ಗಾದಿ ತೋರಿಸಿ ಆಸೆ ಜೀವಂತವಾಗಿರಿಸಿ ಗೆಲ್ಲುವ ತಂತ್ರ
ಪುತ್ತೂರು : ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ರಾಜಕೀಯ ಚಟುವಟಿಕೆಗಳು ಇನ್ನಷ್ಟು ಬಿರುಸು ಪಡೆದುಕೊಂಡಿವೆ. ಮೂರು ಪ್ರಮುಖ ಪಕ್ಷಗಳು ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಆದರೆ ಚುನಾವಣಾ ಪ್ರಕ್ರಿಯೆ ನಿರ್ಣಾಯಕ ಹಂತಕ್ಕೆ ಬಂದು ತಲುಪಿದ್ದರೂ ಮತದಾರರಿಗೆ ಈ ಸಲ ಮುಖ್ಯಮಂತ್ರಿ ಯಾರಾಗಬಹುದು ಎಂಬ ಒಂದು ಸಣ್ಣ ಅಂದಾಜು ಕೂಡ ಸಿಗುತ್ತಿಲ್ಲ. ಪಕ್ಷಗಳಲ್ಲೇ ಯಾರನ್ನು ಮುಖ್ಯಮಂತ್ರಿ ಮಾಡಬೇಕೆಂಬ ನಿರ್ಧಾರ ಇನ್ನೂ ಆಗಿಲ್ಲ.
ಜೆಡಿಎಸ್‌ನಲ್ಲಿ ಮಾತ್ರ ಈ ಗೊಂದಲ ಇಲ್ಲ. ಏಕೆಂದರೆ ಬಹುಮತ ಸಿಕ್ಕಿದರೆ ಆ ಪಕ್ಷದಿಂದ ಎಚ್. ಡಿ. ಕುಮಾರಸ್ವಾಮಿಯೊಬ್ಬರೇ ಮುಖ್ಯಮಂತ್ರಿ ಅಭ್ಯರ್ಥಿ. ಆದರೆ ಮೂರು ಜಿಲ್ಲೆಗಳಲ್ಲಿ ಮಾತ್ರ ಪ್ರಾಬಲ್ಯ ಹೊಂದಿರುವ ಜೆಡಿಎಸ್ 113 ಸ್ಥಾನಗಳನ್ನು ಗೆದ್ದು ಮುಖ್ಯಮಂತ್ರಿಯಾಗುವ ವಿಶ್ವಾಸ ಮತದಾರರಿಗೆ ಮಾತ್ರವಲ್ಲ ಆ ಪಕ್ಷದವರಿಗೇ ಇಲ್ಲ.
ಇನ್ನು ಬಿಜೆಪಿ ಮತ್ತು ಕಾಂಗ್ರೆಸ್ ಕಡೆಗೆ ಬಂದರೆ ಈ ಎರಡೂ ಪಕ್ಷಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಸಾಲುಗಟ್ಟಿ ನಿಂತವರು ಬಹಳ ಮಂದಿ ಇದ್ದಾರೆ. ಹೀಗಾಗಿ ಪಕ್ಷದ ವರಿಷ್ಠರು ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಲ್ಲ. ಅಂದರೆ ಈ ಸಲ ಇಡೀ ಚುನಾವಣೆ ಮುಂದಿನ ಮುಖ್ಯಮಂತ್ರಿ ಯಾರು ಆಗಬಹುದು ಎಂಬ ಒಂದು ಸಣ್ಣ ಕಲ್ಪನೆಯೂ ಮತದಾರರಿಗೆ ಇಲ್ಲದೆ ನಡೆಯುತ್ತಿದೆ ಎನ್ನುವುದೊಂದು ವಿಶೇಷ. ಈ ಹಂತದಲ್ಲಿ ಯಾರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೆ ಭುಗಿಲೇಳಬಹುದಾದ ಭಿನ್ನಮತ ಮತ್ತು ಅದು ಚುನಾವಣೆ ಮೇಲೆ ಉಂಟುಮಾಡಬಹುದಾದ ಪರಿಣಾಮವನ್ನು ಊಹಿಸಿ ಬಿಜೆಪಿ ಮತ್ತು ಕಾಂಗ್ರೆಸ್ ವರಿಷ್ಠರು ಈ ಸಲ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಯಾರನ್ನೂ ಬಿಂಬಿಸದಯೇ ಚುನಾವಣೆ ಎದುರಿಸುವ ತಂತ್ರ ರೂಪಿಸಿದ್ದಾರೆ. ಅಂದರೆ ಮತಗಟ್ಟೆಗೆ ಹೋಗಿ ಮತಚಲಾಯಿಸುವ ತನಕ ಮತದಾರನಿಗೆ ತನ್ನನ್ನು ಮುಂದಿನ ಐದು ವರ್ಷ ಯಾರು ಆಳಬಹುದು ಎಂಬ ಅಂದಾಜು ಇರುವುದಿಲ್ಲ.
2018ರ ಚುನಾವಣೆಯಲ್ಲಿ ಈ ಪರಿಸ್ಥಿತಿ ಇರಲಿಲ್ಲ. ಕಾಂಗ್ರೆಸ್ ಗೆದ್ದಿದ್ದರೆ ಸಿದ್ದರಾಮಯ್ಯ ಅವರು ಮರಳಿ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಿತ್ತು. ಪ್ರಚಾರದ ಸಂದರ್ಭದಲ್ಲಿ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಿರಲಿಲ್ಲ. ಆದರೆ ಆ ದಿನಗಳಲ್ಲಿ ಅವರನ್ನು ಬಿಟ್ಟು ಬೇರೆ ಯಾರಿಗೂ ಮುಖ್ಯಮಂತ್ರಿ ಪಟ್ಟ ಸಿಗುವ ಸಾಧ್ಯತೆಯಿಲ್ಲ ಎಂಬಂಥ ವಾತಾವರಣ ಕಾಂಗ್ರೆಸ್‌ನಲ್ಲಿತ್ತು. ಬಿಜೆಪಿಯಲ್ಲಿ ಚುನಾವಣೆಗೂ ಒಂದು ವರ್ಷ ಮೊದಲೇ ಯಡಿಯೂರಪ್ಪನವರೇ ಮುಂದಿನ ಮುಖ್ಯಮಂತ್ರಿ ಎಂದು ಅಮಿತ್ ಶಾ ಘೋಷಿಸಿ ಮುಖ್ಯಮಂತ್ರಿ ಅಭ್ಯರ್ಥಿ ಕುರಿತಾದ ಯಾವ ಗೊಂದಲವೋ ಇಲ್ಲದಂತೆ ಮಾಡಿದ್ದರು. ಆದರೆ ಯಾವ ಪಕ್ಷಕ್ಕೂ ಬಹುಮತ ಸಿಗದೆ ಹೋದದ್ದು, ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಹೀನಾಯವಾಗಿ ಸೋತು ಮುಖಭಂಗ ಅನುಭವಿಸಿದ್ದು, ಸಂದರ್ಭಕ್ಕೆ ತಕ್ಕಂತೆ ಕುಮಾರಸ್ವಾಮಿಯನ್ನು ಸಿಂಗರಿಸಿ ಮುಖ್ಯಮಂತ್ರಿ ಪಟ್ಟದ ಮೇಲೆ ಕುಳ್ಳಿರಿಸಿದ್ದು, ಈ ಸರಕಾರವನ್ನು ಕೆಡವಿ ಬಿಜೆಪಿ ಆಪರೇಷನ್ ಕಮಲದ ಮೂಲಕ ಅಧಿಕಾರ ದಕ್ಕಿಸಿಕೊಂಡು ಯಡಿಯೂರಪ್ಪ ಮುಖ್ಯಮಂತ್ರಿಯಾದದ್ದೆಲ್ಲ ಈಗ ಇತಿಹಾಸ. ಹಾಗೂ ಹೀಗೂ ಅಧಿಕಾರವಧಿ ಪೂರೈಸಿದ ಬಿಜೆಪಿಯೂ ಇಬ್ಬರು ಮುಖ್ಯಮಂತ್ರಿಯನ್ನು ಕಾಣಬೇಕಾಯಿತು.
ಕಾಂಗ್ರೆಸ್‌ನಲ್ಲಿ ಈ ಸಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಮುಖ್ಯಮಂತ್ರಿ ಗಾದಿಯ ಪ್ರಬಲ ಆಕಾಂಕ್ಷಿಗಳು. ಇಬ್ಬರೂ ಬಹಿರಂಗವಾಗಿ ಮುಖ್ಯಮಂತ್ರಿಯಾಗುವ ತಮ್ಮ ಅಪೇಕ್ಷೆಯನ್ನು ಹೇಳಿಕೊಂಡಿದ್ದಾರೆ. ಈ ಕಾರಣಕ್ಕೆ ಇಬ್ಬರೂ ಈ ಸಲ ಪಕ್ಷಕ್ಕೆ ಪೂರ್ಣ ಬಹುಮತ ದೊರಕಿಸಿಕೊಡುವ ತೀವ್ರ ಪ್ರಯತ್ನದಲ್ಲಿದ್ದಾರೆ. ಮುಖ್ಯಮಂತ್ರಿಯಾಗಲು ಇವರಿಬ್ಬರ ಮಧ್ಯೆ ಮುಸುಕಿನ ಗುದ್ದಾಟ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಕಾರಣಕ್ಕೆ ಕಾಂಗ್ರೆಸ್ ವರಿಷ್ಠರು ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರು ಘೋಷಿಸದೆ ಮೊದಲು ಬಹುಮತ ಸಿಗಲಿ, ಮತ್ತೆ ನೋಡಿಕೊಳ್ಳೋಣ ಎಂಬ ನಿಲುವಿಗೆ ಬಂದಿದ್ದಾರೆ.
ಬಿಜೆಪಿ ಇನ್ನೂ ಅಭ್ಯರ್ಥಿಗಳನ್ನೇ ಅಂತಿಮಗೊಳಿಸಿಲ್ಲ. ಹೀಗಾಗಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದು ದೂರವೇ ಉಳಿಯಿತು. ಒಂದು ವೇಳೆ ಘೋಷಿಸಿದರೂ ಖಂಡಿತ ಬಂಡಾಯ ಶುರುವಾಗುತ್ತದೆ ಎನ್ನುವುದು ಬಿಜೆಪಿ ಹೈಕಮಾಂಡ್‌ಗೆ ಚೆನ್ನಾಗಿ ತಿಳಿದಿದೆ. ಇತ್ತೀಚೆಗೆ ಅಮಿತ್ ಶಾ ನಾವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿರುವುದೇನೂ ನಿಜ. ಹಾಗೆಂದು ಇದನ್ನು ಗೆದ್ದರೆ ಬೊಮ್ಮಾಯಿಯೇ ಮುಂದಿನ ಮುಖ್ಯಮಂತ್ರಿ ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿಯಾಗಿರುವುದರಿಂದ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಬೇಕಾದುದು ಬೊಮ್ಮಾಯಿಯವರ ಸಹಜ ಧರ್ಮ ಎಂದು ಅರ್ಥೈಸಿಕೊಳ್ಳಬಹುದು. ತೀವ್ರ ಹಣಾಹಣಿ ಇರುವುದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ವರಿಷ್ಠರು ಮೊದಲು ಪಕ್ಷಕ್ಕೆ ಬಹುಮತ ತಂದುಕೊಡಿ, ನಂತರ ಮುಖ್ಯಮಂತ್ರಿಯನ್ನು ತೀರ್ಮಾನಿಸುತ್ತೇವೆ ಎಂಬ ಸೂಕ್ಷ್ಮ ಸಂದೇಶವನ್ನು ಕೊಟ್ಟಿದ್ದಾರೆ. ಅಂದರೆ ಯಾರಿಗೂ ನಾವು ಮುಖ್ಯಮಂತ್ರಿಯಾಗಬಹುದು ಎಂಬ ಪೂರ್ಣ ವಿಶ್ವಾಸ ಇಲ್ಲ, ಆದರೆ ಇದೇ ವೇಳೆ ವರಿಷ್ಠರು ಚುನಾವಣೆಯಲ್ಲಿ ತಾನು ಬಹುಮತ ದೊರಕಿಸಲು ಹಾಕಿದ ಶ್ರಮವನ್ನು ನೋಡಿ ಮುಖ್ಯಮಂತ್ರಿ ಮಾಡಿದರೂ ಮಾಡಬಹುದು ಎಂಬ ದೂರದ ಒಂದು ನಿರೀಕ್ಷೆಯೂ ಇದೆ. ಹೀಗೆ ದೂರದಿಂದಲೇ ಮುಖ್ಯಮಂತ್ರಿ ಪಟ್ಟವನ್ನು ತೋರಿಸಿ ಆಶೆಯನ್ನು ಜೀವಂತವಾಗಿರಿಸಿ ಹುರಿಯಾಳುಗಳನ್ನು ಅಖಾಡಕ್ಕೆ ನೂಕುವ ತಂತ್ರವನ್ನು ಎರಡು ರಾಷ್ಟ್ರೀಯ ಪಕ್ಷಗಳು ಅನುಸರಿಸಿರುವುದು ಖಂಡಿತ ಈ ಸಲದ ಚುನಾವಣೆಯ ವೈಶಿಷ್ಟ್ಯಗಳಲ್ಲಿ ಒಂದು.