ಪ್ರೊ. ಶ್ರೀಕೃಷ್ಣ ಭಟ್ ಅರ್ತಿಕಜೆಯವರೊಂದಿಗೆ ಶಿಷ್ಯಮಿಲನ

ಪುತ್ತೂರು: ಪುತ್ತೂರಿಗೆ ಆಗಮಿಸಿದ ಪ್ರೊ. ಶ್ರೀಕೃಷ್ಣ ಭಟ್ ಅರ್ತಿಕಜೆಯವರೊಂದಿಗೆ ಪುತ್ತೂರಿನ ಭಾಗದ ಅವರ ಶಿಷ್ಯಂದಿರ ಸುಮಧುರ ನೆನಪುಗಳ ಶಿಷ್ಯ ಮಿಲನ ಕಾರ್ಯಕ್ರಮ ಅನುರಾಗ ವಠಾರದಲ್ಲಿ ನಡೆಯಿತು.

ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗ ಎನ್ನುವಾಗ ಕನ್ನಡಿಗರಿಗೆ ಪ್ರೊ. ಮರಿಯಪ್ಪ ಭಟ್ಟ, ಪ್ರೊ. ಕುಶಾಲಪ್ಪ ಗೌಡ, ಪ್ರೊ. ಶ್ರೀಕೃಷ್ಣ ಭಟ್ ಅರ್ತಿಕಜೆ ಈ ಹೆಸರುಗಳು ಸ್ಮರಣೆಗೆ ಬಂದು ಹೋಗುತ್ತವೆ. ಯಾಕೆಂದರೆ ಅವರುಗಳು ಬರೀ ಪಾಠ ಮಾಡಿದವರಲ್ಲ. ಆದರಾಚೆಗೆ ನಿಂತು ವಿದ್ಯಾರ್ಥಿಗಳನ್ನು ಮದರಾಸಿನಲ್ಲಿ ನೋಡಿ ಕೊಂಡವರು, ಸಾಕಿದವರು, ಬೆಳೆಸಿದವರು. ವಿದ್ಯಾರ್ಥಿಗಳ ಜೊತೆಗೆ ಒಂದು ಭಾವನಾತ್ಮಕ ಸಂಬಂಧವನ್ನು ಬೆಳೆಸಿದವರು. ಹೊರನಾಡಿನಲ್ಲಿದ್ದು ವಿದ್ಯಾರ್ಥಿಗಳ ಮನಸ್ಸು ಗೆದ್ದು, ಅವರನ್ನು ಸರಿಯಾದ ದಿಕ್ಕಿನಲ್ಲಿ ಮುನ್ನೆಡೆಸಿ ಹಾರೈಸಿದವರು. ಈ ಹಿನ್ನೆಲೆಯಲ್ಲಿ ಕಾರ್ಯಿಕ್ರಮ ಆಯೋಜನೆಗೊಂಡಿತ್ತು.

ಶಿಷ್ಯ ಮಿಲನದ ಆಯೋಜನೆಯನ್ನು ಅವರ ಅಣ್ಣ ಪ್ರೊ. ವಿ.ಬಿ ಅರ್ತಿಕಜೆ ಅವರು ಪುತ್ತೂರಿನ ಅನುರಾಗ ವಠಾರದಲ್ಲಿ ನೆರವೇರಿಸಿದರು. ಈ ಕಾರ್ಯಕ್ರದಲ್ಲಿ ಅವರ ಶಿಷ್ಯಂದಿರು, ಹಿತೈಷಿಗಳು, ಬಂಧುಮಿತ್ರರು ಭಾಗವಹಿಸಿದ್ದರು.































 
 

ಪ್ರೊ. ಶ್ರೀಕೃಷ್ಣ ಭಟ್ ಅರ್ತಿಕಜೆ ಅವರು ಮಾತನಾಡಿ, ತಮ್ಮ ಬಾಲ್ಯ, ಶಿಕ್ಷಣ, ಮದರಾಸಿಗೆ ಹೋದದ್ದು, ಅಲ್ಲಿಯ ತರಗತಿಗಳು, ಹಿಂದಿ, ತಮಿಳು, ತೆಲುಗು ಮುಂತಾದ ಭಾಷೆಗಳನ್ನು ಕಲಿತದ್ದು, ವಿದ್ಯಾರ್ಥಿಗಳ ಜೊತೆಗಿನ ಒಡನಾಟ ಮುಂತಾದ ಅನೇಕ ಸಂಗತಿಗಳನ್ನು ಹಂಚಿಕೊಂಡರು. ರನ್ನನ ಗದಾಯುದ್ಧದ ಕೆಲವು ಪದ್ಯಗಳನ್ನು ಹಾಡಿ ಅವರ ವಿದ್ಯಾರ್ಥಿಗಳಿಗೆ ತರಗತಿ ಪಾಠ ಕೇಳಿದ ಹಳೆಯ ನೆನಪುಗಳನ್ನು ಮತ್ತೆ ಮರುಕಳಿಸುವಂತೆ ಮಾಡಿದರು.

ಕಾರ್ಯಕ್ರಮದಲ್ಲಿ ಶಿಷ್ಯಂದಿರು ಗುರುಗಳ ಒಡನಾಟದ ನೆನಪನ್ನು ತೆರೆದಿಟ್ಟರು. ಮದರಾಸಿಗೆ ಕನ್ನಡ ಎಂ.ಎ ಅಧ್ಯಯನಕ್ಕೆ ಹೋಗುವ ವಿದ್ಯಾರ್ಥಿಯನ್ನು ರೈಲ್ವೆ ಸ್ಟೇಷನ್ನಿಗೆ ಹೋಗಿ ಕರೆದುಕೊಂಡು ಬಂದು, ತಾನೇ ಫೀಸು ಕಟ್ಟಿ ಎಂ.ಎ. ಪದವಿಗೆ ಸೇರಿಸಿ, ಮನೆಯಲ್ಲಿ ಊಟ ಹಾಕಿ, ಆಮೇಲೆ ಹಾಸ್ಟೇಲಿನಲ್ಲಿ ಸೀಟು ಸಿಗುವಂತೆ ಮಾಡಿ, ಅಧ್ಯಯನಕ್ಕೆ ಅವಕಾಶ ಮಾಡುವಂತಹ ಇನ್ನೊಬ್ಬ ಪ್ರಾಧ್ಯಾಪಕ ಸಿಗಲಾರರು. ಅರ್ತಿಕಜೆಯವರಿಗೆ ಸಿಹಿ ಎಂದರೆ ತುಂಬಾ ಇಷ್ಟ, ಅವರ ಬದುಕು, ಆತಿಥ್ಯ, ಪ್ರೀತಿ, ತರಗತಿ ಎಲ್ಲವೂ ಸಿಹಿ ಸಿಹಿಯಾಗಿರುತ್ತಿತ್ತು. ಅವರ ತರಗತಿಗಳಲ್ಲಿ ಹಳೆಗನ್ನಡ ಕಾವ್ಯದ ಪದ್ಯಗಳನ್ನು ಹಾಡಿ ಪಾಠ ಮಾಡುವ ಕ್ರಮದಿಂದಾಗಿ ಅವರ ತರಗತಿಗಳು ರೋಮಾಂಚನದಿಂದ ಕೂಡಿರುತ್ತಿತ್ತು. ಎಲ್ಲರಿಗೂ ಅವರೊಂದು ಸ್ಫೂರ್ತಿಯ ಚಿಲುಮೆ. ಬದುಕನ್ನು ಥ್ರಿಲ್ಲ್ ಆಗಿ ಹೇಗೆ ಬದುಕಬಹುದೆಂದು ತೋರಿಸಿಕೊಟ್ಟವರು ಎಂದು ಹಿರಿಯ ವಿದ್ಯಾರ್ಥಿಗಳು, ಹಿತೈಸಿಗಳು, ಬಂಧುಮಿತ್ರರು ಮದರಾಸಿನಲ್ಲಿ ಪ್ರೊ. ಶ್ರೀಕೃಷ್ಣ ಭಟ್ ಅರ್ತಿಕಜೆಯವರ ಜೊತೆಗಿನ ಓಡನಾಟದ ಅನುಭವಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವಿಶ್ರಾಂತ ಮುಖ್ಯಸ್ಥ ಡಾ. ತಾಳ್ತಜೆ ವಸಂತ ಕುಮಾರ್, ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪುರಂದರ ಭಟ್, ಡಾ. ರೇಣುಕಾ ಶೆಟ್ಟಿ, ಡಾ. ವಿಶ್ವನಾಥ, ಡಾ. ವರದರಾಜ ಚಂದ್ರಗಿರಿ, ಡಾ. ಶ್ರೀಧರ ಎಚ್.ಜಿ, ಡಾ. ವಿಜಯ ಕುಮಾರ್ ಮೊಳೆಯಾರ್, ಡಾ. ನರೇಂದ್ರ ರೈ ದೇರ್ಲ ಹಾಗೂ ಪ್ರೊ. ಶ್ರೀಕೃಷ್ಣ ಭಟ್ ಅರ್ತಿಕಜೆ ಮೊದಲಾದವರು ಭಾಗವಹಿಸಿದ್ದರು.

ಪ್ರೊ. ವಿ ಬಿ ಅರ್ತಿಕಜೆ ಸ್ವಾಗತಿಸಿದರು. ಡಾ. ನರೇಂದ್ರ ರೈ ದೇರ್ಲ ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top