ಸಾಯಲು ಹೊರಟಿದ್ದ ಅವರ ಬದುಕನ್ನು ಆ ಸಿನೆಮಾ ಬದಲಾಯಿಸಿತ್ತು

ಸಾಧು ಕೋಕಿಲಾ ಎಂಬ ಮಲ್ಟಿ ಟ್ಯಾಲೆಂಟೆಡ್ ಸ್ಟಾರ್ ಕಲಾವಿದ ಕನ್ನಡದ ಹೆಮ್ಮೆ

ಈ ವ್ಯಕ್ತಿಯ ಬಹು ಆಯಾಮದ ಪ್ರತಿಭೆಗಳ ಬಗ್ಗೆ ನನಗೆ ಭಾರಿ ಅಚ್ಚರಿ ಮತ್ತು ಅಭಿಮಾನ. ಭಾರತದ ಅತ್ಯಂತ ವೇಗದ ಕೀಬೋರ್ಡ್ ಪ್ಲೇಯರಗಳಲ್ಲಿ ಅವರು ಕೂಡ ಒಬ್ಬರು. ಕರ್ನಾಟಕದ ಅತ್ಯಂತ ಹೆಚ್ಚು ಬೇಡಿಕೆಯ ಹಾಸ್ಯನಟ, ಅತಿ ಶ್ರೇಷ್ಠ ಸಂಗೀತ ನಿರ್ದೇಶಕ, ಒಳ್ಳೆಯ ಗಾಯಕ, ಯಶಸ್ವಿ ಸಿನೆಮಾ ನಿರ್ದೇಶಕ, ಹಲವು ರಿಯಾಲಿಟಿ ಶೋಗಳ ಸೆಲೆಬ್ರಿಟಿ ಜಡ್ಜ್‌, ಸಮಾಜ ಸೇವಕ, ರಾಜಕಾರಣಿ… ಹೀಗೆ ಅವರ ಪ್ರೊಫೈಲ್ ವಿಸ್ತಾರ ಆಗುತ್ತ ಹೋಗುತ್ತದೆ.

ಆ ಪ್ರತಿಭೆಯ ಹಿಂದೆ ತೀವ್ರ ಹಸಿವು ಇತ್ತು































 
 

ಈ ಪ್ರತಿಭೆಯ ಹಿಂದೆ ತೀವ್ರ ಹಸಿವು, ಬಡತನ, ಹೋರಾಟ ಮತ್ತು ಅಪಮಾನಗಳ ಹಿನ್ನೆಲೆ ಇದೆ. ಸಹಾಯ ಶೀಲನ್ ಸಾಧ್ರಕ್ ಇದು ಅವರ ಬಾಲ್ಯದ ಹೆಸರು. ಹುಟ್ಟಿದ್ದು ಬೆಂಗಳೂರಿನಲ್ಲಿ. ಅವರ ತಂದೆ ಪೊಲೀಸ್ ಆಗಿದ್ದರು ಮತ್ತು ಮುರುಗನ್ ದೇವಳದಲ್ಲಿ ಪಿಟೀಲು ವಾದಕ ಕೂಡ. ತಾಯಿ ಆರ್ಕೆಸ್ಟ್ರಾ ಸಿಂಗರ್ ಆಗಿದ್ದವರು. ಕಲಿಕೆಯಲ್ಲಿ ಕೂಡ ಮುಂದಿದ್ದ ಹುಡುಗ. ಕ್ರೀಡೆಯಲ್ಲಿ ಕೂಡ ಶ್ರೇಷ್ಠ ಸಾಧಕ. ಫುಟ್ಬಾಲಿನಲ್ಲಿ ರಾಜ್ಯ ತಂಡದ ಕ್ಯಾಪ್ಟನ್. ಆದರೆ ಬಾಲ್ಯದಿಂದ ಅಂಟಿಕೊಂಡು ಬಂದ ಬಡತನ ಅವರ ಈ ಎಲ್ಲ ಪ್ರತಿಭೆಯನ್ನು ಖಾಲಿ ಮಾಡಿತು. ಆರ್ಥಿಕ ನಿರ್ವಹಣೆಯಲ್ಲಿ ಎಡವಿದ ಕಾರಣಕ್ಕೆ ಅವರ ಕುಟುಂಬವು ತುಂಬ ಸಂತ್ರಸ್ತ ಆಗಿತ್ತು.


ಎಂಟನೇ ತರಗತಿಗೆ ಹುಡುಗನ ಶಿಕ್ಷಣ ನಿಂತುಹೋಯಿತು. ಅವರು ಮತ್ತು ಅಣ್ಣ ಲಯೇಂದ್ರ ರಸ್ತೆ ಬದಿಯ ಕಸದ ತೊಟ್ಟಿಯಲ್ಲಿ ಆಹಾರ ಹುಡುಕಿದ ದಿನಗಳೂ ಇದ್ದವು ಎಂದು ಸಾಧು ಕೋಕಿಲ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಆದರೆ ಆ ಹಸಿವಿನ ನಡುವೆ ಕೂಡ ಅವರು ಇಳಯರಾಜಾ ಅವರ ಸಂಗೀತ ಕೇಳುವ, ಮ್ಯೂಸಿಕ್ ನೋಟ್ ಬರೆದುಕೊಳ್ಳುವ ಅಭ್ಯಾಸವನ್ನು ಮಾತ್ರ ಬಿಡಲಿಲ್ಲ.

ಒಂದು ಇಂಗ್ಲಿಷ್ ಸಿನೆಮಾ ಅವರ ಬದುಕನ್ನು ಬದಲಾಯಿಸಿತು

ಒಮ್ಮೆ 14ನೇ ವಯಸ್ಸಿನಲ್ಲಿ ತುಂಬಾ ಅವಮಾನ ಸಹಿಸಲು ಆಗದೆ ನೊಂದುಕೊಂಡು ಆತ್ಮಹತ್ಯೆ ಮಾಡಲು ಸಾಧು ಕೋಕಿಲ ನಿರ್ಧಾರ ಮಾಡಿದ್ದರು. ಹಲಸೂರು ಕೆರೆಯ ಹೋಗಿ ಮಾನಸಿಕವಾಗಿ ಸಾಯಲು ಸಿದ್ಧರಾಗುತ್ತಿದ್ದರಂತೆ. ಆದರೆ ಸಾಯುವ ಮೊದಲು ಬ್ಲೂಮೂನ್ ಥೇಟರಿನಲ್ಲಿ STICH IN TIME ಎಂಬ ಇಂಗ್ಲಿಷ್ ಕಾಮೆಡಿ ಸಿನೆಮಾ ನೋಡಲು ಮನಸ್ಸಾಯಿತು. ಆ ಸಿನೆಮಾ ನೋಡಿ ಸಾಧು ಕೋಕಿಲ ಹೊಟ್ಟೆ ತುಂಬಾ ನಕ್ಕರು. ಮತ್ತೆ ಮತ್ತೆ ಆ ಸಿನೆಮಾ ನೋಡಿದರು. ಆ ಸಿನೆಮಾ ಅವರ ಸಾಯುವ ನಿರ್ಧಾರವನ್ನು ಬದಲಾಯಿಸಿತು. ಸಾಧನೆಯ ಹಸಿವು ತೀವ್ರವಾಯಿತು.

ಅಶ್ವಥ್ ಸಂಗೀತ ಸಂಜೆಗಳಲ್ಲಿ ಕೀ ಬೋರ್ಡ್ ಪ್ಲೇಯರ್

ಮುಂದೆ ಸಿ. ಅಶ್ವತ್ಥ್ ಅವರ ನೂರಾರು ಸಂಗೀತ ಸಂಜೆಯ ಕಾರ್ಯಕ್ರಮಗಳಲ್ಲಿ ಕೀ ಬೋರ್ಡ್ ನುಡಿಸುತ್ತ ಸಂಗೀತ ಲೋಕದ ಪ್ರವೇಶ ಮಾಡಿದರು. ಗಾಡ್‌ಫಾದರ್ ಇಲ್ಲದೆ ಕನ್ನಡ ಸಿನೆಮಾ ರಂಗದಲ್ಲಿ ನೆಲೆ ನಿಲ್ಲುವುದು ಕಷ್ಟ. ಅದಕ್ಕಾಗಿ ಸಾಧು ಕೋಕಿಲ ತೀವ್ರವಾದ ಹೋರಾಟ ಮಾಡಬೇಕಾಯಿತು. ಸ್ವಭಾವತಃ ಗಂಭೀರ ವ್ಯಕ್ತಿತ್ವದ ಸಾಧು ಕೋಕಿಲ ಅನಿವಾರ್ಯ ಸಂದರ್ಭದಲ್ಲಿ ಹಾಸ್ಯ ನಟರಾಗಿ ಕನ್ನಡ ಸಿನೆಮಾ ರಂಗಕ್ಕೆ ಎಂಟ್ರಿ ಪಡೆದರು. ಭಾರಿ ಬೇಡಿಕೆ ಗಳಿಸಿದರು. ಅದೇ ರೀತಿ ಮುಂದೆ ಉಪೇಂದ್ರ ಅವರ ಶ್! (1993) ಸಿನೆಮಾದ ಮೂಲಕ ಮೊದಲ ಬಾರಿಗೆ ಮ್ಯೂಸಿಕ್ ಕಂಪೋಸರ್ ಆದರು.

ಭಾರಿ ಜನಪ್ರಿಯ ಹಾಸ್ಯ ನಟ ಮತ್ತು ಸಂಗೀತ ನಿರ್ದೇಶಕ

ಈ ವರೆಗೆ ಅವರು 450ಕ್ಕೂ ಮಿಕ್ಕಿ ಸಿನಿಮಾಗಳಲ್ಲಿ ಹಾಸ್ಯನಟರಾಗಿ ಮಿಂಚಿದ್ದಾರೆ. ಪರದೆಯಲ್ಲಿ ಸಾಧು ಕೋಕಿಲ ಮೂಡಿ ಬಂದ ಕೂಡಲೇ ಜನ ಸುರಿಸುವ ಚಪ್ಪಾಳೆ ಮತ್ತು ಶಿಳ್ಳೆ ಅದ್ಭುತ. ಆ ಚಪ್ಪಾಳೆಯೇ ತನಗೆ ಆಶೀರ್ವಾದ ಅನ್ನುತ್ತಾರೆ ಅವರು.
ಅಷ್ಟೇ ಅಲ್ಲದೆ ಅನಾಥರು, ರಕ್ತ ಕಣ್ಣೀರು ಮೊದಲಾದ ಏಳು ಕನ್ನಡದ ಸೂಪರ್ ಹಿಟ್ ಸಿನೆಮಾಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಮೂರು ಬಾರಿ ಅತ್ಯುತ್ತಮ ಸಂಗೀತ ನಿರ್ದೇಶಕ ರಾಜ್ಯ ಪ್ರಶಸ್ತಿ, ಒಮ್ಮೆ ಅತ್ತ್ಯುತ್ತಮ ಗಾಯಕ ರಾಜ್ಯ ಪ್ರಶಸ್ತಿ ಮತ್ತು ಮೂರು ಬಾರಿ ಅತ್ಯುತ್ತಮ ಹಾಸ್ಯ ನಟ ರಾಜ್ಯ ಪ್ರಶಸ್ತಿ ಇಷ್ಟೆಲ್ಲಾ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದ ಏಕೈಕ ಕನ್ನಡದ ಚಿತ್ರ ಕಲಾವಿದ ಎಂದರೆ ಅದು ಸಾಧು ಕೋಕಿಲ ಮತ್ತು ಸಾಧು ಕೋಕಿಲ ಮಾತ್ರ.
ಹೀಗೆ ಮೂರು ಮೂರು ವಿಭಾಗಗಳಲ್ಲಿ ರಾಜ್ಯ ಪ್ರಶಸ್ತಿ ಪಡೆದ ಇನ್ನೊಬ್ಬ ಸಿನೆಮಾ ಕಲಾವಿದ ಭಾರತದಲ್ಲಿಯೇ ಇಲ್ಲ ಅನ್ನುವುದು ಸಾಧು ಕೋಕಿಲ ಅವರ ಪ್ರತಿಭೆಗೆ ಸಾಕ್ಷಿ. ರಾಕ್ಷಸ ಮತ್ತು ಇಂತೀ ನಿನ್ನ ಪ್ರೀತಿಯ ಸಿನೆಮಾಗಳ ಸಂಗೀತ ನಿರ್ದೇಶನಕ್ಕೆ ಅವರಿಗೆ ರಾಜ್ಯ ಪ್ರಶಸ್ತಿಗಳು ಬಂದಿವೆ. ಹೆಚ್ಚು ಕಡಿಮೆ ಎಲ್ಲ ಸಂಗೀತ ವಾದ್ಯಗಳನ್ನು ನುಡಿಸುವ ಸಾಮರ್ಥ್ಯ ಸಾಧು ಕೋಕಿಲ ಅವರಿಗೆ ಇದೆ.

ಸಂಗೀತವೆ ನನ್ನ ಉಸಿರು ಎಂದವರು ಸಾಧು ಕೋಕಿಲ

ಹತ್ತಾರು ಕ್ಷೇತ್ರದಲ್ಲಿ ಭಾರಿ ಸಾಧನೆ ಮಾಡಿದರೂ ಸಂಗೀತವೇ ನನ್ನ ಉಸಿರು, ಅದು ನನ್ನ ಮೊದಲ ಮತ್ತು ಕೊನೆಯ ಆಯ್ಕೆ ಎಂದು ನುಡಿಯುವ ಸಾಧು ಕೋಕಿಲ ಮಾರ್ಚ್ 24ರಂದು ತನ್ನ 57ನೆಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅವರಿಗೆ ಶುಭವಾಗಲಿ.
✒️ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top