ದೆಹಲಿ : ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಗುಜರಾತ್ನ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ನರೇಂದ್ರ ಮೋದಿಯವರನ್ನು ಸಿಲುಕಿಸಲು ನನ್ನ ಮೇಲೆ ಸಿಬಿಐ ಒತ್ತಡ ಹಾಕಿತ್ತು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಕೇಂದ್ರದ ಉನ್ನತ ತನಿಖಾ ಸಂಸ್ಥೆಗಳು ಹೇಗೆ ದುರ್ಬಳಕೆಯಾಗುತ್ತಿದ್ದವು ಎಂಬುದಕ್ಕೆ ನಾನೇ ದೊಡ್ಡ ಉದಾಹರಣೆ, ನಾನು ಗುಜರಾತ್ನ ಗೃಹ ಸಚಿವನಾಗಿದ್ದಾಗ ರಾಜ್ಯದಲ್ಲಿ ಒಂದು ಎನ್ಕೌಂಟರ್ ನಡೆದಿತ್ತು, ನನ್ನ ವಿರುದ್ಧ ಪ್ರಕರಣ ದಾಖಲಾಯಿತು ಹಾಗೂ ಸಿಬಿಐ ನನ್ನನ್ನು ಬಂಧಿಸಿದ್ದರು.
ಇಡೀ ತನಿಖೆಯುದ್ದಕ್ಕೂ ಮೋದಿ ಹೆಸರು ಹೇಳುವಂತೆ ಒತ್ತಡ ಹಾಕುತ್ತಿದ್ದರು, ನೀವು ತಲೆ ಕೆಡಿಸಿಕೊಳ್ಳಬೇಡಿ ಮೋದಿ ಹೆಸರು ಹೇಳಿಬಿಡಿ ನಾವು ನಿಮ್ಮನ್ನು ಬಿಟ್ಟುಬಿಡುತ್ತೇವೆ ಎಂದು ಹೇಳಿದ್ದರು. ಆಗ ನಾವು ಪ್ರತಿಭಟಿಸಿರಲಿಲ್ಲ, ಕಲಾಪಗಳಿಗೆ ಅಡ್ಡಿ ಮಾಡಿರಲಿಲ್ಲ, ಮೋದಿ ವಿರುದ್ಧ ತನಿಖಾ ಸಂಸ್ಥೆ ರಚಿಸಲಾಯಿತು, ಅದನ್ನು ಸುಪ್ರೀಂಕೋರ್ಟ್ ರದ್ದುಪಡಿಸಿತು. 90 ದಿನಗಳ ವಿಚಾರಣೆ ಬಳಿಕ ನನಗೆ ಜಾಮೀನು ಸಿಕ್ಕಿತ್ತು ಎಂದರು.
ಸೂರತ್ನ ನ್ಯಾಯಾಲಯವು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿರುವ ಕುರಿತು ಪ್ರತಿಕ್ರಿಯಿಸಿರುವ ಅಮಿತ್ ಶಾ ರಾಹುಲ್ ಗಾಂಧಿ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿ ಸಂಸದ ಸ್ಥಾನದಿಂದ ಅನರ್ಹಗೊಂಡ ಏಕೈಕ ರಾಜಕಾರಣಿಯೇನಲ್ಲ ಎಂದಿದ್ದಾರೆ.
ಕಾಂಗ್ರೆಸ್ ತಪ್ಪು ಮಾಹಿತಿಯನ್ನು ಎಲ್ಲೆಡೆ ಪಸರಿಸುತ್ತಿದೆ, ನ್ಯಾಯಾಲಯ ದೋಷಿ ಎಂದು ನೀಡಿದ ತೀರ್ಪಿಗೆ ತಡೆ ನೀಡಲು ಬರುವುದಿಲ್ಲ, ಶಿಕ್ಷೆಗೆ ತಡೆ ನೀಡಬಹುದು ಎಂದು ಅವರು ಹೇಳಿದರು.
ತಮ್ಮ ಶಿಕ್ಷೆಗೆ ತಡೆ ನೀಡುವಂತೆ ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಯಾವುದೇ ಮನವಿ ಮಾಡಿಲ್ಲ, ಇದು ದುರಹಂಕಾರವಲ್ಲದೆ ಮತ್ತೇನು, ನಿಮಗೆ ಅನುಕೂಲ ಬೇಕು, ನೀವು ಸಂಸದರಾಗಿರಲು ಬಯಸುತ್ತೀರಿ ಆದರೆ ನ್ಯಾಯಾಲಯದ ಮುಂದೆ ಹೋಗುವುದಿಲ್ಲ.
2013ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಸುಪ್ರೀಂಕೋರ್ಟ್ ಆದೇಶದಿಂದಾಗಿ ಲಾಲು ಪ್ರಸಾದ್ , ಜೆ ಜಯಲಲಿತಾಮತ್ತು ರಶೀದ್ ಅಲ್ವಿ ಸೇರಿದಮತೆ 17 ಮಂದಿ ಪ್ರಮುಖ ನಾಯಕರು ತಮ್ಮ ಸದಸ್ಯತ್ವ ಕಳೆದುಕೊಂಡಿದ್ದರು.
ಅಂದು ನಮ್ಮನ್ನು ಪೀಡಿಸಿದವರೇ ಇಂದು ವಿಧಿಯನ್ನು ದೂರುತ್ತಿದ್ದಾರೆ, ತಮ್ಮ ವರ್ತನೆಯ ಬಗ್ಗೆ ಅವರೇ ಅವಲೋಕನ ಮಾಡಿಕೊಳ್ಳುವ ಅಗತ್ಯವಿದೆ, ಅಮಾಯಕರಾಗಿದ್ದರೆ ಕಾನೂನಿನ ಮೇಲೆ ನಂಬಿಕೆ ಇರಲಿ ಎಂದು ಅಮಿತ್ ಶಾ ಹೇಳಿದ್ದಾರೆ.