ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಮೊದಲ ಶಾಸಕ ಕೂಜುಗೋಡು ವೆಂಕಟ್ರಮಣ ಗೌಡ. ಈಗಿನ ಶಾಸಕ ಸಂಜೀವ ಮಠಂದೂರು.
ಶಾಸಕ ಸಂಜೀವ ಮಠಂದೂರು ಅವರು ಕೂಜುಗೋಡು ವೆಂಕಟ್ರಮಣ ಗೌಡ ಅವರ ಮನೆಗೆ ಭೇಟಿ ನೀಡಿದರು. ಗೌಡ ಸಮುದಾಯದ ಪ್ರತಿಷ್ಠಿತ ಮನೆತನವಾದ ಕೂಜುಗೋಡು ಕಟ್ಟೆಮನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇವರಿಬ್ಬರೂ ಪ್ರತಿಷ್ಠಿತ ಗೌಡ ಸಮುದಾಯದ ಮನೆತನಗಳಿಗೆ ಸೇರಿದವರು ಎನ್ನುವುದೇ ಇಲ್ಲಿನ ವಿಶೇಷತೆ.
ಅವಿಭಜಿತ ವಿಧಾನಸಭಾ ಕ್ಷೇತ್ರ:
1952ರಲ್ಲಿ ಸುಳ್ಯ, ಬೆಳ್ತಂಗಡಿ ಹಾಗೂ ಪುತ್ತೂರು ಒಂದೇ ವಿಧಾನಸಭಾ ಕ್ಷೇತ್ರವಾಗಿತ್ತು. ಅದು ಪುತ್ತೂರು ವಿಧಾನಸಭಾ ಕ್ಷೇತ್ರ. ಆಗ ಶಾಸಕರಾಗಿದ್ದವರು ಕೂಜುಗೋಡು ವೆಂಕಟ್ರಮಣ ಗೌಡ ಅವರು. ಪ್ರತಿಷ್ಠಿತ ಮನೆತನಕ್ಕೆ ಸೇರಿದ ಅವರು, ವೃತ್ತಿಯಲ್ಲಿ ವಕೀಲರು. ಪುತ್ತೂರು, ಸುಳ್ಯ, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ ಸಮಗ್ರ ಅಭಿವೃದ್ಧಿಯಲ್ಲಿ ಇವರ ಪಾತ್ರ ಪ್ರಮುಖವಾದದ್ದು. ಕುದುರೆ ಗಾಡಿಯಲ್ಲಿ ಓಡಾಡುತ್ತಿದ್ದ ಅವರು, ತನ್ನ ವಿಧಾನಸಭಾ ಕ್ಷೇತ್ರದಾದ್ಯಂತ ಕುದುರೆ ಗಾಡಿಯಲ್ಲೇ ಸಂಚರಿಸುತ್ತಿದ್ದರು ಎನ್ನುವುದು ನೋಡುಗರ ಮಾತು.
ಮೊದಲ ಶಾಸಕ:
ದೇಶ ಸ್ವತಂತ್ರವಾದದ್ದು 1947ರಲ್ಲಿ. 1950ರಲ್ಲಿ ಗಣತಂತ್ರ ಆಚರಿಸಲಾಯಿತು. 1952ರಲ್ಲಿ ದೇಶದಲ್ಲಿ ಮೊದಲ ಪ್ರಜಾಪ್ರಭುತ್ವ ಹಬ್ಬ (ಚುನಾವಣೆ)ವನ್ನು ಆಚರಿಸಲಾಯಿತು. ಆಗ ಅವಿಭಜಿತ ಪುತ್ತೂರು ವಿಧಾನಸಭಾ ಕ್ಷೇತ್ರ (ಪುತ್ತೂರು, ಸುಳ್ಯ, ಬೆಳ್ತಂಗಡಿ)ದ ಶಾಸಕರಾಗಿ ಆಯ್ಕೆಯಾದವರು ಕೂಜುಗೋಡು ಕಟ್ಟೆಮನೆ ವೆಂಕಟ್ರಮಣ ಗೌಡ ಅವರು. ಆ ಬಳಿಕ ಗೌಡ ಸಮುದಾಯದ ಪ್ರತಿನಿಧಿಗಳಾಗಿ ಆಯ್ಕೆಯಾದವರು ಎ. ಶಂಕರ ಗೌಡ, ಡಿ.ವಿ. ಸದಾನಂದ ಗೌಡ ಹಾಗೂ ಇಂದು ಸಂಜೀವ ಮಠಂದೂರು.
ಕೂಜುಗೋಡು ಕಟ್ಟೆಮನೆ:
ಪಂಜ ಸೀಮೆಯನ್ನೊಳಗೊಂಡ 9 ಮಾಗಣೆಗಳ ಸಾಂಪ್ರದಾಯಿಕ ಹಕ್ಕು ಸ್ವಾಮ್ಯದ ಅಧಿಕಾರವನ್ನು ಹೊಂದಿದ್ದ ಕುಟುಂಬ ಕಟ್ಟೆಮನೆ. ಶೃಂಗೇರಿ ಮಠದಿಂದ ಕಟ್ಟೆಮನೆ ಎಂದು ಕರೆಸಿಕೊಂಡು, ಮೊದಲು ನೆಲೆನಿಂತ ಪ್ರದೇಶವೇ ಕೂಜುಗೋಡು. ಆದ್ದರಿಂದ ಕೂಜುಗೋಡು ಕಟ್ಟೆಮನೆ ಎಂಬ ಹೆಸರಿನಿಂದಲೇ ಈ ಮನೆತನ ಪ್ರಖ್ಯಾತವಾಯಿತು. ಸಾಮಾಜಿಕ ನ್ಯಾಯ ದಾನಕ್ಕಾಗಿ, ಧಾರ್ಮಿಕ ಯೋಗಕ್ಷೇಮ ಪರಿಪಾಲಕರಾಗಿ ಕಾರ್ಯನಿರ್ವಹಿಸಿ, ಮುಂದೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಪ್ರಖ್ಯಾತವಾಯಿತು.
ಗೌಡ ಸಮುದಾಯದ ಕೊಡುಗೆ:
ಅಮರ ಸುಳ್ಯದ ದಂಗೆಯ ಅಮರ ಸೇನಾನಿಗಳಾದ ಮಲ್ಲಪ್ಪ ಗೌಡ, ಕುಂಬಪ್ಪ ಗೌಡ, ಅಪ್ಪಯ್ಯ ಗೌಡರು ಇದೇ ಕುಟುಂಬ ಹಿನ್ನೆಲೆಯವರು. ಇತಿಹಾಸ ಪ್ರಸಿದ್ಧ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಚುಕ್ಕಾಣಿಯನ್ನು ಈ ಕುಟುಂಬ ಹಿಡಿದಿತ್ತು. ಭಾರತದ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ, ಶಾಸಕರಾಗಿ ಆಯ್ಕೆಯಾದವರು ಇದೇ ಮನೆತನದ ಕೂಜುಗೋಡು ಕಟ್ಟೆಮನೆ ವೆಂಕಟ್ರಮಣ ಗೌಡ ಅವರು.
ಗೌಡ ಮನೆತನ ನಾಯಕತ್ವಕ್ಕೆ ಹೆಸರುವಾಸಿ. ಸ್ವಾತಂತ್ರ್ಯ ಹೋರಾಟ ಹಾಗೂ ಸ್ವಾತಂತ್ರ್ಯ ನಂತರದ ವಿದ್ಯಮಾನಗಳಿಂದ ಇದು ವೇದ್ಯವಾಗುತ್ತದೆ. ಸ್ವಾತಂತ್ರ್ಯ ನಂತರದಲ್ಲಿ ಮೊದಲ ಶಾಸಕರಾಗಿದ್ದವರು ಇದೇ ಗೌಡ ಸಮುದಾಯದ ಹಿರಿಯ ವ್ಯಕ್ತಿ ವೆಂಕಟ್ರಮಣ ಗೌಡ. ನಂತರದಲ್ಲಿ ಎ. ಶಂಕರ ಗೌಡ, ಡಿ.ವಿ. ಸದಾನಂದ ಗೌಡ ಹಾಗೂ ಸಂಜೀವ ಮಠಂದೂರು. ಇವರ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳೇ, ಗೌಡ ಸಮುದಾಯದ ನಾಯಕತ್ವ ಗುಣಗಳಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಮೇಲಿನ ನಾಯಕರ ಅವಧಿ ಹಲವು ಮೈಲುಗಲ್ಲುಗಳಿಗೆ ಸಾಕ್ಷಿಯಾಗಿವೆ. ಅಭಿವೃದ್ಧಿಯಲ್ಲಿ ಹೊಸ ಶಕೆಯೇ ಆರಂಭವಾಗಿವೆ. ಇವೆಲ್ಲವೂ ಗೌಡ ಸಮುದಾಯದ ಪ್ರತಿಷ್ಠಿತ ಮನೆಗಳಿಗೆ ಸಲ್ಲುವ ಗೌರವ ಎಂಬ ಪ್ರಶಂಸೆಯೂ ವ್ಯಕ್ತವಾಗಿದೆ.