ಪುತ್ತೂರು: ವರ್ಷದಲ್ಲಿ ಒಂದು ಬಾರಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ತಾಲೂಕಿನಲ್ಲಿರುವ ಎಲ್ಲಾ ಸಾಹಿತಿಗಳಿಗೆ ಮತ್ತು ಕಲಾವಿದರಿಗೆ ವೇದಿಕೆ ನೀಡಲು ಹಾಗೂ ಸಾಧಕರನ್ನು ಸನ್ಮಾನಿಸಲು ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ ಪುತ್ತೂರು ತಾಲೂಕಿನ 32 ಗ್ರಾಮದಲ್ಲೂ ತಿಂಗಳಿಗೆ ಒಂದರಂತೆ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ ಕಾರ್ಯಕ್ರಮವನ್ನು ಏರ್ಪಡಿಸಿ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಹಾಗೂ ಸಾಧಕರನ್ನ ಗುರುತಿಸುವ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ ಎಂದು ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಹೇಳಿದರು.
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಕಬಕ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಸಂಯೋಜನೆಯಲ್ಲಿ ಭಾನುವಾರ ಕಬಕ ಗೌಡ ಸಮುದಾಯ ಭವನದಲ್ಲಿ ನಡೆದ ಗ್ರಾಮ ಗ್ರಾಮದಲ್ಲೂ ಸಾಹಿತ್ಯ ಸಂಭ್ರಮದ ಐದನೇ ಸರಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಬಕ ಗ್ರಾಪಂ ಪಿಡಿಒ ಅಶಾ ಇ. ಮಾತನಾಡಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆಯುವ ಈ ಕಾರ್ಯಕ್ರಮ ಕಬಕ ಗ್ರಾಮದಲ್ಲಿ ನಡೆಯುವುದು ಅತ್ಯಂತ ಸಂತೋಷದ ಸಂಗತಿಯಾಗಿದ್ದು, ಸ್ಥಳೀಯ ವಿದ್ಯಾರ್ಥಿಗಳು ಸಾಹಿತ್ಯದಲ್ಲಿ ತೊಡಗಿಸಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರು.
ಶಾಸನ ಅಧ್ಯಯನಕಾರ ಉಮಾನಾಥ್ ಶೆಣೈ, ಸಾಹಿತಿ ಶಿಕ್ಷಕಿ ಶಾಂತಾ ಪುತ್ತೂರು, ಸಂಗೀತ ಕಲಾವಿದರಾದ ಮಿಥುನ್ ರಾಜ್ ವಿದ್ಯಾಪುರ, ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಡಾ.ಶ್ರೀಶ ಭಟ್, ಶಿಕ್ಷಣ ಕ್ಷೇತ್ರದ ಪ್ರೇಮಲತಾ ಎಂ,ಶ್ರೀಮತಿ ಸುಲೋಚನಾ ಕೆ ರವರನ್ನು ಸ್ಥಳೀಯ ಸಾಧಕರ ನೆಲೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅವರಿಗೆ ಗಡಿನಾಡಭೂಷಣ ರಾಜ್ಯ ಪ್ರಶಸ್ತಿಯನ್ನು ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಡಾ ಅಬೂಬ್ಬಕರ್ ಆರ್ಲಪದವು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾದ ಹರಿಪ್ರಸಾದ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾದಂಬರಿಕಾರ, ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಗೋಷ್ಠಿಗಳು ನಡೆದವು. ಹಿರಿಯ ಸಾಹಿತಿ ಗಣೇಶ್ ಪ್ರಸಾದ್ ಪಾಂಡೆಲು ಅವರ ಅಧ್ಯಕ್ಷತೆಯಲ್ಲಿ ನಡೆದ ಬಾಲ ಕವಿ ಗೋಷ್ಠಿ ನಡೆಯಿತು. ನಿವೃತ್ತ ಪ್ರಾಂಶುಪಾಲ ಡಾ ಪೀಟರ್ ವಿಲ್ಸನ್ ಪ್ರಭಾಕರ್ ಅಧ್ಯಕ್ಷತೆಯಲ್ಲಿ ಯುವ ಕವಿಗೋಷ್ಠಿ ನಡೆಯಿತು. ಮುರ ಎಂ.ಪಿ.ಎಂ.ವಿದ್ಯಾಲಯ ಸಂಚಾಲಕ ಎಂ ಪಿ ಅಬೂಬಕ್ಕರ್ ಅವರ ನೆನಪಿರಲಿ ಎಂಬ ಕೃತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕಥೆ ಮತ್ತು ಕವನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಗೌಡ ಸಮುದಾಯ ಭವನದ ಕಾರ್ಯಕಾರಿ ಸಮಿತಿ ಸದಸ್ಯ ನಾರಾಯಣ ಗೌಡ ಕಾರ್ಯಕ್ರಮ ಉದ್ಘಾಟಿಸಿದರು.ಕಸಾಪ ಕೊಶಾಧ್ಯಕ್ಷ ,ಡಾ.ಹರ್ಷ ಕುಮಾರ್ ರೈ ಮಾಡಾವು, ಪುತ್ತೂರು,ರೋಟರಿ ಯುವ ಅಧ್ಯಕ್ಷೆ ರಾಜೇಶ್ವರಿ ಆಚಾರ್ಯ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಡಾ.ಸುರೇಶ್ ನೆಗಳಗುಳಿ, ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ಶ್ರೀ ನಾರಾಯಣ ಕುಂಬ್ರ ಉಪಸ್ಥಿತರಿದ್ದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷೆ ಶಾಂತಾ ಪುತ್ತೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕಾರ್ಯದರ್ಶಿ ಆನಂದ ರೈ ಅಡ್ಕಸ್ಥಳ ವಂದಿಸಿದರು. ಅಪೂರ್ವ ಕಾರಂತ್, ಕುಮಾರಿ ಸೌಜನ್ಯ ಬಿಎಂ, ಜಯರಾಮ್ ಪಡ್ರೆ ವಿವಿಧ ಗೋಷ್ಠಿಗಳನ್ನು ನಿರೂಪಿಸಿದರು.