ಪುತ್ತೂರು: ಮುಂಬರುವ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಸಂಜೀವ ಮಠಂದೂರು ಅವರನ್ನೇ ಶಾಸಕ ಅಭ್ಯರ್ಥಿಯಾಗಿ ಘೋಷಿಸಬೇಕು. ಸಂಜೀವ ಮಠಂದೂರು ಅವರನ್ನು ಹೊರತುಪಡಿಸಿ ಯಾರನ್ನೇ ಶಾಸಕ ಅಭ್ಯರ್ಥಿ ಎಂದು ಘೋಷಿಸಿದರೂ ಅದು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುವುದು ಖಂಡಿತಾ ಎಂದು ಒಕ್ಕಲಿಗ ಗೌಡ ಸಮುದಾಯದ ಮುಖಂಡರು ಆದಿಚುಂಚನಗಿರಿ ಕ್ಷೇತ್ರದ ಪೀಠಾಧಿಪತಿ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಗಮನಕ್ಕೆ ತಂದಿದ್ದಾರೆ.
ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರನ್ನು ಭೇಟಿಯಾಗಿ ಮಾತನಾಡಿದ ಒಕ್ಕಲಿಗ ಗೌಡ ಸಮುದಾಯದ ನಿಯೋಗ, ಪುತ್ತೂರಿನಲ್ಲಿ ಈ ಹಿಂದೆ ಕಂಡು ಕೇಳರಿಯದ ಅಭಿವೃದ್ಧಿ ಕೆಲಸಗಳು ನಡೆದಿವೆ. ಶಾಸಕ ಸಂಜೀವ ಮಠಂದೂರು ಅವರು ದಿನದ ತನ್ನ ಇಡೀ ಸಮಯವನ್ನು ಕ್ಷೇತ್ರದ ಅಭಿವೃದ್ಧಿಗಾಗಿಯೇ ವಿನಿಯೋಗಿಸಿದ್ದಾರೆ. ಪುತ್ತೂರು ಜಿಲ್ಲಾ ಕೇಂದ್ರ ಆಗಬೇಕು ಎಂಬ ಆಶಯಕ್ಕೆ ಪೂರಕವಾಗಿ ದೊಡ್ಡ ಯೋಜನೆಗಳಿಗೆ ಈಗಾಗಲೇ ಅಡಿಪಾಯ ಹಾಕಲಾಗಿದೆ. ಆದುದರಿಂದ ಹಾಲಿ ಶಾಸಕ ಸಂಜೀವ ಮಠಂದೂರು ಅವರೇ ಮುಂದಿನ ಶಾಸಕ ಅಭ್ಯರ್ಥಿ ಆಗಬೇಕು. ಇವರನ್ನು ಹೊರತುಪಡಿಸಿ ಬೇರೆ ಯಾವುದೇ ಅಭ್ಯರ್ಥಿಯನ್ನು ಘೋಷಣೆ ಮಾಡಿದರೂ, ಉಗ್ರವಾಗಿ ಖಂಡಿಸಲಾಗುವುದು ಹಾಗೂ ಹೋರಾಟವನ್ನು ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಮೂಲಕ ಬಿಜೆಪಿ ಹೈಕಮಾಂಡ್ ಗೆ ತಲುಪಿಸಿದ್ದಾರೆ ಎಂದು ಹೇಳಲಾಗಿದೆ.
ಕೇಂದ್ರದ ಹಿರಿಯ ನಾಯಕರಿಂದ ಹಿಡಿದು ಗ್ರಾಮ ಪಂಚಾಯತಿನ ಸದಸ್ಯನವರೆಗೂ ಎಲ್ಲಾ ಜನಪ್ರತಿನಿಧಿಗಳ ಮೇಲೂ ಆರೋಪಗಳು ಇದ್ದದ್ದೇ. ಅಭಿವೃದ್ಧಿ ಕಾರ್ಯ ಮಾಡುವವರ ಮೇಲಂತೂ ಆರೋಪಗಳ ಸುರಿಮಳೆ ಹೆಚ್ಚಾಗಿಯೇ ಇರುತ್ತದೆ. ಹಾಗೇ ನೋಡಿದರೆ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಸಹಿಸಿ ಕೊಳ್ಳಲು ಆಗದೇ ಇರುವವರು ಆರೋಪ ಮಾಡುತ್ತಾರೆ. ರಾಜ್ಯದ ಹಿರಿಯ ನಾಯಕರಾಗಿರುವ ಯಡಿಯೂರಪ್ಪ ಅವರ ವಿರುದ್ಧವೂ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಜನಪ್ರತಿನಿಧಿಗಳ ಮೇಲೆ ಬರುವ ಸಹಜ ಆರೋಪಗಳು. ಹಾಗೆಂದು ಅವರ ಅಭಿವೃದ್ಧಿ ಕಾರ್ಯಗಳನ್ನು, ಸಂಘಟನೆ ವಿಚಾರಗಳನ್ನು ಬದಿಗೊತ್ತಲು ಸಾಧ್ಯವಾಗದು. ಅದೇ ರೀತಿ ಸಂಜೀವ ಮಠಂದೂರು ಅವರು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದರೂ, ಸಣ್ಣ ಪುಟ್ಟ ಆರೋಪಗಳನ್ನು ಅಲ್ಲಲ್ಲಿ ಮಾಡುತ್ತಾರೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು, ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸ್ಥಾನದಿಂದ ಅವರನ್ನು ದೂರವಿಟ್ಟರೆ ಅದನ್ನು ಒಕ್ಕಲಿಗ ಗೌಡ ಸಮುದಾಯ ಸಹಿಸದು ಎನ್ನುವುದನ್ನು ಬಿಜೆಪಿ ಹೈಕಮಾಂಡ್ ಅರ್ಥವಿಸಿಕೊಳ್ಳಬೇಕು ಎಂಬ ವಿಚಾರವನ್ನು ಸ್ವಾಮೀಜಿ ಗಮನಕ್ಕೆ ತಂದಿದ್ದಾರೆ.
ಉತ್ತಮ ನಾಯಕರನ್ನು ನೀಡಬೇಕು ಎಂಬ ಕೂಗು ಸಹಜವಾಗಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಇದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸಂಜೀವ ಮಠಂದೂರು ಅವರು ಸಮರ್ಥ ಹಾಗೂ ಉತ್ತಮ ನಾಯಕ. ಗೌಡ ಸಮುದಾಯ ಮಾತ್ರವಲ್ಲ ಎಲ್ಲಾ ಸಮುದಾಯಗಳನ್ನು ಜೊತೆಗೆ ಸೇರಿಸಿಕೊಂಡು, ಎಲ್ಲಾ ವರ್ಗಗಳ ಏಳಿಗೆಗಾಗಿ ಶ್ರಮಿಸಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಸಂಜೀವ ಮಠಂದೂರು ಅವರಿಗೆ ಬಿಜೆಪಿಯ ಶಾಸಕ ಅಭ್ಯರ್ಥಿ ಸ್ಥಾನ ತಪ್ಪಿಸಿದರೆ ಸಹಿಸಲು ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ.
ಸ್ವಾತಂತ್ರ್ಯ ನಂತರ ಹಾಗೂ ಸ್ವಾತಂತ್ರ್ಯ ಪೂರ್ವದಿಂದಲೂ ಗೌಡ ಸಮುದಾಯ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿತ್ತು. ಆದ್ದರಿಂದ ಗೌಡ ಸಮುದಾಯಕ್ಕೆ ರಾಜಕೀಯವಾಗಿ ಸೂಕ್ತ ಪ್ರಾತಿನಿಧ್ಯ ಸಿಗಬೇಕು ಎನ್ನುವುದು ನಮ್ಮ ಬೇಡಿಕೆ. ಕಾಂಗ್ರೆಸ್ ಪಕ್ಷದಿಂದಲೂ ಗೌಡ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯಬೇಕು. ಈಗಾಗಲೇ ಕಾಂಗ್ರೆಸ್ ಪಕ್ಷದಿಂದಲೂ ದಿವ್ಯಪ್ರಭಾ ಚಿಲ್ತಡ್ಕ, ಧನಂಜಯ ಅಡ್ಪಂಗಾಯ ಮೊದಲಾದವರು ಶಾಸಕ ಸ್ಥಾನದ ರೇಸ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ ನಲ್ಲಿಯೂ ಗೌಡ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಒತ್ತಡ ತರುವ ಕೆಲಸ ಆಗಬೇಕಿದೆ ಎಂದು ಒತ್ತಾಯಿಸಲಾಯಿತು.
ನಿರ್ಮಲಾನಂದನಾಥ ಶ್ರೀಗಳ ಬೆಂಬಲ:
ಒಕ್ಕಲಿಗ ಗೌಡ ಸಮುದಾಯದ ನಿಯೋಗದ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು, ಸಂಜೀವ ಮಠಂದೂರು ಅವರು ನಡೆಸಿರುವ ಅಭಿವೃದ್ಧಿ ಕಾರ್ಯಗಳನ್ನು ತಿಳಿದುಕೊಂಡಿದ್ದೇನೆ. ಇಡೀಯ ಸಮಾಜವನ್ನು ಜೊತೆಗೆ ಕರೆದೊಯ್ದು, ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಮಾತ್ರವಲ್ಲ, ಎಲ್ಲಾ ಜನರಿಗೂ ಸುಲಭದಲ್ಲಿ ಮಾತನಾಡಲು ಸಿಗುವ ಹಾಗೂ ಅವರ ಸಮಸ್ಯೆಗೆ ಸ್ಪಂದಿಸುವ ನಾಯಕ ಎನ್ನುವುದನ್ನು ಬಲ್ಲೆ. ಆದ್ದರಿಂದ ಸಂಜೀವ ಮಠಂದೂರು ಅವರ ಪರವಾಗಿ ಧ್ವನಿ ಎತ್ತುವುದು ಸರಿಯಾಗಿಯೇ ಇದೆ ಎಂದು ನಿಯೋಗದ ಮನವಿಗೆ ಬಲ ತುಂಬಿದರು ಎಂದು ತಿಳಿದುಬಂದಿದೆ.
ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಉಪಸ್ಥಿತರಿದ್ದರು.
ನಿಯೋಗದಲ್ಲಿ ಒಕ್ಕಲಿಗ ಗೌಡ ಸಮುದಾಯದ ನಾಯಕರಾದ ಚಿದಾನಂದ ಬೈಲಾಡಿ, ಶ್ರೀಧರ್ ಕಣಜಾಲು, ಎ.ವಿ. ನಾರಾಯಣ್, ವೆಂಕಟ್ರಮಣ ಗೌಡ ಕಳುವಾಜೆ, ನಾಗೇಶ್ ಕೆಡೆಂಜಿ, ಮಹೇಶ್, ಕೌಶಿಕ್, ಗಗನ್ ಮೊದಲಾದವರು ಇದ್ದರು.