ಪುತ್ತೂರು: ತಟ್ಟಿ ಚಪ್ಪರಕ್ಕೆ ಸಾಂಪ್ರದಾಯಿಕ ಮನ್ನಣೆಯಿದೆ. ಜಾತ್ರೆಯಲ್ಲೂ ತಟ್ಟಿ ಚಪ್ಪರಕ್ಕೆ ಪ್ರಾಶಸ್ತ್ಯ ನೀಡಲಾಗುತ್ತದೆ. ಪುತ್ತೂರ ಈಶನ ಜಾತ್ರೆಯಲ್ಲಿ ತಟ್ಟಿ ಚಪ್ಪರದ ವಿಶೇಷ ಮೆರುಗು ಇರುತ್ತದೆ. ಈ ವರ್ಷದ ಹೆಚ್ಚುಗಾರಿಕೆ ಎಂದರೆ, ಅಡಿಕೆ ಕಂಬದ ಬದಲಿಗೆ ಶಾಶ್ವತ ಕಂಬದ ಅಳವಡಿಕೆ.
ಪ್ರತೀ ವರ್ಷ ಒಳಾಂಗಣದಲ್ಲಿ ಹಾಕುವ ಚಪ್ಪರದ ಕಂಬಗಳನ್ನು ಅಡಕೆ ಮರದಿಂದ ತಯಾರಿಸಿದ ಕಂಬಗಳನ್ನು ಹಾಕಲಾಗುತ್ತದೆ. ಆದರೆ ಈ ಬಾರಿಯ ವಿಶೇಷತೆ ಎಂದರೆ ಶಾಶ್ವತ ಸ್ಟೀಲ್ ಕಂಬಗಳನ್ನು ಈಗಾಗಲೇ ಹಾಕಲಾಗಿದೆ. ಕಂಬದ ಮೇಲೆ ಕೇವಲ ತಟ್ಟಿಗಳನ್ನು ಹಾಕಲಾಗುತ್ತದೆ. ಜಾತ್ರೆ ಮುಗಿದ ಬಳಿಕ ತಟ್ಟಿಯನ್ನು ತೆಗೆದಿರಿಸಲಾಗುವುದು.
ಪ್ರತೀ ವರ್ಷ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವಕ್ಕೆ ಇನ್ನೇನು ತಿಂಗಳುಗಳು ಇರುವಂತೆ ಮೊದಲು ಈ ತಟ್ಟಿಯ ಚಪ್ಪರಕ್ಕೆ ವೈದಿಕ ಕಾರ್ಯಕ್ರಮಗಳೊಂದಿಗೆ ಮುಹೂರ್ತ ನೆರವೇರಿಸುವುದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ.
ಬೇಸಿಗೆ ಕಾಲದಲ್ಲಿ ತಟ್ಟಿಯ ಚಪ್ಪರವನ್ನು ಬಳಸಲಾಗುತ್ತದೆ. ಬೇಸಿಗೆ ಕಳೆದು ಮಳೆಗಾಲ ಆರಂಭವಾಗುತ್ತಿದ್ದಂತೆ ಶಾಶ್ವತವಾಗಿ ಅಳವಡಿಸಿದ ಕಂಬಗಳಿಗೆ ಹಳೆಯ ಮಾದರಿಯ ಟರ್ಪಾಲ್‍ಗಳನ್ನು ಹೊದೆಸಲಾಗುತ್ತದೆ.
ಪ್ರತೀ ಬಾರಿಯೂ ತೆಂಗಿನ ಮರದ ಮಡಲಿನ ತಟ್ಟಿಗಳನ್ನು ಖರೀದಿ ಮಾಡಿ ತಂದು ಹಾಕಲಾಗುತ್ತದೆ. ಈ ಬಾರಿ ಸಾರ್ವಜನಿಕರಿಂದ ದೇಣಿಗೆಯಾಗಿ ಪಡೆದುಕೊಳ್ಳುವ ಕುರಿತು ಚರ್ಚಿಸಲಾಗಿತ್ತು. ಆದರೆ ಅಷ್ಟರಲ್ಲಿ ತಟ್ಟಿಯನ್ನು ಖರೀದಿ ಮಾಡಲಾಗಿತ್ತು. ಆದ್ದರಿಂದ ಮುಂದಿನ ಬಾರಿ ಚಪ್ಪರದ ತಟ್ಟಿಗಳನ್ನು ದೇಣಿಗೆಯಾಗಿ ನೀಡಲು ಭಕ್ತಾದಿಗಳಿಗೆ ಅವಕಾಶ ನೀಡಲಾಗುವುದು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ತಿಳಿಸಿದ್ದಾರೆ.
ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಸಂದರ್ಭದಲ್ಲಿ ನಡೆಸುವ ಪ್ರತಿಯೊಂದು ಕಾರ್ಯಕ್ರಮಗಳಿಗೂ ವಿಶೇಷತೆಯಿದೆ. ಹಾಗೆಯೇ ದೇವಸ್ಥಾನದ ಒಳಾಂಗಣದಲ್ಲಿ ಹಾಕಲಾಗುವ ತೆಂಗಿನಮರದ ಮಡಲಿನಿಂದ ತಯಾರಿಸಿದ ತಟ್ಟಿಯ ಚಪ್ಪರಕ್ಕೂ ಮಹತ್ವವಿದೆ.
ಶಾಶ್ವತ ಕಂಬಗಳಿಗೆ ಅಡಕೆ ಮರದ ಬಣ್ಣ :
ಚಪ್ಪರಕ್ಕೆ ತಟ್ಟಿ ಅಳವಡಿಸುವ ಶಾಶ್ವತ ಕಂಬಗಳಿಗೆ ಅಡಕೆ ಮರದ ಬಣ್ಣಗಳನ್ನು ಬಳಿಯಲಾಗುತ್ತದೆ. ಇದು ಅಡಕೆ ಮರದ ಕಂಬದಂತೆ ಕಾಣಲಿದೆ. ಅಲ್ಲದೆ ಗುಡಿ, ನಂದಿ ಮಂಟಪಕ್ಕಿಂತ ಎತ್ತರದಲ್ಲಿ ಚಪ್ಪರ ಹಾಕಲಾಗಿದ್ದು, ಗರ್ಭಗುಡಿಗೆ ಮಾಡುವ ಶೃಂಗಾರಕ್ಕೂ ಧಕ್ಕೆಯಾಗದಂತಿದೆ.