ಪುನೀತ್ ಕೆರೆಹಳ್ಳಿ ನೇತೃತ್ವದ ಗ್ಯಾಂಗ್ ಥಳಿಸಿ ಕೊಂದಿದೆ ಎಂಬ ಆರೋಪ
ಬೆಂಗಳೂರು : ರಾಮನಗರ ಜಿಲ್ಲೆಯ ಕನಕಪುರ ಸಮೀಪದ ಸಾತನೂರಿನಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಗೋರಕ್ಷಕರ ತಂಡದ ದಾಳಿಗೆ ಸಿಲುಕಿ ದನಗಳನ್ನು ಸಾಗಿಸುತ್ತಿದ್ದ ವಾಹನದ ಚಾಲಕ ಹತ್ಯೆಯಾಗಿದ್ದಾನೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಬಲಪಂಥೀಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಮತ್ತು ಇತರ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಂಡ್ಯ ನಿವಾಸಿ ಇದ್ರೀಸ್ ಪಾಷಾ (39) ಎಂಬವರ ಮೃತದೇಹ ಸಾತನೂರು ಪೊಲೀಸ್ ಠಾಣೆಯಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿತ್ತು. ಇರ್ಫಾನ್ ಮತ್ತು ಸೈಯದ್ ಜಹೀರ್ ಅವರೊಂದಿಗೆ ಪಾಷಾ ಸುಮಾರು 15 ಜಾನುವಾರುಗಳನ್ನು ವಾಹನದಲ್ಲಿ ಸಾಗಿಸುತ್ತಿದ್ದಾಗ ಶುಕ್ರವಾರ ರಾತ್ರಿ 11.45ರ ಸುಮಾರಿಗೆ ಸಂತೆಮಾಳ ವೃತ್ತದ ಬಳಿ ಕಾರಿನಲ್ಲಿ ಬಂದವರು ಅವರನ್ನು ಅಡ್ಡಗಟ್ಟಿದ್ದರು. ಅಪಾಯದ ಮುನ್ಸೂಚನೆಯನ್ನು ಅರಿತ ಪಾಷಾ ಮತ್ತು ಇರ್ಫಾನ್ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ವೇಳೆ ಜಹೀರ್ ಸಿಕ್ಕಿಬಿದ್ದಿದ್ದು, ಆತನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುನೀತ್ ಕೆರೆಹಳ್ಳಿ 2 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದು, ಕೊಡದಿದ್ದರೆ ಮುಗಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಜಾನುವಾರುಗಳನ್ನು ಖರೀದಿಸಿ ತಮಿಳುನಾಡಿಗೆ ಕೊಂಡೊಯ್ಯಲಾಗುತ್ತಿದೆ ಎಂದು ಜಹೀರ್ ಹೇಳಿದರೂ ಅವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಎರಡೂ ಕಡೆಯವರನ್ನು ಠಾಣೆಗೆ ಕರೆದೊಯ್ದಿದ್ದು, ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪ ಹೊರಿಸಿ ಕೆರೆಹಳ್ಳಿ ದೂರು ದಾಖಲಿಸಿದ್ದಾರೆ. ಕೆರೆಹಳ್ಳಿ ವಿರುದ್ಧವೂ ಪ್ರತಿ ದೂರು ದಾಖಲಾಗಿತ್ತು.
ಶನಿವಾರ ಬೆಳಗ್ಗೆ ಪಾಷಾ ಶವ ಪತ್ತೆಯಾದ ಬಳಿಕ ಅವರ ಕುಟುಂಬಸ್ಥರು ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ನಂತರ ಪೊಲೀಸರು ಕೆರೆಹಳ್ಳಿ ಸೇರಿ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು.
ಪಾಷಾ ಸಾವಿಗೆ ಕಾರಣ ತಿಳಿಯಲು ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ ಎಂದು ಅವರು ಹೇಳಿದರು.
ದೇಹದ ಮೇಲೆ ಹಲ್ಲೆ ಮಾಡಿದ ಗುರುತುಗಳಿರುವುದರಿಂದ ಗೋರಕ್ಷಕರು ಚಿತ್ರಹಿಂಸೆ ನೀಡಿ ಸಾಯಿಸಿದ್ದಾರೆ ಎಂದು ಪಾಷಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಪುನೀತ್ ಕೆರೆಹಳ್ಳಿ ಬಲಪಂಥೀಯ ಕಾರ್ಯಕರ್ತನಾಗಿದ್ದು, ರಾಷ್ಟ್ರ ರಕ್ಷಣಾ ಪಡೆ ಎಂಬ ಸಂಘಟನೆಯನ್ನು ಕಟ್ಟಿಕೊಂಡು ಅಕ್ರಮ ಗೋ ಸಾಗಾಟವನ್ನು ತಡೆಯುತ್ತಿದ್ದಾನೆ. ಈ ಹಿಂದೆ ಹಲಾಲ್ ಮಾಂಸ ಬಹಿಷ್ಕಾರ ಅಭಿಯಾನದಲ್ಲಿ ಮುಂಚೂಣಿಯಲ್ಲಿದ್ದರು. ಮುಸ್ಲಿಮರೊಂದಿಗೆ ವ್ಯಾಪಾರ ಮಾಡುವುದು ಬೇಡ ಅಭಿಯಾನ ಮಾಡಿದ್ದ.