ಕಾಂಗ್ರೆಸ್‌ನಲ್ಲಿ ಉಳಿಯಬೇಕೆಂದರೆ ಬೆನ್ನುಮೂಳೆ ಇರಬಾರದು
ದೆಹಲಿ : ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ಮಾಡಿರುವ ಪಕ್ಷದ ಮಾಜಿ ನಾಯಕ ಗುಲಾಂ ನಬಿ ಆಜಾದ್ ತಾನು ಪಕ್ಷದಿಂದ ಹೊರಹೋಗಲು ರಾಹುಲ್ ಗಾಂಧೀಯೇ ಕಾರಣ ಎಂದಿದ್ದಾರೆ. ಇಂದು ನಾನು ಕಾಂಗ್ರೆಸ್ ಪಕ್ಷದಲ್ಲಿ ಇಲ್ಲದಿರುವುದಕ್ಕೆ ರಾಹುಲ್ ಗಾಂಧಿಯೇ ಮುಖ್ಯ ಕಾರಣ. ಕಾಂಗ್ರೆಸ್‌ನಲ್ಲಿ ಉಳಿಯಬೇಕೆಂದರೆ ಬೆನ್ನುಮೂಳೆ ಇರಬಾರದು ಎಂದು ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅಥವಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಯಸಿದರೂ ಪಕ್ಷಕ್ಕೆ ಮರಳುವುದು ನನ್ನ ಕೈಯಲ್ಲಿಲ್ಲ. ಇಂದು ರಾಜಕೀಯದಲ್ಲಿ ಯಾರೂ ಅಸ್ಪೃಶ್ಯರಿಲ್ಲ. ಒಂದು ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಒಮ್ಮೆ ಚುನಾವಣೆ ನಡೆದರೆ ಅಲ್ಲಿ ಸರ್ಕಾರ ರಚಿಸುವ ಅವಕಾಶ ಉದ್ಭವವಾದರೆ, ಅಂತಹ ಸಂದರ್ಭದಲ್ಲಿ ಬಿಜೆಪಿ ಜೊತೆ ಹೋಗುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಆಜಾದ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಹತ್ತಿರವಿರುವವರು ಅವರ ವಿರೋಧಿಗಳು. 2013ರಲ್ಲಿ ಯುಪಿಎ ಸರ್ಕಾರ ತಂದ ಸುಗ್ರೀವಾಜ್ಞೆಯನ್ನು ಹರಿದು ಹಾಕದಿದ್ದರೆ ಇಂದು ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಲಾಗುತ್ತಿರಲಿಲ್ಲ ಎಂದು ಆಜಾದ್ ಹೇಳಿದ್ದಾರೆ.
ಕಾಂಗ್ರೆಸ್‌ನವರು ಹಿರಿಯ ನಾಯಕರ ಮಾತು ಕೇಳುವುದಿಲ್ಲ. 2014ರಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಚುನಾವಣೆಯಲ್ಲಿ ಸೋಲುವುದು ನಿಶ್ಚಿತ ಎಂಬ ಭಾವನೆಯಿಂದ ಕಾಂಗ್ರೆಸ್ ಮನೆಯಲ್ಲಿಯೇ ಕುಳಿತಿತ್ತು ಎಂದು ಹೇಳಿದರು.
ಲಂಡನ್ ಸಂದರ್ಶನದಲ್ಲಿ ರಾಹುಲ್ ಗಾಂಧಿ ಭಾರತದ ಪ್ರಜಾಪ್ರಭುತ್ವದ ರಚನೆಯ ಮೇಲೆ ‘ಅನಾಗರಿಕ ದಾಳಿ’ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದರು. ಈ ಹೇಳಿಕೆಯನ್ನು ಗುರಿಯಾಗಿಸಿದ ಆಜಾದ್, ‘ಅವರು ಏನು ಹೇಳಬೇಕೋ ಅದನ್ನು ದೇಶದಲ್ಲಿ ಹೇಳಬೇಕು, ವಿದೇಶದಲ್ಲಿ ಅಲ್ಲ’. ವಿದೇಶಕ್ಕೆ ಹೋಗಿ ದೇಶದ ವಿರುದ್ಧ ಮಾತನಾಡಬಾರದಿತ್ತು. ಒಂದು ಕಾಲದಲ್ಲಿ ಅಸ್ಸಾಂನ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದ ಹಿಮಂತ್ ಬಿಸ್ವ ಶರ್ಮಾ ಅವರಿಗೆ ಬಹುಪಾಲು ಶಾಸಕರ ಬೆಂಬಲವಿದೆ. ಅಲ್ಲದೆ ಬಂಡಾಯವೆದ್ದು ಪಕ್ಷವನ್ನು ತೊರೆಯಲಿದ್ದಾರೆ ಎಂದು ರಾಹುಲ್ ಗಾಂಧಿಗೆ ಹೇಳಿಲಾಗಿತ್ತು. ಆದರೆ ಹಿಮಂತ್ ಪ್ರಕರಣವನ್ನು ರಾಹುಲ್ ಗಾಂಧಿ ಸರಿಯಾಗಿ ನಿಭಾಯಿಸಲಿಲ್ಲ, ಶರ್ಮಾ ಪಕ್ಷದಿಂದ ಹೊರನಡೆಯುವುದರಿಂದ ಆಗುವ ಹಾನಿಯ ಅರಿವಿದ್ದರೂ ಸೋನಿಯಾ ಗಾಂಧಿ ಅವರು ಪಕ್ಷದ ಅಧ್ಯಕ್ಷೆಯಾಗಿ ಮಧ್ಯ ಪ್ರವೇಶಿಸಲಿಲ್ಲ ಎಂದು ಆಜಾದ್ ಹೇಳಿದ್ದಾರೆ.
ಹಿಮಂತ್ ಬಿಸ್ವ ಶರ್ಮಾ ವಿಷಯದಲ್ಲಿ ಏನನ್ನಾದರೂ ಮಾಡಿದ್ದರೆ 8 ರಾಜ್ಯಗಳು ಕಾಂಗ್ರೆಸ್ ಕೈಯಿಂದ ಹೋಗುತ್ತಿರಲಿಲ್ಲ. ಏನೇ ಆಗಲಿ, ಆಗಿದ್ದು ಆಗಿ ಹೋಗಿದೆ. ಹೋಗಲಿ 2024ರ ಚುನಾವಣೆಯಲ್ಲಾದರೂ ಗೆಲ್ಲುವಂತೆ ದೇವರು ಅವರಿಗೆ ಸ್ವಲ್ಪ ಜೀವ ತುಂಬಲಿ ಎಂದು ಮಾತೃಪಕ್ಷಕ್ಕೆ ಹಾರೈಸಿದ್ದಾರೆ.