3 ವರ್ಷದ ಬಳಿಕ ಪೊಲೀಸರಿಗೆ ಸಿಕ್ಕಿದ ಕುಖ್ಯಾತ ಪಾತಕಿ
ಲಖನೌ : ಮೂರು ವರ್ಷದ ಹಿಂದೆ ಕ್ರಿಕೆಟಿಗ ಸುರೇಶ್ ರೈನಾ ಅವರ ಮೂವರು ಸಂಬಂಧಿಕರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಕುಖ್ಯಾತ ಕ್ರಿಮಿನಲ್‌ನನ್ನು ಮುಜಾಫರ್‌ನಗರದ ಶಾಹಪುರ್ ಪ್ರದೇಶದಲ್ಲಿ ಎನ್‌ಕೌಂಟರ್‌ನಲ್ಲಿ ಪೊಲೀಸರು ಹೊಡೆದುರುಳಿಸಿದ್ದಾರೆ.
ತ್ರಿವಳಿ ಕೊಲೆ ಸೇರಿದಂತೆ ಹತ್ತಾರು ಡಕಾಯಿತಿ ಮತ್ತು ಕೊಲೆ ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿ ರಶೀದ್ ಅಲಿಯಾಸ್ ಚಲ್ತಾ ಫಿರ್ತಾ ಅಲಿಯಾಸ್ ಸಿಪಾಹಿಯಾ ತಲೆಗೆ 50 ಸಾವಿರ ರೂ.ಬಹುಮಾನ ಘೋಷಿಸಲಾಗಿತ್ತು. ನಿನ್ನೆ ರಾತ್ರಿ ಆತ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.
ಶಹಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂತಾರಾಜ್ಯ ಗ್ಯಾಂಗ್‌ನ ಸದಸ್ಯರು ತಲೆಮರೆಸಿಕೊಂಡಿರುವ ಮಾಹಿತಿ ಸಿಕ್ಕಿದ ನಂತರ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಲಾಯಿತು. ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದು ರಶೀದ್ ಹತ್ಯೆಯಾಗಿದ್ದು ಆತನ ಸಹಾಯಕ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಎನ್‌ಕೌಂಟರ್ ಸ್ಥಳದಿಂದ ಎರಡು ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
2020ರಲ್ಲಿ ಪಠಾಣ್‌ಕೋಟ್‌ನ ತರಿಯಾಲ್ ಗ್ರಾಮದಲ್ಲಿ ಆಗಸ್ಟ್ 19 ಮತ್ತು 20ರ ಮಧ್ಯರಾತ್ರಿ ತ್ರಿವಳಿ ಕೊಲೆ ನಡೆದಿತ್ತು. ರೈನಾ ಅವರ ಚಿಕ್ಕಪ್ಪ, ಗುತ್ತಿಗೆದಾರ ಅಶೋಕ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಕುಮಾರ್ ಅವರ ಮಗ ಕೌಶಲ್ ಆಗಸ್ಟ್ 31 ರಂದು ಸಾವನ್ನಪ್ಪಿದರು. ಕುಮಾರ್ ಅವರ ಪತ್ನಿ ಆಶಾರಾಣಿ ಹಾಗೂ ಇನ್ನಿಬ್ಬರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಬಂಧಿತರಾದವರಲ್ಲಿ ರಾಜಸ್ಥಾನದ ಜುಂಜುನು ಜಿಲ್ಲೆಯ ಮೂವರು ಗ್ಯಾಂಗ್ ಸದಸ್ಯರು ಸೇರಿದ್ದಾರೆ.