ಫೆಬ್ರವರಿ ತಿಂಗಳಲ್ಲಿ 45 ಲಕ್ಷಕ್ಕೂ ಅಧಿಕ ಭಾರತೀಯರ ವಾಟ್ಸ್​ಆ್ಯಪ್ ಖಾತೆ ಬ್ಯಾನ್‌

ಸೇವಾ ಷರತ್ತುಗಳ ಉಲ್ಲಂಘನೆಯನ್ನು ಆಧರಿಸಿ ಈ ಕ್ರಮ

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್​ಆ್ಯಪ್ ಫೆಬ್ರವರಿ ತಿಂಗಳಲ್ಲಿ 45 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನು ನಿರ್ಬಂಧಿಸಿದೆ. 2021 ಬಳಕೆದಾರರ ಸುರಕ್ಷತ ಕಾಯಿದೆ 4(1)(D) ಅಡಿಯಲ್ಲಿ ವಾಟ್ಸ್​ಆ್ಯಪ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಫೆಬ್ರವರಿ 1ರಿಂದ 28ರ ಅವಧಿಯಲ್ಲಿ ಅನೇಕ ದೂರುಗಳನ್ನು ಸ್ವೀಕರಿಸಲಾಗಿದೆ. ವಾಟ್ಸ್​ಆ್ಯಪ್​ ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ಬಳಕೆದಾರರ ದೂರುಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, ಅದರಂತೆ 4,597,400 ವಾಟ್ಸ್​ಆ್ಯಪ್​ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಮೆಟಾ ತಿಳಿಸಿದೆ. ಈ ಹಿಂದೆ ಜನವರಿ ತಿಂಗಳಲ್ಲಿ ಕೂಡ ಭಾರತದಲ್ಲಿ 29 ಲಕ್ಷಕ್ಕೂ ಅಧಿಕತ ಖಾತೆಗಳನ್ನು ನಿಷೇಧಿಸಿದೆ ಎಂದು ವಾಟ್ಸ್​ಆ್ಯಪ್ ಹೇಳಿತ್ತು.

ಬ್ಯಾನ್‌ ಆಗಿರುವ ಖಾತೆಗಳು ಕಿರುಕುಳ, ನಕಲಿ ಮಾಹಿತಿಯನ್ನು ಫಾರ್ವರ್ಡ್ ಮಾಡುವುದು, ಇತರ ಬಳಕೆದಾರರನ್ನು ವಂಚಿಸಿರುವುದು ಕಂಡುಬಂದಿದೆ. ಇದಲ್ಲದೆ ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಈ ಖಾತೆಗಳನ್ನು ನಿಷೇಧಿಸಲಾಗಿದೆ. ಮೇ 26 ರಂದು ಜಾರಿಗೆ ಬಂದ ಹೊಸ ಐಟಿ ನಿಯಮಗಳ ಪ್ರಕಾರ ದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಪ್ರತಿ ತಿಂಗಳು ವರದಿಗಳನ್ನು ಪ್ರಕಟಿಸಬೇಕು. ಈ ವರದಿಯಲ್ಲಿ ಸ್ವೀಕರಿಸಿದ ದೂರುಗಳು ಹಾಗೂ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸ್ಪಷ್ಟನೆ ನೀಡಬೇಕು.































 
 

ವಾಟ್ಸ್​ಆ್ಯಪ್ ತನ್ನ ಬಳಕೆದಾರರ ಸುರಕ್ಷತೆಗೆ ಹೆಚ್ಚು ಗಮನ ಹರಿಸುತ್ತಿದೆ. ಆದರೆ ಇದಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ಚಂದಾದಾರರ ಮೇಲೆ ನಿಷೇಧ ವಿಧಿಸುತ್ತದೆ. ವಾಟ್ಸ್‌ಆ್ಯಪ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಕಾನೂನು ಬಾಹಿರ, ಅಶ್ಲೀಲ, ಮಾನಹಾನಿಕರ, ಬೆದರಿಕೆಯ, ಕಿರುಕುಳದ, ದ್ವೇಷಪೂರಿತ ಸಂದೇಶಗಳನ್ನು ಕಳುಹಿಸಿದರೆ ನಿಮ್ಮನ್ನು ವಾಟ್ಸ್‌ಆ್ಯಪ್ ಬ್ಯಾನ್ ಮಾಡುತ್ತದೆ. ಹಿಂಸಾತ್ಮಕ ಅಪರಾಧಗಳನ್ನು ಪ್ರಚೋದಿಸುವ ಅಥವಾ ಉತ್ತೇಜಿಸುವ ಸಂದೇಶಗಳನ್ನು ಕಳುಹಿಸಿದರೂ ವಾಟ್ಸ್‌ಆ್ಯಪ್ ನಿಮ್ಮನ್ನು ಬ್ಯಾನ್ ಮಾಡಬಹುದು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top