ಪಾಟ್ನ : ಮೋದಿ ಕುಲನಾಮ ಕುರಿತು ರಾಹುಲ್ ಗಾಂಧಿ ನೀಡಿರುವ ಅವಹೇಳನಕಾರಿ ಹೇಳಿಕೆಯಿಂದ ಅವರಿಗೆ ಉಂಟಾಗಿರುವ ಸಂಕಷ್ಟಗಳ ಸರಮಾಲೆ ಮುಂದುವರಿದಿದೆ. ಈ ಪ್ರಕರಣದಲ್ಲಿ ಈಗಾಗಲೇ ದೋಷಿ ಎಂದು ಸೂರತ್ ನ್ಯಾಯಾಲಯ ತೀರ್ಪು ಪ್ರಕಟಿಸಿ ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಇದೀಗ ಇದೇ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಬಿಹಾರದ ಪಾಟ್ನ ನ್ಯಾಯಾಲಯ ರಾಹುಲ್ ಗಾಂಧಿಗೆ ಸಮನ್ಸ್ ನೀಡಿದೆ.
2019ರ ಲೋಕಸಭಾ ಚುನಾವಣೆಗೆ ಮುನ್ನ ರಾಹುಲ್ ಗಾಂಧಿ ಅವರು ಮೋದಿ ಸರ್ನೇಮ್ ಕುರಿತು ನೀಡಿದ್ದ ಹೇಳಿಕೆ ವಿರುದ್ಧ ಗುಜರಾತ್‌ನಲ್ಲಿ ಮಾಜಿ ಸಚಿವ ಪೂರ್ಣೇಶ್ ಮೋದಿ ಮಾನನಷ್ಟ ಪ್ರಕರಣ ದಾಖಲಿಸಿದ್ದರೆ, ಬಿಹಾರದಲ್ಲಿ ಬಿಜೆಪಿ ನಾಯಕ, ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಕೇಸ್ ದಾಖಲಿಸಿದ್ದರು. ಇದೀಗ ಏ.12 ರಂದು ರಾಹುಲ್ ಗಾಂಧಿ ಹೇಳಿಕೆ ದಾಖಲಿಸಲು ಪಾಟ್ನ ವಿಶೇಷ ನ್ಯಾಯಾಲಯವು ರಾಹುಲ್ ಗಾಂಧಿಗೆ ಸಮನ್ಸ್ ನೀಡಿದೆ.
ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಕೋರ್ಟ್ ಸಿಆರ್‌ಪಿಸಿಯ ಸೆಕ್ಷನ್ 313 ರ ಅಡಿಯಲ್ಲಿ ಆದೇಶವನ್ನು ಹೊರಡಿಸಿದೆ. ಈ ಪ್ರಕರಣದಲ್ಲಿ ಜುಲೈ 6, 2019ರಂದು ರಾಹುಲ್ ಗಾಂಧಿಗೆ ಜಾಮೀನು ನೀಡಲಾಗಿತ್ತು. ನ್ಯಾಯಾಲಯ ಈಗಾಗಲೇ ಸುಶೀಲ್ ಮೋದಿ, ಮಾಜಿ ಸಚಿವ ಮತ್ತು ಬಂಕಿಪುರ ಶಾಸಕ ನಿತಿನ್ ನವೀನ್, ದಿಘಾ ಶಾಸಕ ಸಂಜೀವ್ ಚೌರಾಸಿಯಾ ಮತ್ತು ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ನಾಯಕ ಮನೀಶ್ ಕುಮಾರ್ ಅವರ ಹೇಳಿಕೆಗಳನ್ನು ಸಾಕ್ಷಿಗಳಾಗಿ ದಾಖಲಿಸಿದೆ.
2019ರಲ್ಲಿ ಕೋಲಾರದಲ್ಲಿ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುವ ಭರದಲ್ಲಿ ಚೌಕೀದಾರ್ ಶೇಕಡ 100ರಷ್ಟು ಕಳ್ಳ ಇದ್ದಾನೆ. ಒಂದು ಸಣ್ಣ ಪ್ರಶ್ನೆ ಕೇಳ್ತೇನೆ. ಎಲ್ಲ ಕಳ್ಳರು ಹೇಗೆ ಮೋದಿ ಎಂಬ ಸರ್ನೇಮ್ಗಳನ್ನು ಹೊಂದಿದ್ದಾರೆ? ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ, ಇನ್ನೂ ಹುಡುಕಾಡಿದ್ರೆ ಇನ್ನಷ್ಟು ಮೋದಿಗಳು ಬಯಲಾಗಬಹುದು ಎಂದು ಹೇಳಿಕೆ ನೀಡಿದ್ದರು.