ಕರ್ನಾಟಕ, ತಮಿಳುನಾಡಿನ ವಿರೋಧದ ಬಳಿಕ ಕ್ರಮ
ದೆಹಲಿ : ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮೊಸರಿನ ಪ್ಯಾಕೆಟ್‌ಗಳ ಮೇಲೆ ಹಿಂದಿಯಲ್ಲಿ ದಹಿ ಎಂದು ಮುದ್ರಿಸುವಂತೆ ಹೊರಡಿಸಿದ್ದ ಆದೇಶವನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಹಿಂಪಡೆದಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕಟುವಾಗಿ ಟೀಕೆ ಮಾಡಿದ ಬೆನ್ನಲ್ಲೇ ಎಫ್‌ಎಸ್‌ಎಸ್‌ಎಐಯ ಈ ನಿರ್ಧಾರ ಹೊರಬಿದ್ದಿದೆ. ಹಿಂದಿ ಹೇರಿಕೆಯ ನಾಚಿಕೆಯಿಲ್ಲದ ಒತ್ತಾಯಗಳು ಎಷ್ಟರ ಮಟ್ಟಿಗೆ ಅಂದರೆ, ಮೊಸರು ಪ್ಯಾಕೆಟ್ ಮೇಲೂ ಹಿಂದಿಯಲ್ಲಿ ಬರೆಯುವಂತೆ ನಿರ್ದೇಶಿಸುವ ಮಟ್ಟಕ್ಕೆ ಬಂದಿವೆ. ನಮ್ಮದೇ ರಾಜ್ಯಗಳಲ್ಲಿ ತಮಿಳು ಮತ್ತು ಕನ್ನಡವನ್ನು ಇದು ದೂರ ಮಾಡುತ್ತದೆ. ನಮ್ಮ ಮಾತೃಭಾಷೆಯನ್ನು ನಿರ್ಲಕ್ಷಿಸುವ ಇಂತಹ ನಿರ್ಲಜ್ಜ ಹೊಣೆಗಾರರನ್ನು ದಕ್ಷಿಣ ಭಾರತದಿಂದ ಶಾಶ್ವತವಾಗಿ ಬಹಿಷ್ಕರಿಸಬೇಕು ಎಂದು ಸಿಎಂ ಸ್ಟಾಲಿನ್ ಟ್ವೀಟ್ ಮಾಡಿದ್ದರು.
ತಮಿಳುನಾಡಿಗೂ ಮುನ್ನ ಕರ್ನಾಟಕಕ್ಕೆ ಮೊಸರಿನ ಪ್ಯಾಕೆಟ್‌ಗಳ ಮೇಲೆ ಹಿಂದಿಯಲ್ಲಿ ‘ದಹಿ’ ಎಂದು ಮುದ್ರಿಸುವಂತೆ ಆದೇಶ ಬಂದಿತ್ತು. ನಂದಿನಿ ಪ್ರೋ ಬಯೊಟಿಕ್ ಮೊಸರು ಪಾಕೆಟ್ ಮೇಲೆ ಹಿಂದಿಯ ‘ದಹಿ’ ಎಂದು ಕಡ್ಡಾಯವಾಗಿ ಮುದ್ರಿಸುವಂತೆ ಭಾರತೀಯ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರವು ರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್)ಗೆ ಆದೇಶ ನೀಡಿತ್ತು. ಅದರಂತೆಯೇ ಕೆಎಂಎಫ್ ನಂದಿನಿ ಪ್ಯಾಕೆಟ್ನಲ್ಲಿ ‘ದಹಿ’ ಎಂದು ಮುದ್ರಿಸಿತ್ತು.
ಬಳಿಕ ಮೊಸರು ಪ್ಯಾಕೆಟ್‌ಗಳ ಲೇಬಲ್‌ಗಳನ್ನು ಇಂಗ್ಲಿಷ್‌ನಲ್ಲಿ ” Curd ” ಮತ್ತು ತಮಿಳಿನಲ್ಲಿ “ತೈರ್” ಎಂದು ಬರೆದಿರುವುದನ್ನು ಹಿಂದಿಯಲ್ಲಿ “ದಹಿ” ಎಂದು ಬದಲಾಯಿಸುವಂತೆ ತಮಿಳುನಾಡಿನ ಹಾಲು ಉತ್ಪಾದಕರ ಒಕ್ಕೂಟಕ್ಕೆ ನಿರ್ದೇಶನ ನೀಡಿತ್ತು.
ಈ ಬಗ್ಗೆ ಟ್ವೀಟ್ ಮಾಡಿ ವಿರೋಧಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಹಿಂದಿ ಹೇರಿಕೆಗೆ ಕನ್ನಡಿಗರ ವಿರೋಧವಿದೆ ಎಂದು ಗೊತ್ತಿದ್ದರೂ ನಂದಿನಿ ಪ್ರೋ ಬಯೊಟಿಕ್ ಮೊಸರು ಪಾಕೆಟ್ ಮೇಲೆ ಹಿಂದಿಯ ‘ದಹಿ’ ಎಂದು ಮುದ್ರಿಸಿರುವುದು,ಅದನ್ನು ಕಡ್ಡಾಯವಾಗಿ ಮುದ್ರಿಸುವಂತೆ ಭಾರತೀಯ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರವು ಕೆಎಂಎಫ್ ಗೆ ಆದೇಶ ನೀಡಿರುವುದು ತಪ್ಪು.ಇದನ್ನು ಒಪ್ಪಲು ಸಾಧ್ಯವಿಲ್ಲ” ಎಂದು ಹೇಳಿದ್ದರು.