಕೆ ತೆರೆದುಕೊಂಡಿದೆ.