ಕಗ್ಗದ ಸಂದೇಶ- ಬದುಕಿನಾಟದಲ್ಲಿ ಧನಾತ್ಮಕ ಮನೋಭಾವದೊಂದಿಗೆ ಆಡಬೇಕು…

ಎಡರು ತೊಡರೆನಲೇಕೆ? ಬಿಡಿಸು ಮತಿಗಾದನಿತ|
ದುಡಿ ಕೈಯಿನಾದನಿತ ಪಡುಬಂದ ಪಾಡು||
ಬಿಡು ಮಿಕ್ಕುದನು ವಿಧಿಗೆ, ಪಡುಬಂದ ಪಾಡು|
ಬಿಡುಗಡೆಗೆ ದಾರಿಯದು?– ಮಂಕುತಿಮ್ಮ||
ಬದುಕಿನ ದಾರಿಯಲ್ಲಿ ಎದುರಾಗುವ ಅಡ್ಡಿ ಆತಂಕಗಳ ಬಗ್ಗೆ ಚಿಂತೆ ಮಾಡಬಾರದು. ನಮ್ಮ ತಿಳುವಳಿಕೆಗೆ ಎಷ್ಟು ಸಾಧ್ಯವಾಗುತ್ತದೋ ಅಷ್ಟನ್ನು ನಿವಾರಿಸಿಕೊಳ್ಳಬೇಕು. ನಮ್ಮ ಕೈಯಲ್ಲಿ ಎಷ್ಡು ಸಾಧ್ಯವಾಗುತ್ತದೋ ಅಷ್ಟೂ ಕೆಲಸಗಳನ್ನು ನಿಷ್ಠೆಯಿಂದ ಮಾಡಬೇಕು. ಉಳಿದಿರುವುದನ್ನು ವಿಧಿಗೆ ಬಿಟ್ಟು ನೆಮ್ಮದಿಯಿಂದ ಇರುವುದೇ ಜೀವನದ ಮುಕ್ತಿಯ ಮಾರ್ಗ ಎನ್ನುವುದನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.


ಬದುಕು ಎನ್ನುವುದು ಸುಖದುಃಖಗಳ ಆಗರ. ಇದು ಪ್ರತಿಯೊಬ್ಬರ ಜೀವನಕ್ಕೂ ಅನ್ವಯಿಸುವಂತಹದ್ದು. ನಮ್ಮಲ್ಲಿ ನಮಗೆ ಮಾತ್ರ ಕಷ್ಟ ಇತರರೆಲ್ಲಾ ಸುಖವಾಗಿದ್ದಾರೆ ಎನ್ನುವ ತಪ್ಪು ಭಾವನೆ ಇದೆ.
ಮುಳ್ಳಿರದೆಯೆ ಹೂವಿದೆಯೇ? ನೋವಿರದೆ ಬದುಕಿದೆಯೆ?|
ನೋವೆಂದು ಕುಂದಿದರೆ ನಾಳೆ ನಗೆ ಎಲ್ಲಿ?||
ಕುಡಿದು ಬೇವಿನರಸ ತೋರು ಸಂತಸ ಮೊಗದಲ್ಲಿ|
ಸಮಯವೆ ನಿರ್ವಾಣ- ಮುದ್ದುರಾಮ||

ಎಂಬ ಕವಿ ಕೆ. ಶಿವಪ್ಪನವರ ನುಡಿಯಂತೆ ಸಮಯ ಎಲ್ಲವನ್ನು ನಿರ್ಧರಿಸುತ್ತದೆ. ಎಡರುತೊಡರು ಎನ್ನುವುದು ಬದುಕಿನಲ್ಲಿ ಸಾಮಾನ್ಯ ಎಲ್ಲದಕ್ಕೂ ಕೊನೆಯಿದೆ ಮತ್ತು ಯಾವುದು ಶಾಶ್ವತವಲ್ಲ. ಕತ್ತಲಿನ ಹಿಂದೆ ಬೆಳಕಿರುವಂತೆ ಕಷ್ಟಗಳ ಹಿಂದೆ ಸುಖವಿರುತ್ತದೆ. ಹೂವಿನ ಆಸ್ವಾದ ಬೇಕಾದರೆ ಮುಳ್ಳನ್ನು ಸಹಿಸಬೇಕು.
‘ಯದ್ ಯದ್ ಭವ್ಯಂ ಭವತು ಭಗವಾನ್ ಪೂರ್ವ ಕರ್ಮಾನುರೂಪಂ, ಏತತೆ ಪ್ರಾರ್ತ್ಯಂ ಮಮ ಬಹುಮತಂ, ಜನ್ಮಜನ್ಮಾಂತರೇಪಿ ತ್ವತ್ ಪಾದಾಂಬೋರುಹಯುಗಗತಾ ನಿಶ್ಚಲಾ ಭಕ್ತಿ ರಸ್ತು” ಮುಕುಂದಮಾಲಾ ಸ್ತೋತ್ರದಲ್ಲಿ ಹೇಳುವಂತೆ ‘ಹೇ ಪರಮಾತ್ಮ ಪೂರ್ವ ಕರ್ಮದನುಸಾರವಾಗಿ ಏನೇನು ನಡೆಯಬೇಕೋ ಅದೆಲ್ಲವೂ ನಡೆಯಲಿ, ಆದರೆ ಅದನ್ನೆಲ್ಲಾ ಅನುಭವಿಸುವಾಗ ನನ್ನ ಮನಸ್ಸು ಮಾತ್ರ ನಿನ್ನ ಪಾದಾರವಿಂದಗಳಲ್ಲಿ ಇರಲಿ ಎಂದು ಬೇಡಬೇಕು. ಅವನ ಅನುಗ್ರಹವಿದ್ದರೆ ಎಲ್ಲವೂ ನಿರ್ಮಲ ಮತ್ತು ನಿರಾಳ. ಫಲಿತಾಂಶವನ್ನು ಅವನಿಗೆ ಬಿಟ್ಟು ಬದುಕಿನಾಟವನ್ನು ಧನಾತ್ಮಕ ಮನೋಭಾವದೊಂದಿಗೆ ನಿಷ್ಠೆಯಿಂದ ಆಡುತ್ತಾ ಸಾಗಿದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?































 
 


✒️ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕಸಾಪ ಕಾರ್ಕಳ ಘಟಕ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top