ನ್ಯೂಯಾರ್ಕ್ : 2016ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನೀಲಿಚಿತ್ರ ತಾರೆಯೋರ್ವಳಿಗೆ ಹಣ ಪಾವತಿಸಿದ ಆರೋಪ ಎದುರಿಸುತ್ತಿರುವ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನ್ಯಾಯಾಲಯದಿಂದ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿಗೆ ಗುರಿಯಾಗಿದ್ದಾರೆ.
ಮ್ಯಾನ್‌ಹಾಟನ್‌ನ ಗ್ರ್ಯಾಂಡ್ ಜ್ಯೂರಿ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ ಸಲ್ಲಿಸಿದ್ದು, ಇದರಿಂದ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಬಯಸಿರುವ ಡೊನಾಲ್ಡ್ ಟ್ರಂಪ್ ತೀವ್ರ ಮುಜುಗರ ಅನುಭವಿಸುವಂತಾಗಿದೆ.
76 ವರ್ಷದ ಡೊನಾಲ್ಡ್ ಟ್ರಂಪ್ ವಿರುದ್ಧ, 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನೀಲಿಚಿತ್ರ ತಾರೆಯೋರ್ವಳಿಗೆ ಹಣ ಪಾವತಿಸಿದ ಗಂಭೀರ ಆರೋಪ ಕೇಳಿಬಂದಿದೆ. ಟ್ರಂಪ್ ಈ ಆರೋಪಗಳನ್ನು ನಿರಾಕರಿಸಿದ್ದಾರಾದರೂ, ನ್ಯೂಯಾರ್ಕ್ ಗ್ರ್ಯಾಂಡ್ ಜ್ಯೂರಿ ಇದೀಗ ಅವರ ವಿರುದ್ಧ ದೋಷಾರೋಪಣೆ ಸಲ್ಲಿಸಿದೆ.
ಡೊನಾಲ್ಡ್ ಟ್ರಂಪ್ ಈ ಹಿಂದೆ ಎರಡು ಬಾರಿ ದೋಷಾರೋಪಣೆಯಿಂದ ತಪ್ಪಿಸಿಕೊಂಡಿದ್ದರು. ಯುಎಸ್ ಕ್ಯಾಪಿಟಲ್ ಮೇಲೆ ನಡೆದ ದಾಳಿ ಮತ್ತು ವರ್ಗೀಕೃತ ಫೈಲ್‌ಗಳು ಕಾಣೆಯಾದ ಪ್ರಕರಣಗಳಲ್ಲಿ, ಟ್ರಂಪ್ ವಿರುದ್ಧ ದೋಷಾರೋಪಣೆ ಸಲ್ಲಿಸುವ ಪ್ರಯತ್ನ ನಡೆದಿತ್ತು. ಆದರೆ ಈ ಬಾರಿ ಅಶ್ಲೀಲ ಚಿತ್ರನಟಿ 44 ವರ್ಷದ ಸ್ಟಾರ್ಮಿ ಡೇನಿಯಲ್ಸ್ ಲೈಂಗಿಕ ಹಗರಣದಲ್ಲಿ, ಡೊನಾಲ್ಡ್ ಟ್ರಂಪ್ ನ್ಯಾಯಾಲಯದ ಮೆಟ್ಟಿಲೇರುವಂತಾಗಿದೆ.
ಮ್ಯಾನ್‌ಹ್ಯಾಟನ್ ಜಿಲ್ಲಾ ಅಟಾರ್ನಿ ಆಲ್ವಿನ್ ಬ್ರಾಗ್ ಅವರ ಕಚೇರಿಯು, ನ್ಯೂಯಾರ್ಕ್‌ನಲ್ಲಿ ವಿಚಾರಣೆಗಾಗಿ ಡೊನಾಲ್ಡ್ ಟ್ರಂಪ್ ಅವರ ಹಾಜರಾತಿಯನ್ನು ಬಯಸಿದ್ದಾರೆ. ಈಗಾಗಲೇ ಟ್ರಂಪ್ ಪರ ವಕೀಲರಿಗೆ ಈ ಕುರಿತು ಸೂಚನೆ ರವಾನಿಸಿರುವ ಆಲ್ವಿನ್ ಬ್ರಾಗ್, ಟ್ರಂಪ್ ಆದಷ್ಟು ಶೀಘ್ರವಾಗಿ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಆದೇಶ ನೀಡಿದ್ದಾರೆ.
ಆದರೆ, ಟ್ರಂಪ್ ಅವರು ಮಾತ್ರ ಆರೋಪಗಳನ್ನು ನಿರಾಕರಿಸಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ, ನಿರಪರಾಧಿ ಎಂದಿರುವ ಟ್ರಂಪ್, ಈ ದೋಷಾರೋಪಣೆಯನ್ನು ರಾಜಕೀಯ ಕಿರುಕುಳ ಮತ್ತು ಚುನಾವಣಾ ಹಸ್ತಕ್ಷೇಪ ಎಂದು ಕಿಡಿಕಾರಿದ್ದಾರೆ.
ಅಲ್ಲದೇ, ಸರ್ಕಾರದ ಈ ತೀರ್ಮಾನವು 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರನ್ನು ಭಾರೀ ಬೆಲೆ ತೆರುವಂತೆ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಪ್ರಕರಣದ ತನಿಖೆಯ ನೇತೃತ್ವವನ್ನು ಡೆಮಾಕ್ರೆಟಿಕ್ ಮ್ಯಾನಹ್ಯಾಟನ್ ಜಿಲ್ಲಾ ಅಟಾರ್ನಿ ಅಲ್ವಿನ್ ಬ್ರಾಗ್ ವಹಿಸಿದ್ದಾರೆ.
ಟ್ರಂಪ್ ವಿರುದ್ಧ ಮ್ಯಾನ್‌ಹ್ಯಾಟನ್ ಗ್ರ್ಯಾಂಡ್ ಜ್ಯೂರಿ ದೋಷಾರೋಪಣೆ ಸಲ್ಲಿಸಿದ್ದು, ನ್ಯಾಯಾಲಯದ ಮುಂದೆ ಶೀಘ್ರ ಹಾಜರಾಗುವಂತೆ ಡೊನಾಲ್ಡ್ ಟ್ರಂಪ್‌ಗೆ ಸೂಚಿಸಿದೆ.
ಇದು ಡೊನಾಲ್ಡ್ ಟ್ರಂಪ್ ಎದುರಿಸುತ್ತಿರುವ ಹಲವಾರು ಕಾನೂನು ಪ್ರಕರಣಗಳಲ್ಲಿ ಒಂದಾಗಿದೆ. ಈ ಆರೋಪಗಳು ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಟ್ರಂಪ್ ಆಸೆಗೆ ಹಿನ್ನೆಡೆ ತಂದಿವೆ.
ಕಳೆದ ವಾರ ಬಿಡುಗಡೆಯಾದ ರಾಯಿಟರ್ಸ್/ಇಪ್ಸೋಸ್ ಸಮೀಕ್ಷೆಯ ಪ್ರಕಾರ, ರಿಪಬ್ಲಿಕನ್‌ರಲ್ಲಿ ಶೇ.44ರಷ್ಟು ಜನ ಡೊನಾಲ್ಟ್ ಟ್ರಂಪ್ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವುದರಿಂದ ಅವರು ಅಧ್ಯಕ್ಷೀಯ ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಎಂದು ಹೇಳಿದ್ದರು.