ಪುತ್ತೂರು: ಜಿಎಲ್ ಆಚಾರ್ಯ ಸ್ವರ್ಣೋದ್ಯಮದಲ್ಲಿ ದೊಡ್ಡ ಹೆಸರು. ಇದರೊಂದಿಗೆ ಜಿಎಲ್ ಟ್ರೇಡ್ ಸೆಂಟರ್, ಜಿಎಲ್ ರೋಟರಿ ಸಭಾಭವನ, ಹೋಟೆಲ್ ರಾಮ ಹೀಗೆ ವೈವಿಧ್ಯ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜಿಎಲ್ ಸಮೂಹ ಸಂಸ್ಥೆಗೆ ಹೊಸ ಸೇರ್ಪಡೆ ಜಿಎಲ್ ಒನ್ ಶಾಪಿಂಗ್ ಮಾಲ್.
ಪುತ್ತೂರಿನ ಪ್ರಪ್ರಥಮ ಸರ್ವಸುಸಜ್ಜಿತ ಶಾಪಿಂಗ್ ಮಾಲ್ ಜಿಎಲ್ ಒನ್ ಏಪ್ರಿಲ್ 2ರಂದು ಸಂಜೆ 5.30ಕ್ಕೆ ಲೋಕಾರ್ಪಣೆಗೊಳ್ಳಲಿದೆ. ಜಿಲ್ಲಾ ಕೇಂದ್ರದ ಕನಸು ಕಾಣುತ್ತಿರುವ ಪುತ್ತೂರಿಗೆ ಮಾಲ್ ಹೊಸ ದಿಶೆಯನ್ನು ತೋರಿಸಲಿದೆ.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದೀಪ ಪ್ರಜ್ವಲನೆಗೊಳಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಲಾಂಛನ ಅನಾವರಣಗೊಳಿಸಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಕಟ್ಟಡ ಲೋಕಾರ್ಪಣೆಗೊಳಿಸಲಿದ್ದಾರೆ.
ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಪುತ್ತೂರು ಎಸ್.ಜಿ. ಕಾರ್ಪೋರೇಟ್ಸ್ ಚೇರ್‍ಮೆನ್ ಕೆ. ಸತ್ಯಶಂಕರ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಪುತ್ತೂರು ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಜಾನ್ ಕುಟಿನ್ಹಾ, ಮಂಗಳೂರು ಭಾರತ್ ಸಮೂಹ ಸಂಸ್ಥೆಗಳ ನಿರ್ದೇಶಕ ಆನಂದ್ ಪೈ, ಪುತ್ತೂರು ಅನ್ಸಾರುದ್ದೀನ್ ಜಮಾತ್ ಸಮಿತಿ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಝಾಕ್ ಮುಖ್ಯ ಅತಿಥಿಯಾಗಿರುವರು.
ಮ್ಯಾಕ್ಸ್, ಈಸೀ ಬಯ್, ಮೆಟ್ರೋ, ವಾಕ್ ವೇ, ಮಲ್ಟಿ ಬ್ರಾಂಡ್ ವಾಚ್ ಶೋರೂಂ, ಬ್ಯಾಗ್ ಶೋ ರೂಂ ಮೊದಲಾದ ಶಾಪಿಂಗ್ ಮಳಿಗೆಗಳು, ಭಾರತ್ ಸಿನೇಮಾಸ್, ಮಕ್ಕಳ ಗೇಮಿಂಗ್ ಸೆಂಟರ್, ಫುಡ್ ಕೋರ್ಟ್ ಇತ್ಯಾದಿ ಜಿಎಲ್ ಒನ್ ಮಾಲ್‍ನಲ್ಲಿ ಇರಲಿದೆ. ಇದರೊಂದಿಗೆ ಸುವ್ಯವಸ್ಥಿತ ಪಾರ್ಕಿಂಗ್, ಸರಕಾರದ ಗ್ರೀನ್ ಎನರ್ಜಿಯ ಯೋಜನೆಗೆ ಪೂರಕವಾಗಿ ಪರಿಷ್ಕರಿಸಿದ ನೀರನ್ನು ಕೈತೋಟಕ್ಕೆ ಹಾಗೂ ಶೌಚಾಲಯಕ್ಕೆ ಬಳಸುವ ವ್ಯವಸ್ಥೆ ಮೊದಲಾದ ಆಧುನಿಕ ವ್ಯವಸ್ಥೆಗಳನ್ನು ಮಾಲ್‍ನಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಜಿ.ಎಲ್. ಸಮೂಹ ಸಂಸ್ಥೆಗಳ ಚೇರ್‍ಮೆನ್ ಜಿ.ಎಲ್. ಬಲರಾಮ್ ಆಚಾರ್ಯ, ನಿರ್ದೇಶಕರಾದ ಲಕ್ಷ್ಮೀಕಾಂತ್ ಆಚಾರ್ಯ, ಸುಧನ್ವ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.