ಬೆಂಗಳೂರು : ಹೊಸಕೋಟೆ ಸಮೀಪದ ಮೇಡಹಳ್ಳಿಯಲ್ಲಿ ಮಾ.26ರಂದು ಮನೆಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಟ್ಟ ಗಾಯವಾಗಿ ಚಿಕಿತ್ಸೆ ಪಡೆಯುತ್ತಿದ್ದ 8 ಕಾರ್ಮಿಕರ ಪೈಕಿ 7 ಮಂದಿ ಮೃತಪಟ್ಟಿದ್ದಾರೆ ಹಾಗೂ ಓರ್ವನ ಸ್ಥಿತಿ ಗಂಭೀರವಾಗಿದೆ. ಸನೋಜ್ ಶರ್ಮಾ ಅಕಾ ಸನೋದ್, ಅಮಿತ್ ಕುಮಾರ್ ಮಂಡಲ್, ಚಂದ್ರ ಪಾಲ್, ತಿಲಕ್ ರಾಮ್, ನೀರಜ್ ಭಾರತಿ, ಲಕ್ಷ್ಮಣ ಮತ್ತು ಸುಮಯಾ ಗುಪ್ತಾ ಅಲಿಯಾಸ್ ಸಮಯ್ ಶುಕ್ರವಾರದವರೆಗೆ ಒಬ್ಬರ ನಂತರ ಒಬ್ಬರು ಸಾವನ್ನಪ್ಪಿದ್ದಾರೆ. ಸುಟ್ಟು ಗಾಯಗೊಂಡಿದ್ದ 8 ಕಾರ್ಮಿಕರಲ್ಲಿ 7 ಕಾರ್ಮಿಕರು ಮೃತಪಟ್ಟಿದ್ದು ನಿಕುನ್ ಅನ್ಸಾರಿ ಎಂಬ ಓರ್ವ ಕಾರ್ಮಿಕ ಮಾತ್ರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಅವಘಡ ಸಂಭವಿಸಿದ ದಿನ ಬೆಳಿಗ್ಗೆ 3.55 ರ ಸುಮಾರಿಗೆ ಎಲ್ಲ ಎಂಟು ಮಂದಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಒಬ್ಬೊಬ್ಬರಾಗಿ ಸಾವನ್ನಪ್ಪುತ್ತಿದ್ದಾರೆ. ಮೃತರು ಗುತ್ತಿಗೆದಾರ ಅರವಿಂದ್ ಗುಪ್ತಾ ಎಂಬುವವರ ಬಳಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇವರೆಲ್ಲ ಉತ್ತರ ಪ್ರದೇಶ, ಬಿಹಾರ ಮತ್ತು ಇತರ ರಾಜ್ಯಗಳಿಂದ ಬಂದವರು.
ಕಾರ್ಮಿಕರು ವಾಸವಿದ್ದ ಮನೆಯಲ್ಲಿದ್ದ ಎಲ್‌ಪಿಜಿ ಗ್ಯಾಸ್ ಸೋರಿಕೆಯಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡ್ಯಾಮೇಜ್ ಆಗಿದ್ದ ಪೈಪ್‌ನಿಂದ ಅನಿಲ ಸೋರಿಕೆಯಾಗಿ ಅಪಘಾತ ಸಂಭವಿಸಿದೆ ಎಂದು ತನಿಖೆಯ ಸಮಯದಲ್ಲಿ ಮಾಹಿತಿ ಸಿಕ್ಕಿದೆ ಎಂದು ಬೆಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಗುತ್ತಿಗೆದಾರ ಗುಪ್ತಾನನ್ನು ಬಂಧಿಸಿದ್ದೇವೆ ಮತ್ತು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಅನೇಕ ಕಾರ್ಮಿಕರನ್ನು ಸಣ್ಣ ಕೋಣೆಯಲ್ಲಿ ಉಳಿಯಲು ಅನುಮತಿಸಿದ ಕಟ್ಟಡದ ಮಾಲೀಕ ಭಾಸ್ಕರ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.