ಅಧಿಕಾರ ಉಳಿಸಿಕೊಳ್ಳಲು ಮೋದಿ ವರ್ಚಸ್ಸು ಬಳಕೆ
ದೆಹಲಿ : ಭಾರತದಲ್ಲಿ ಅಧಿಕಾರದಲ್ಲಿರುವ ಏಕೈಕ ರಾಜ್ಯ ಕರ್ನಾಟಕವನ್ನು ಉಳಿಸಿಕೊಳ್ಳಲು ತೀವ್ರ ಪ್ರಯತ್ನಪಡುತ್ತಿರುವ ಬಿಜೆಪಿ ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯನ್ನೇ ಪೂರ್ಣವಾಗಿ ನೆಚ್ಚಿಕೊಂಡಿದೆ. ಮುಂದಿನ ಒಂದು ತಿಂಗಳ ಅವಧಿಯಲ್ಲಿ ಕನಿಷ್ಠ 20 ರ‍್ಯಾಲಿಗಳಲ್ಲಿ ಮೋದಿ ಭಾಗವಹಿಸುವಂಥ ಯೋಜನೆಯನ್ನು ಪಕ್ಷದ ಚುನಾವಣಾ ರಣತಂತ್ರ ಹೆಣೆಯುತ್ತಿರುವ ತಂಡ ರೂಪಿಸುತ್ತಿದೆ.
ಈ ಬಾರಿ ಕಾಂಗ್ರೆಸ್ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಅಥವಾ ಬಹುಮತದ ಸಮೀಪಕ್ಕೆ ಬರುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ನುಡಿದಿರುವ ಭವಿಷ್ಯ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದಲ್ಲಿ ತಾನು ಅಧಿಕಾರದಲ್ಲಿರುವ ಏಕೈಕ ರಾಜ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡಲು ಮುಂದಾಗಿರುವ ಬಿಜೆಪಿ, ಇದಕ್ಕೆ ನರೇಂದ್ರ ಮೋದಿ ಅವರ ವರ್ಚಸ್ಸನ್ನು ಮತ ಗಳಿಕೆಗೆ ಬಳಸಿಕೊಳ್ಳಲು ನಿರ್ಧರಿಸಿದೆ.
ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಭ್ರಷ್ಟಾಚಾರದ ಆರೋಪಗಳ ಸರಮಾಲೆಯನ್ನೇ ಮಾಡಿ ಆಡಳಿತ ವಿರೋಧಿ ಅಲೆ ಎಬ್ಬಿಸಿದೆ. ಇದನ್ನು ಸಮರ್ಥವಾಗಿ ಎದುರಿಸಲು ಮೋದಿ ಮ್ಯಾಜಿಕ್ ಬಳಸಿಕೊಳ್ಳುವುದೇ ಪಕ್ಷದ ಮುಂದಿರುವ ಪ್ರಮುಖ ಅಸ್ತ್ರ ಎಂದು ಮನಗಂಡಿರುವ ಬಿಜೆಪಿ ನಾಯಕರು ರಾಜ್ಯದ 6 ವಿಭಾಗಗಳ ಪೈಕಿ ಪ್ರತಿಯೊಂದರಲ್ಲೂ ಮೋದಿ ನೇತೃತ್ವದ ಕನಿಷ್ಠ 3 ರ‍್ಯಾಲಿಗಳನ್ನು ಆಯೋಜಿಸಲು ಯೋಜಿಸಿದ್ದಾರೆ. ಜತೆಗೆ ಇಂಥ ರ‍್ಯಾಲಿ ಆಯೋಜನೆ ವೇಳೆ 40 ವಿಧಾನಸಭಾ ಕ್ಷೇತ್ರ ಒಳಗೊಂಡಿರುವ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರಾದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ರ‍್ಯಾಲಿ ಆಯೋಜನೆಗೆ ಉದ್ದೇಶಿಸಲಾಗಿದೆ ಎನ್ನಲಾಗಿದೆ. ಕಳೆದ ಬಾರಿ ಪಕ್ಷ ಇಲ್ಲಿ 15 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು.
ಬಹಿರಂಗ ಪ್ರಚಾರಕ್ಕೆ ಅಂತ್ಯಕ್ಕೆ ಮೊದಲಿನ ಮೂರು ದಿನಗಳನ್ನು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲೇ ಕಳೆಯಬಹುದು. ಮೇ 6-8ರಂದು ಮೋದಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಬಲವಾಗಿರುವ ವಲಯ ಅಥವಾ ಕ್ಷೇತ್ರಗಳಲ್ಲಿ ಪ್ರಮುಖವಾಗಿ ಪ್ರಚಾರ ಕೈಗೊಳ್ಳುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಜನರೊಂದಿಗೆ ನೇರವಾಗಿ ಬೆಸೆಯುವಂಥ ರ‍್ಯಾಲಿಗಳನ್ನು ಆಯೋಜಿಸಲಾಗುತ್ತಿದೆ. ಚುನಾವಣೆ ಘೋಷಣೆಗೂ ಮುನ್ನ ಹುಬ್ಬಳ್ಳಿ ಮತ್ತು ಮಂಡ್ಯದ ರ್ಯಾಲಿಗಳಲ್ಲಿ ಈ ತಂತ್ರವನ್ನು ಅನುಸರಿಸಲಾಗಿತ್ತು. ಇಂಥ ಪ್ರಚಾರದ ವೇಳೆ ಸ್ಥಳೀಯ ವಿಷಯಗಳನ್ನು ಪ್ರಸ್ತಾಪಿಸುವ ಮತ್ತು ಸ್ಥಳೀಯ ನಾಯಕರನ್ನು ಪ್ರಮುಖವಾಗಿ ಬಿಂಬಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.