ಸಂಘವನ್ನು ಕೌರವರಿಗೆ ಹೋಲಿಸಿ ಟೀಕಿಸಿದ್ದ ರಾಹುಲ್
ದೆಹಲಿ : ಮೋದಿ ಕುಲನಾಮದವರೆಲ್ಲ ಕಳ್ಳರೆಂದು ಹೇಳಿ ಇತ್ತೀಚೆಗಷ್ಟೆ ಸೂರತ್ ಕೋರ್ಟ್‌ನಿಂದ ಶಿಕ್ಷೆಗೆ ಗುರಿಯಾಗಿ ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.
ಭಾರತ್ ಜೋಡೊ ಯಾತ್ರೆಯ ಯಾತ್ರೆ ವೇಳೆ ಸಾರ್ವಜನಿಕವಾಗಿ ನೀಡಿದ್ದ ಹೇಳಿಕೆಯಿಂದ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಯಾತ್ರೆಯ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು 21 ನೇ ಶತಮಾನದ ಕೌರವರೊಂದಿಗೆ ರಾಹುಲ್ ಗಾಂಧಿ ಅವರು ಹೋಲಿಕೆ ಮಾಡಿದ್ದರು. ಆರ್‌ಎಸ್‌ಎಸ್‌ನವರು ಈಗ ಖಾಕಿ ಹಾಫ್ ಪ್ಯಾಂಟ್ ಧರಿಸಿದ್ದಾರೆ. ಕೈಯಲ್ಲಿ ಲಾಠಿ ಹಿಡಿದು ಶಾಖಾಗಳಲ್ಲಿದ್ದಾರೆ. ಭಾರತದ 2-3 ಬಿಲಿಯನೇರ್‌ಗಳು ಕೌರವರ ಜತೆ ನಿಂತಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು.
ಕೌರವರು ಟೀಕೆ ವಿರುದ್ಧ ಹರಿದ್ವಾರದ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. RSS ಸ್ವಯಂಸೇವಕ ಕಮಲ್ ಭಡೋರಿಯಾ ಎಂಬವರು ದೂರು ಸಲ್ಲಿಸಿದ್ದಾರೆ.
ನ್ಯಾಯಾಲಯ ಏ.12 ರಂದು ಈ ದೂರಿನ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಭಾರತೀಯ ದಂಡ ಸಂಹಿತೆಯ 499 ಮತ್ತು 500 ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಾಗಿದೆ. ಎರಡು ನಿಬಂಧನೆಗಳು ಕ್ರಿಮಿನಲ್ ಮಾನನಷ್ಟಕ್ಕೆ ಸಂಬಂಧಿಸಿವೆ ಮತ್ತು ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆಗೆ ಅವಕಾಶವಿದೆ ಎಂದು ವಕೀಲರು ತಿಳಿಸಿದ್ದಾರೆ.
ಕಳೆದ ಜನವರಿ 11ರಂದು ಕಮಲ್ ಭಡೋರಿಯಾ ಅವರು ರಾಹುಲ್ ಗಾಂಧಿಯವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದರೂ ಅವರು ಉತ್ತರಿಸಲಿಲ್ಲ ಎನ್ನಲಾಗಿದೆ. ಹೀಗಾಗಿ ಅವರ ಮೇಲೆ ದೂರು ದಾಖಲಿಸಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ.