ಪುತ್ತೂರು: ಇತ್ತೀಚೆಗೆ ನಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕ್ರಮವೊಂದಲ್ಲಿ ಡಾ.ಎಂ.ಕೆ.ಪ್ರಸಾದ್ ಅವರು ಕ್ರೈಸ್ತರು ನಡೆಸುವ ಸಂಸ್ಥೆಗಳ ಹೆಸರನ್ನು ಉಲ್ಲೇಖಿಸಿ ದ್ವೇಷಪೂರಿತ ಭಾಷಣ ಮಾಡಿರುವುದು ಸಮುದಾಯಕ್ಕೆ ನೋವಾಗಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಾಯಿದೇ ದೇವುಸ್ ಶಿ್ಕ್ಷಣ ಸಂಸ್ಥೆಗಳ ಸಂಚಾಲಕ, ಧರ್ಮಗುರು ವಂ.ಲಾರೆನ್ಸ್ ಮಸ್ಕರೇನಸ್ ಹೇಳಿದ್ದಾರೆ.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾ.25 ರಂದು ವಾಟ್ಸ್ ಆಫ್‍ನಲ್ಲಿ ಪ್ರಚಾರವಾದ ಹಿಂದೂ ಜಾಗರಣ ವೇದಿಕೆಯ ಕಾರ್ಯಕ್ರಮದ ಭಾಷಣದಲ್ಲಿ ಡಾ.ಎಂ.ಕೆ.ಪ್ರಸಾದ್ ಅವರು ಕ್ರೈಸ್ತ ಸಮುದಾಯದ ವಿರುದ್ಧ ನೇರವಾಗಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಮಾತುಗಳನ್ನಾಡಿದ್ದಾರೆ. ಅಲ್ಲದೆ ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಾರೆ. ಕ್ರೈಸ್ತರು ನಡೆಸುವ ಸಂಸ್ಥೆಗಳಾದ ಸಂತ ಫಿಲೋಮಿನಾ ಕಾಲೇಜು, ಫಾದರ್ ಪತ್ರಾವೋ ಆಸ್ಪತ್ರೆ, ಬೆಥನಿ ಶಿಕ್ಷಣ ಸಂಸ್ಥೆ, ಸಂತ ವಿಕ್ಟರ್ ಸಂಸ್ಥೆ, ಅದೇ ರೀತಿ ಮಂಜಲ್ಪಡ್ಪುವಿನಲ್ಲಿರುವ ಸುದಾನ ಸಂಸ್ಥೆಯ ಹೆಸರನ್ನು ಉಲ್ಲೇಖಿಸಿ ಈ ಜಾಗ ಹಿಂದೂಗಳದ್ದು, ಬ್ರಿಟಿಷರು ಅವರಿಗೆ ನೀಡಿದ್ದು, ಅವರಿಗೆ ಜಾಗ ನೀಡಿದ ಹಿಂದೂಗಳಿಗೆ ಜಾಗವಿಲ್ಲದಂತಾಗಿದೆ ಎಂದು ಹೇಳಿದ್ದಾರೆ. ಅವರ ಪತ್ನಿ, ಮಕ್ಕಳು ಇದೇ ಶಾಲೆಯಲ್ಲಿ ವಿದ್ಯಾರ್ಜನೆ ಮಾಡಿ ಕ್ರೈಸ್ತ ಸಮುದಾಯಕ್ಕೆ ಅಪಮಾನ ಮಾಡಿರುವುದು ನೋವು ತಂದಿದೆ ಎಂದರು. ದ್ವೇಷ ಭಾಷಣದಂದತಹ ಚಟುವಟಿಕೆಗಳು ಆಘಾತಕಾರಿ ಎಂದು ಸುಪ್ರಿಂ ಕೋರ್ಟ್ ಹೇಳಿದೆ. ಹೀಗಿರುವಾಗ ಭಾರತೀಯ ದಂಡ ಸಂಹಿತೆ 1890 ಅಡಿಯಲ್ಲಿ ಡಾ.ಎಂ.ಕೆ.ಪ್ರಸಾದ್ ಅವರು ಮಾಡಿರುವುದು ಅಪರಾಧ. ಇಂತಹಾ ದ್ವೇಷಪೂರಿತ ಭಾಷಣಗಳಿಗೆ ಕಡಿವಾಣ ಹಾಕಿ ಡಾ.ಎಂ.ಕೆ.ಪ್ರಸಾದ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾವು ಈಗಾಗಲೇ ಸಹಾಯಕ ಕಮೀಷನರ್ ಹಾಗೂ ಪುತ್ತೂರು ನಗರಠಾಣಾ ಪೊಲೀಸರಿಗೆ ಜ್ಞಾಪಕ ಪತ್ರ ನೀಡಿದ್ದೇವೆ ಎಂದು ತಿಳಿಸಿದ ಅವರು, ಈ ವೀಡಿಯೋ, ಯೂಟ್ಯೂಬ್ ಚಾನೆಲ್ ಮತ್ತಿತರ ಸಾಮಾಜಿಕ ಜಾಲತಾಣಗಳಿಂದ ತಕ್ಷಣ ಅಳಿಸಬೇಕು ಮತ್ತು ಕ್ಷಮೆ ಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.
ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ.ಡಾ.ಲ್ಯಂಟನಿ ಪ್ರಕಾಶ್ ಮೊಂತೇರೋ ಮಾತನಾಡಿ, 1958 ರಲ್ಲಿ ಸಂತ ಫಿಲೋಮಿನಾ ಸಂಸ್ಥೆ, ಅದಕ್ಕಿಂತ 5 ವರ್ಷದ ಹಿಂದೆ ಸಂತ ಫಿಲೋಮಿನಾ ಹೈಸ್ಕೂಲ್ ಸ್ಥಾಪನೆ ಆಗಿತ್ತು. ಈ ನಿಟ್ಟಿನಲ್ಲಿ ಡಾ.ಎಂ.ಕೆ.ಪ್ರಸಾದ್ ಅವರು ಹೇಳಿಕೆ ಸತ್ಯಕ್ಕೆ ದೂರವಾದದ್ದು. ಡಾ.ಪ್ರಸಾದ್ ಅವರನ್ನು ಬಹಳಷ್ಟು ಸಲ ನಮ್ಮ ಸಂಸ್ಥೆಯ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ವೈಯಕ್ತಿಕವಾಗಿ ನನಗೆ ಅತ್ಯಂತ ಆತ್ಮೀಯರು. ಅವರ ಜತೆಗಿನ ಬಾಂಧವ್ಯ ಅದ್ಭುತವಾಗಿದೆ. ಇದರ ನಡುವೆ ಅವರು ಸ್ವಾತಂತ್ರ್ಯ ನಂತರ ಬಂದ ಸಂಸ್ಥೆಗಳ ಕುರಿತು ಈ ರೀತಿಯ ಹೇಳಿಕೆ ನೀಡಿರುವುದು ನಮ್ಮ ಸಮುದಾಯಕ್ಕೆ ನೋವು ತಂದಿದೆ. ಈ ಕುರಿತು ನಾನೇ ಅವರಲ್ಲಿ ಖುದ್ದು ಮಾತನಾಡುತ್ತೇನೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ.ಸ್ಟ್ಯಾನಿ ಪಿಂಟೋ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಂ.ಅಶೋಕ್ ರಾಯನ್ ಕ್ರಾಸ್ತಾ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ, ಜಾನ್ ಕುಟಿನ್ಹೋ, ಜೋ ಡಿಸೋಜಾ ಉಪಸ್ಥಿತರಿದ್ದರು.