ವಾರಾಂತ್ಯಕ್ಕೆ ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆ
ಬೆಂಗಳೂರು : ಮೂಲ ಬಿಜೆಪಿಗರು ಹಾಗೂ ವಲಸೆ ಬಿಜೆಪಿಗರ ನಡುವೆ ಟಿಕೆಟ್ ಹಂಚಿಕೆ ವಿಚಾರವಾಗಿ ಭಾರಿ ಪೈಪೋಟಿ ನಡೆಯುತ್ತಿರುವುದರಿಂದ ಬಿಜೆಪಿ ಪಾಲಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕಗ್ಗಂಟಾಗಿ ಪರಿಣಮಿಸಿದೆ. ಕನಿಷ್ಠ 40 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಸವಾಲಾಗಿ ಪರಿಣಮಿಸಿರುವುದರಿಂದ ಬಿಜೆಪಿಗೆ ಸಮಸ್ಯೆ ಎದುರಾಗಿದೆ. ಈ 40 ಸ್ಥಾನಗಳಲ್ಲಿ ಟಿಕೆಟ್ ಹಂಚಿಕೆ ಪ್ರಕ್ರಿಯೆ ನಾಮಪತ್ರ ಸಲ್ಲಿಸುವ ಕೊನೇ ದಿನಾಂಕ ಏ.20ರ ವರೆಗೆ ಎಳೆಯುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೊಳಗೊಂಡ 22 ನಾಯಕರ ಉನ್ನತ ಮಟ್ಟದ ಸಮಿತಿ ಬುಧವಾರ ಎರಡು ದಿನಗಳ ಸಭೆಯನ್ನು ಮುಕ್ತಾಯಗೊಳಿಸಿದ್ದು, 124 ಕ್ಷೇತ್ರಗಳಿಗೆ ತಲಾ 2-3 ಹೆಸರನ್ನು ಅಂತಿಮಗೊಳಿಸಿದೆ.
ಗುಬ್ಬಿ, ಬೈಲಹೊಂಗಲ, ಅಥಣಿ, ಕುಂದಗೋಳ ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದು ಮಾತ್ರವಲ್ಲದೆ ಬಂಡಾಯದ ಭೀತಿ ಎದುರಾಗಿದೆ. ಮೂಲಗಳ ಪ್ರಕಾರ ಈ ವಾರಾಂತ್ಯಕ್ಕೆ ಬಿಜೆಪಿಯ ಮೊದಲ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ. ಅಥಣಿಯಲ್ಲಿ ಕುಮಟಹಳ್ಳಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಹಾಲಿ ಶಾಸಕ ಮಹೇಶ್ ನಡುವಿನ ಭಿನ್ನಾಭಿಪ್ರಾಯದಿಂದ ಅಭ್ಯರ್ಥಿ ಘೋಷಣೆ ತಡವಾಗಬಹುದು ಎಂದು ಮೂಲಗಳು ಹೇಳಿವೆ. ಕೇಂದ್ರ ನಾಯಕತ್ವದ ನಿರ್ದೇಶನಕ್ಕೆ ಅನುಗುಣವಾಗಿ, ರಾಜ್ಯ ಬಿಜೆಪಿ ಘಟಕ ತನ್ನದೇ ಆದ ಶಾಸಕರನ್ನು ಹೊಂದಿರುವ ಕ್ಷೇತ್ರಗಳಲ್ಲಿ ಕನಿಷ್ಠ ಇಬ್ಬರ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಿದೆ.
ಬೊಮ್ಮಾಯಿ ಕ್ಷೇತ್ರವಾದ ಶಿಗ್ಗಾಂವಿಯಲ್ಲೂ ಇಬ್ಬರ ಹೆಸರು ಶಿಫಾರಸು ಮಾಡಲಾಗಿದೆ. ಪಕ್ಷದ ಹಿಡಿತದಲ್ಲಿರುವ ಭಾಗಗಳಲ್ಲಿ ಎರಡು ಹೆಸರುಗಳನ್ನು ಸೂಚಿಸುವ ಹಿಂದಿನ ಕಾರಣವೆಂದರೆ ಯಾವುದೇ ಹಾಲಿ ಶಾಸಕರು ಹೆಚ್ಚಿನ ಮಟ್ಟದ ಆಡಳಿತ ವಿರೋಧಿ ಸ್ಥಿತಿಯನ್ನು ಎದುರಿಸುವ ಸಾಧ್ಯತೆಯಿದೆ. ಹೀಗಾಗಿ ಪರ್ಯಾಯ ಅಭ್ಯರ್ಥಿ ರೆಡಿ ಇರಬೇಕಾಗುತ್ತದೆ.