10 ಲಕ್ಷಕ್ಕೂ ಹೆಚ್ಚು ಸ್ಥಳಗಳಲ್ಲಿ ಮೋದಿ ಭಾಷಣ ನೇರ ಪ್ರಸಾರ
ದೆಹಲಿ : ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಏಕೈಕ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆ ಹೊಂದಿರುವ ಬಿಜೆಪಿ ಇಂದು ಸಂಸ್ಥಾಪನಾ ದಿನ ಆಚರಿಸಿಕೊಳ್ಳುತ್ತಿದ್ದು, ಬೆಳಗ್ಗೆ 10ಕ್ಕೆ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ. ಪ್ರಧಾನಿಯವರ ಭಾಷಣವನ್ನು ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ಸ್ಥಳಗಳಲ್ಲಿ ನೇರ ಪ್ರಸಾರ ಮಾಡಲಾಗುವುದು. ಮೋದಿ ಭಾಷಣದ ವೇಳೆ ಪಕ್ಷದ ಎಲ್ಲಾ ಸಂಸದರು ಸಂಸತ್ತಿನಲ್ಲಿ ಹಾಜರಿರಲು ಸೂಚಿಸಲಾಗಿದೆ.
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರು ಪ್ರಧಾನಿಯಾಗಿ ಮರು ಆಯ್ಕೆ ಆಗಲೆಂದು ಇಂದು ದೇಶಾದ್ಯಂತ ಬಿಜೆಪಿ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಲಿದೆ. 1980ರ ಏಪ್ರಿಲ್ 6 ರಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷವನ್ನು ಸ್ಥಾಪಿಸಲಾಗಿತ್ತು. ಇಂದು ಬಿಜೆಪಿ ತನ್ನ 43ನೇ ಸಂಸ್ಥಾಪನಾ ದಿನವನ್ನು ಆಚರಿಸಲಿದೆ.
ದಿಲ್ಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಧ್ವಜಾರೋಹಣ ಮಾಡಿದ ಬಳಿಕ ದೇಶದ 10 ಲಕ್ಷಕ್ಕೂ ಹೆಚ್ಚು ಸ್ಥಳಗಳಲ್ಲಿ “ಏಕ್ ಬಾರ್ ಫಿರ್ ಸೆ ಮೋದಿ ಸರ್ಕಾರ್” ಮತ್ತು “ಏಕ್ ಬಾರ್ ಫಿರ್ ಸೆ ಭಾಜಪಾ ಸರ್ಕಾರ್” ಎಂಬ ಘೋಷಣೆಗಳನ್ನು ಕಾರ್ಯಕರ್ತರು ಗೋಡೆಗಳ ಮೇಲೆ ಬರೆಯಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ತಿಳಿಸಿದ್ದಾರೆ.
ಏಪ್ರಿಲ್ 14 ರಂದು ಭಾರತದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ “ಸಾಮಾಜಿಕ ನ್ಯಾಯ ಸಪ್ತಾಹ” ಆಚರಿಸಲಿದ್ದು, ಅದಕ್ಕೆ ಇಂದು ಚಾಲನೆ ನೀಡಲಾಗುವುದು. ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ, ಅರ್ಥಶಾಸ್ತ್ರಜ್ಞ, ಭಾರತದ ಸಂವಿಧಾನ ಶಿಲ್ಪಿ ಮತ್ತು ವಿಶೇಷವಾಗಿ ದಲಿತರಿಗೆ ಐಕಾನ್ ಆಗಿರುವ ಬಿ ಆರ್ ಅಂಬೇಡ್ಕರ್ ಅವರನ್ನು ಸ್ಮರಿಸಲು ಬಿಜೆಪಿ ಒಂದು ವಾರದ ಕಾಲ ರಾಷ್ಟ್ರವ್ಯಾಪಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದು ತರುಣ್ ಚುಗ್ ಹೇಳಿದ್ದಾರೆ