ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳು ಒಂದೊಂದೇ ಸಾಕಾರಗೊಳ್ಳುತ್ತಿದ್ದು, ಇದೀಗ ದೇವಸ್ಥಾನದ ಬಲಭಾಗದಲ್ಲಿರುವ ರಥಮಂದಿರದ ಬಳಿ ಇಂಟರ್ ಲಾಕ್ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ದಾನಿಗಳ ಅಭಿಷ್ಟೇಯಂತೆ ಅವರ ಸಹಕಾರದೊಂದಿಗೆ ಇಂಟರ್ ಲಾಕ್ ಅಳವಡಿಕೆ ಕಾಮಗಾರಿಯನ್ನು ದೇವಸ್ಥಾನದ ವತಿಯಿಂದ ನಡೆಸಲಾಗುತ್ತಿದೆ.
ಇಂಟರ್ ಲಾಕ್ ಅಳವಡಿಕೆಗೆ ದಾನಿಗಳಾದ ಸುಜಿತ್ ರೈ ಮೈಸೂರು 1 ಲಕ್ಷ ರೂ. ಹಾಗೂ ಸತೀಶ್ ರೈ 50 ಸಾವಿರ ರೂ.ವನ್ನು ಈಗಾಗಲೇ ಆಡಳಿತ ಮಂಡಳಿಗೆ ದೇಣಿಗೆಯಾಗಿ ನೀಡಿದ್ದಾರೆ.
ರಥಬೀದಿಯ ಒಂದು ಭಾಗದಲ್ಲಿ ರಥಬೀದಿಗೆ ಸಮನಾಗಿ ಈಗಾಗಲೇ ಇಂಟರ್ ಲಾಕ್ ಅಳವಡಿಸಲಾಗಿದ್ದು, ಮತ್ತೊಂದು ಬದಿಯಲ್ಲೂ ರಥಬೀದಿಗೆ ಸಮನಾಗಿ ಇಂಟರ್ ಲಾಕ್ ಅಳವಡಿಸಲು ಜಲ್ಲಿ, ಮರಳು ಮುಂತಾದ ಕಾಮಗಾರಿಗೆ ಬೇಕಾದ ವಸ್ತುಗಳನ್ನು ಈಗಾಗಲೇ ತಂದಿರಿಸಲಾಗಿದೆ.
ಈಗಾಗಲೇ ಇಂಟರ್ ಲಾಕ್ ಅಳವಡಿಸಿದ ರಥಬೀದಿಯ ಒಂದು ಭಾಗದಲ್ಲಿ ಮುಂದಕ್ಕೆ ಮರ, ಕಲ್ಲುಗಳನ್ನು ನೆಲಕ್ಕೆ ಹಾಸಿ ಗಾರ್ಡನ್ ಮಾದರಿಯಲ್ಲಿ ಮಾಡಲಾಗುವುದು. ಮುರ ಕಲ್ಲಿನ ನಡು ನಡುವೆ ಹುಲ್ಲುಗಳನ್ನು ಬೆಳೆಸುವ ರೀತಿಯಲ್ಲಿ ಗಾರ್ಡ್ ಕಾಮಗಾರಿ ಮಾಡಲಾಗುವುದು. ಇದಕ್ಕೂ ಈಗಾಗಲೇ ಚಾಲನೆಯನ್ನು ನೀಡಲಾಗಿದೆ. ಮುಂದೆ ದಾನಿಗಳ ಸಹಾಯದಿಂದ ಇಂಟರ್ ಲಾಕ್ ಅಳಳವಡಿಕೆಯನ್ನು ರಥಬೀದಿಯ ಎರಡೂ ಕಡೆಗಳಲ್ಲಿ ವಿಸ್ತರಿಸುವ ಯೋಜನೆಯನ್ನೂ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರನ್ನು ಸಂಪರ್ಕಿಸಿದಾಗ, ಈಗಾಗಲೇ ಇಂಟರ್ ಲಾಕ್ ಅಳವಡಿಕೆಗೆ ಇಬ್ಬರು ದಾನಿಗಳಿಂದ ಸುಮಾರು 1.5 ಲಕ್ಷ ರೂಪಾಯಿ ದೇಣಿಗೆ ಬಂದಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ವಾಹನ ಪಾರ್ಕಿಂಗ್ ಮಾಡುವಾಗ ತೊಂದರೆ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಥಬೀದಿಗೆ ಸಮನಾಗಿ ಇಂಟರ್ ಲಾಕ್ ಅಳವಡಿಸಿದರೆ ವಾಹನ ಸವಾರರಿಗೆ ಪಾರ್ಕಿಂಗ್ ನಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ಮುಂದಿನ ದಿನಗಳಲ್ಲಿ ದಾನಿಗಳ ಸಹಾಯದಿಂದ ಇಂಟರ್ ಲಾಕ್ ಅಳವಡಿಕೆಯನ್ನು ವಿಸ್ತರಿಸಲಾಗುವುದು. ದಾನಿಗಳಿದ್ದಲ್ಲಿ 10 ಚದರ ಅಡಿಗೆ ಒಂದರಂತೆ 750 ರೂ. ನೀಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.