ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸ್ಯಾಂಕಿ ರಸ್ತೆ ಅಗಲೀಕರಣ ಮತ್ತು ಮೇಲ್ಸೇತುವೆ ಯೋಜನೆ ಸಂಬಂಧ ಭೂ ಸಾರಿಗೆ ಪ್ರಾಧಿಕಾರ (ಬಿಎಂಎಲ್‌ಟಿಎ) ಒಪ್ಪಿಗೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದ್ದರು, ಒಮ್ಮೆಲೇ ಯೋಜನೆ ಕೈಬಿಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದ ಜಟ್ಕಾ ಓಆರ್‌ಗ್ ನ ಕಾರ್ಯಕರ್ತರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ತೀವ್ರ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆಗೆ ಬಿಬಿಎಂಪಿ ಬ್ರೇಕ್ ಹಾಕಿತ್ತು. ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ (ಬಿಎಂಎಲ್‌ಟಿಎ) ಒಪ್ಪಿಗೆ ನೀಡಿದ ನಂತರವೇ ಈ ಯೋಜನೆಗೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿತ್ತು.
ಆದರೂ ಇದಕ್ಕೆ ಒಪ್ಪದ ಜಟ್ಕಾ ಓಆರ್‌ಗ್ ನ ಕಾರ್ಯಕರ್ತರು, ಒಮ್ಮೆಲೆ ಯೋಜನೆಯನ್ನು ಕೈಬಿಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಯೋಜನೆ ಕೈಬಿಡದ ಹೊರತು ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಹೇಳಿದ್ದರು.
ಪ್ರತಿಭಟನೆಯ ನೇತೃತ್ವವನ್ನು ಜಟ್ಕಾ ಓಆರ್‌ಗ್ ವಹಿಸಿತ್ತು. ಈ ಹಿನ್ನೆಲೆಯಲ್ಲಿ ಜಾಟ್ಕಾ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನೋಟಿಸ್ ಜಾರಿ ಮಾಡಿದ್ದಾರೆ.
ಜಟ್ಕಾ ಓಆರ್‌ಗ್ ನ ಮ್ಯಾನೇಜಿಂಗ್ ಟ್ರಸ್ಟಿ ಅವಿಜಿತ್ ಮೈಕೆಲ್ ಅವರು ಮಾತನಾಡಿ, ಐಪಿಸಿ ಸೆಕ್ಷನ್ 341, 141 (ಕಾನೂನು ಬಾಹಿರ ಸಭೆ) ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ನೋಟಿಸ್ ಕಳುಹಿಸಿದ್ದಾರೆ. ನೋಟಿಸ್ ನನ್ನ ಕೈಸೇರಿದೆ ಎಂದು ಹೇಳಿದ್ದಾರೆ.
ನಾವು ಯಾವುದೇ ರೀತಿಯ ಕಾನೂನು ಬಾಹಿರ ಸಭೆಗಳನ್ನು ನಡೆಸಿಲ್ಲ. ಪ್ರತಿಭಟನೆ ಶಾಂತಿಯುತವಾಗಿ ನಡೆದಿತ್ತು. ಇಲ್ಲಿ ಯಾವುದೇ ಕ್ರಿಮಿನಲ್ ಚಟುವಟಿಕೆ ನಡೆದಿಲ್ಲ, ಹೀಗಾಗಿ ಎಫ್‌ಐಆರ್ ರದ್ದುಪಡಿಸವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರುತ್ತೇವೆ. ಪೊಲೀಸರು ನಮ್ಮೊಂದಿಗೆ ಉತ್ತಮವಾಗಿ ವರ್ತಿಸಿದ್ದಾರೆ. ಇಂತಹ ಕಪೋಲಕಲ್ಪಿತ ಪ್ರಕರಣಗಳ ದಾಖಲಿಸುವಲ್ಲಿ ರಾಜಕೀಯ ಒತ್ತಡವಿದೆ ಎಂಬುದರಲ್ಲಿ ಯಾವುದೇ ಸಂಶಯಗಳಿಲ್ಲ ಎಂದು ಮೈಕೆಲ್ ತಿಳಿಸಿದ್ದಾರೆ.
ಫೆಬ್ರವರಿ 19, 2023 ರಂದು, ಮರಗಳನ್ನು ಉಳಿಸಲು ಶಾಂತಿಯುತ ಮೆರವಣಿಗೆಯನ್ನು ನಡೆಸಲಾಯಿತು. ಈ ವೇಳೆ ನಾಗರಿಕರು ಕಪ್ಪು ಬಟ್ಟೆಯನ್ನು ಧರಿಸಿದ್ದರು. ಜನಸಂಚಾರಕ್ಕೆ ಯಾವುದೇ ಅಡೆತಡೆಯಾಗದಂತೆ ಫುಟ್‌ಪಾತ್‌ನಲ್ಲಿ ಕ್ರಮಬದ್ಧವಾಗಿ ಮೆರವಣಿಗೆ ನಡೆಸಲಾಯಿತು. ಅದಾಗ್ಯೂ ಐಪಿಸಿಯ ಅನೇಕ್ ಸೆಕ್ಷನ್ ಗಳ ಉಲ್ಲಂಘನೆ ಕುರಿತು ಸದಾಶಿವ ನಗರ ಪೊಲೀಸರಿಂದ ನೋಟಿಸ್ ಬಂದಿದೆ.
ನೋಟಿಸ್’ನಲ್ಲಿ ನಮ್ಮ ವಿರುದ್ಧ ಐಪಿಸಿ ಸೆಕ್ಷನ್ 341, 141, 149, ಮತ್ತು 283, ಅಕ್ರಮ ಬಂಧನ, ಕಾನೂನುಬಾಹಿರ ಸಭೆ ಮತ್ತು ಸಾರ್ವಜನಿಕ ದಾರಿಗೆ ಅಡ್ಡಿಪಡಿಸುವಿಕೆ ಕುರಿತು ಪ್ರಕರಣ ದಾಖಲಾಗಿದೆ.ಪ್ರತಿಭಟನೆಯ ಸಮಯದಲ್ಲಿ ನಾನು ಮತ್ತು ಇತರೆ ಪ್ರತಿಭಟನಾಕಾರರು ಈ ಸೆಕ್ಷನ್‌ಗಳನ್ನು ಉಲ್ಲಂಘಿಸಿದ್ದೇವೆಂದು ಪೊಲೀಸರು ಹೇಳಿದ್ದಾರೆಂದು ಮೈಕಲ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಟಿಜನ್ಸ್ ಫಾರ್ ಸ್ಯಾಂಕಿಯ ಸಹ-ಸಂಸ್ಥಾಪಕಿ ಪ್ರೀತಿ ಸುಂದರರಾಜನ್ ಅವರು, “ನನ್ನ ಸ್ನೇಹಿತರು ಮತ್ತು ನೆರೆಹೊರೆಯವರು ಸ್ಥಳೀಯ ಜೊತೆಗೂಡಿ ಮೌನ ಪ್ರತಿಭಟನೆ ನಡೆಸಲಾಗಿತ್ತು. ಇದನ್ನು ಕಾನೂನುಬಾಹಿರ ಎಂದು ಕರೆದಿರುವುದು ಆಘಾತವನ್ನು ತಂದಿದೆ. ಇದು ನಿಜಕ್ಕೂ ಅವಮಾನ ಮತ್ತು ಅಪಹಾಸ್ಯವಾದದ್ದು. ಪ್ರಜಾಪ್ರಭುತ್ವದ ಕುರಿತು ಜನತೆ ಒಂದು ಅರ್ಥವನ್ನು ಹೊಂದಿದ್ದರೆ, ಪೊಲೀಸರು, ಸರ್ಕಾರ ವಿಭಿನ್ನ ಅರ್ಥವನ್ನು ಹೊಂದಿದೆ ಎಂದು ಕಿಡಿಕಾರಿದ್ದಾರೆ.