ನಾಲ್ಕು ಹಂತಗಳ ಪರಿಶೀಲನೆ ಬಳಿಕ ಅಭ್ಯರ್ಥಿ ಹೆಸರು ಘೋಷಣೆ
ಬೆಂಗಳೂರು : ಬಿಜೆಪಿ ಈ ಸಲ ಟಿಕೆಟ್ ಹಂಚಿಕೆಗೆ ಮತದಾನದ ಪದ್ಧತಿ ಅಳವಡಿಸಿಕೊಂಡಿದೆ. ಜಿಲ್ಲಾವಾರು ಪದಾಧಿಕಾರಿಗಳು ಮತದಾನ ಮಾಡಲಿದ್ದು, ಬಳಿಕ ಎರಡು ದಿನ ಬೆಂಗಳೂರಿನಲ್ಲಿ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಿಸುವ ಪ್ರಕ್ರಿಯೆ ನಡೆಯಲಿದೆ. ಆ ಬಳಿಕ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳಲಿದೆ. ಬಿಜೆಪಿಯಲ್ಲಿ ಪ್ರತಿ ಕ್ಷೇತ್ರಕ್ಕೆ ಅನೇಕ ಮಂದಿ ಅಕಾಂಕ್ಷಿಗಳು ಇರುವುದು ಮತ್ತು ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎನ್ನುವ ಕಾರಣಕ್ಕೆ ಈ ಸಲ ಕರ್ನಾಟಕದಲ್ಲಿ ಕೇಸರಿ ಪಕ್ಷ ಮತದಾನ ಪದ್ಧತಿಯ ಮೊರೆ ಹೋಗಿದೆ. ಅದರೆ ಕಾಂಗ್ರೆಸ್ ಈ ಪದ್ಧತಿಯನ್ನು ಈಗಾಗಲೇ ಅಳವಡಿಸಿಕೊಂಡಿದೆ.
ಕಾಂಗ್ರೆಸ್ ಈಗಾಗಲೇ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಜೆಡಿಎಸ್ ಕೂಡ 13 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಬಿಜೆಪಿ ಇದುವರೆಗೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಇಂದು (ಶುಕ್ರವಾರ) ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಜಿಲ್ಲಾವಾರು ಅಭಿಪ್ರಾಯ ಸಂಗ್ರಹ ನಡೆಯುತ್ತಿದೆ. ಏ.1 ಮತ್ತು 2ರಂದು ಬೆಂಗಳೂರಿನಲ್ಲಿ ಎಲ್ಲ ಜಿಲ್ಲೆಗಳ ಕೋರ್ ಕಮಿಟಿಗಳ ಸಭೆ ನಡೆಯಲಿದೆ. ನಂತರ ರಾಜ್ಯ ಕೋರ್ ಕಮಿಟಿ ಸಭೆ ನಡೆಸಿ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದು ಏ. 4 ಅಥವಾ 5ರಂದು ಅಭ್ಯರ್ಥಿಗಳ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗುವುದು. ಯಾವ ಕಾರಣಕ್ಕೂ ಅಸಮಾಧಾನ ಭುಗಿಲೇಳಬಾರದು ಹಾಗೂ ಸರ್ವಸಮ್ಮತ ಅಭ್ಯರ್ಥಿ ಆಯ್ಕೆಯಾಗಬೇಕು ಎಂಬ ಕಾರಣಕ್ಕೆ ಬಿಜೆಪಿ ಆಯ್ಕೆಗೆ ನಾಲ್ಕು ಹಂತದ ಪ್ರಕ್ರಿಯೆ ನಡೆಸಲಿದೆ. ಇದೆಲ್ಲ ಚುನಾವಣಾ ಚಾಣಕ್ಯ ಅಮಿತ್ ಶಾ ಕಣ್ಗಾವಲಿನಲ್ಲೇ ನಡೆಯುತ್ತಿದೆ.