ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ | ಧಾರ್ಮಿಕ ಸಭಾ ಕಾರ್ಯಕ್ರಮ

ಪುತ್ತೂರು: ಪ್ರಸ್ತುತ ಮಕ್ಕಳಲ್ಲಿ ಧಾರ್ಮಿಕ ಶಿಕ್ಷಣದ ಕೊರತೆಯಿದ್ದು, ಧಾರ್ಮಿಕ ಕೇಂದ್ರಗಳ ಮೂಲಕ ಧಾರ್ಮಿಕ ಶಿಕ್ಷಣ ನೀಡುವ ಕರ್ತಯವ್ಯ ನಮ್ಮೆಲ್ಲರ ಮೇಲಿದೆ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹೇಳಿದರು.

ಅವರು ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ 5ನೇ ದಿನವಾದ ಬುಧವಾರ ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಯಾಗಿ ಮಾತನಾಡಿದರು.

ಈಗಾಗಲೇ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ 15 ಧಾರ್ಮಿಕ ಶಿಕ್ಷಣ ಕೇಂದ್ರಗಳಲ್ಲಿ ಸುಮಾರು ಒಂದೂವರೆ ಸಾವಿರ ಮಂಡಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ತಿಳಿಸಿದ ಅವರು, ದೇವಸ್ಥಾನಗಳಲ್ಲಿ ತಪ್ಪುಗಳು ನಡೆಯುವುದು ಸಹಜ. ಅದನ್ನು ಸರಿಪಡಿಸಿಕೊಳ್ಳಲು ಬ್ರಹ್ಮಕಲಶೋತ್ಸವ, ಪ್ರಶ್ನಾಚಿಂತನೆಯಂತಹ ಪುಣ್ಯ ಕಾರ್ಯವನ್ನು ದೇವರು ನಮಗೆ ನೀಡಿದ್ದಾನೆ ಎಂದರು.































 
 

ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಮಾತನಾಡಿ, ದೇವರು ಭಕ್ತಿಯನ್ನು ಹೊರತುಪಡಿಸಿ ಯಾವುದನ್ನೂ ಅಪೇಕ್ಷಿಸುವುದಿಲ್ಲ. ಈ ನಿಟ್ಟಿನಲ್ಲಿ ದೇವಸ್ಥಾನದ ಉನ್ನತೀಕರಣ ದೇವರಿಗೆ ಅಲ್ಲ. ಬದಲಾಗಿ ಆ ಗ್ರಾಮಸ್ಥರ ಉನ್ನತಿಗಾಗಿ ಎಂದರು.

ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಗಳ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು ಮಾತನಾಡಿ, ಊರಿನಲ್ಲಿ ಧರ್ಮ ಜಾಗೃತಿ ಮೂಡಿಸುವ ಕೆಲಸ ಆಗಿದೆ. ಧರ್ಮದ ಹಾದಿಯಲ್ಲಿ ನಮ್ಮ ಕೆಲಸ ಕಾರ್ಯಗಳು ಆಗಬೇಕಾದರೆ ಮನಸ್ಸು ಸರಿ ಇರಬೇಕು, ಸರಿಯಾದ ದಾರಿಯಲ್ಲಿ ಸಾಗುವ ಗುರಿ ಇರಬೇಕು. ಇದಕ್ಕೆ ಭಗವಂತನ ಅನುಗ್ರಹ ಇರಬೇಕು. ಗಳಿಕೆಯ ವಿನಿಯೋಗದಲ್ಲೂ ಭಗವಂತಹ ಅನುಗ್ರಹ ಇರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಕೆದಿಲಾಯ ಮಾತನಾಡಿ, ಉಮಾಮಹೇಶ್ವರ ಪ್ರಾಕೃತಿಕವಾಗಿ ಪ್ರಣವ ಸ್ವರೂಪ. ದೇವಸ್ಥಾನದ ಜೀರ್ಣೋದ್ಧಾರದಿಂದ ಆ ಗ್ರಾಮ ಸುಭೀಕ್ಷೆಯಲ್ಲಿರುತ್ತದೆ. ಪರಿಸರ ಸುಂದರವಾಗಿ, ಶಕ್ತಿಯುತವಾಗಿ ಬೆಳೆಯುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಮಾಜಿ ಅಧ್ಯಕ್ಷ ತಿರುಮಲೇಶ್ವರ ಭಟ್, ನರಿಮೊಗರು ಗ್ರಾಪಂ ಸದಸ್ಯೆ ಪುಷ್ಪಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ಯೋಜನಾಧಿಕಾರಿ  ಆನಂದ ಕೆ. ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಂಕರ್ ಗ್ರೂಪ್ಸ್ ನ ಮ್ಯಾನೆಜಿಂಗ್ ನಿರ್ದೇಶಕ ಸತ್ಯಶಂಕರ ಭಟ್, ರಂಜಿತಾ ದಂಪತಿಯನ್ನು ಸನ್ಮಾನಿಸಲಾಯಿತು. ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಕೋಶಾಧಿಕಾರಿ ನವೀನ್ ಕುಮಾರ್ ರೈ ಶಿಬರ ಸ್ವಾಗತಿಸಿದರು. ನವೀನ್ ರೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತಾಳಮದ್ದಳೆ, ಪಂಚಮಿ ಸ್ವರಾಂಜಲಿ ಅವರಿಂದ ಸಾಂಸ್ಖೃತಿಕ ಕಾರ್ಯಕ್ರಮ ನಡೆಯಿತು.

ಬೆಳಿಗ್ಗೆಯಿಂದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಹಾಗೂ ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ಜರಗಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top