ಕಾಗೇರಿ ನಿವಾಸಕ್ಕೆ ಭೇಟಿ ನೀಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ
ಶಿರಸಿ : ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗಿತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಜೆಡಿಎಸ್ನ ಎಟಿ ರಾಮಸ್ವಾಮಿ, ಗುಬ್ಬಿ ಶ್ರೀನಿವಾಸ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಇದೀಗ ಅರಸಿಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಕೊನೆಗೂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 400ಕ್ಕೂ ಅಧಿಕ ಮುಖಂಡರ ಜೊತೆ ಏ. 2 ರಂದು ಶಿರಸಿಯಲ್ಲಿರುವ ಸ್ಪೀಕರ್ ನಿವಾಸಕ್ಕೆ ಭೇಟಿ ನೀಡಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.
ರಾಜೀನಾಮೆ ಬಳಿಕ ಮಾತನಾಡಿದ ಶಿವಲಿಂಗೇಗೌಡ, ಪಕ್ಷದಲ್ಲಿನ ಭಿನ್ನಾಭಿಪ್ರಾಯದಿಂದ ರಾಜೀನಾಮೆ ನೀಡಿದ್ದೆನೆ. ನನಗೆ ಗೆಲವು ಸೋಲು ಮುಖ್ಯವಲ್ಲ. ಪಕ್ಷದಲ್ಲಿನ ಭಿನ್ನಾಭಿಪ್ರಾಯದಿಂದ ರಾಜೀನಾಮೆ ನೀಡಿದ್ದೆನೆ. ಯಾರ್ಯಾರೋ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೋಗಿದ್ದಾರೆ. ಹಾಗೇ ನಾನು ಮಾಡಿದ್ದೆನೆ. ದೇವೆಗೌಡರು ಇರುವರಿಗೂ ಪಕ್ಷ ಬಿಡುವುದಿಲ್ಲ ಎಂಬ ಮಾತನ್ನ ನಾನು ಎಲ್ಲೂ ಹೇಳಿಲ್ಲ. ಕುಮಾರಸ್ವಾಮಿ ಮತ್ತು ದೇವೆಗೌಡರ ನಡುವೆ ಸಂಬಂಧ ಚನ್ನಾಗಿರುತ್ತೆ, ಆದರೆ ರಾಜಕೀಯವಾಗಿ ಅಲ್ಲ. ಜೆಡಿಎಸ್ ಪಕ್ಷದಲ್ಲಿ ನನಗೆ ಸಹಕಾರ ಕೊಟ್ಟವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಜ್ವಲ್ ರೇವಣ್ಣ ನನಗೆ ಸವಾಲ್ ಹಾಕಿದ್ದಾರೆ. ನಾನು ಅವರಿಗೆ ಸವಾಲ್ ಹಾಕುವುದಿಲ್ಲ. ಜನ ಅವರಿಗೆ ಸವಾಲ್ ಹಾಕುತ್ತಾರೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯುತ್ತೇನೆ ಎಂದು ಸ್ಪಷ್ಟಪಡಿಸಿದರು.
ಇನ್ನು ಶಿವಲಿಂಗೇಗೌಡ ಅವರು ಈಗಾಗಲೇ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದು, ಅದರಂತೆ ನಾಳೆ ಅಥವಾ ನಾಡಿದ್ದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಈಗಾಗಲೇ ಜೆಡಿಎಸ್ ಶಾಸಕರಾಗಿದ್ದ ಗುಬ್ಬಿ ಶ್ರೀನಿವಾಸ್ ಅವರು ಸಹ ಕಾಂಗ್ರೆಸ್ ಸೇರಿದ್ದಾರೆ. ಇನ್ನು ಅರಕಲಗೂಡು ಜೆಡಿಎಸ್ ಶಾಸಕರಾಗಿದ್ದ ಎಟಿ ರಾಮಸ್ವಾಮಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಈಗಾಗಲೇ ಬಿಜೆಪಿ ಸೇರ್ಪಡೆಯಾಗಿದ್ದಾರೆ.