ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಏಪ್ರಿಲ್ 16ರಂದು ಶ್ರೀ ಉಳ್ಳಾಲ್ತಿ ಅಮ್ಮನವರ ಭಂಡಾರ ಆಗಮನವಾಗಿ, ಶ್ರೀ ಮಹಾಲಿಂಗೇಶ್ವರ ದೇವರ ತೆಪ್ಪೋತ್ಸವ ನಡೆಯಲಿದೆ. ಆದ್ದರಿಂದ ಈಗಾಗಲೇ ಕಾಮಗಾರಿ ಆರಂಭವಾಗಿರುವ ಪುಷ್ಕರಣಿಯ ನಡುವಿರುವ ಕಟ್ಟೆ ಸಮರ್ಪಣೆಗೊಳ್ಳಲೇಕು.
ಹೌದು! ಏಪ್ರಿಲ್ 8ರೊಳಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಪುಷ್ಕರಣಿಯ ಕಟ್ಟೆ ಅರ್ಪಣೆ ಆಗಲೇಬೇಕು.
ಈ ಹಿನ್ನೆಲೆಯಲ್ಲಿ ದೇವಸ್ಥಾನದ ಪುಷ್ಕರಣಿಯ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದೆ. ಇದಕ್ಕಾಗಿ ದೇವಸ್ಥಾನದ ಮಧ್ಯಭಾಗದಲ್ಲಿದ್ದ ಹಳೆ ದೇವರ ಕಟ್ಟೆಯನ್ನು ಈಗಾಗಲೇ ಸಂಪೂರ್ಣ ತೆರವು ಮಾಡಲಾಗಿದೆ. ನೂತನ ಶಿಲಾಮಯ ಕಟ್ಟೆ ನಿರ್ಮಾಣಕ್ಕೆ ಚಾಲನೆಯನ್ನೂ ನೀಡಲಾಗಿದೆ. ಆದರೆ ಏ. 8 ಕ್ಕೆ ಇನ್ನು ಕೇವಲ ಹತ್ತೇ ದಿನಗಳು ಮಾತ್ರ ಇರುವುದು. ಪುಷ್ಕರಣಿ ಕಾಮಗಾರಿ ಕೇವಲ ಹತ್ತು ದಿನಗಳಲ್ಲಿ ಸಂಪೂರ್ಣ ಆಗಬೇಕು ಎಂಬುದು ಇಲ್ಲಿರುವ ವಿಚಾರ.
ಜಾತ್ರೋತ್ಸವಕ್ಕೆ ಇನ್ನು 12 ದಿನ ಬಾಕಿಯಿದ್ದು, ಏ. 16ರಂದು ನಡೆಯುವ ತೆಪ್ಪೋತ್ಸವ, ಕೆರೆ ಆಯನ ಸಂದರ್ಭದಲ್ಲಿ ಪುಷ್ಕರಣಿಯ ಕಟ್ಟೆ ಸಂಪೂರ್ಣಗೊಳ್ಳಬೇಕು.
ಈ ಕುರಿತು ದೇವಸ್ಥಾನದ ವಾಸ್ತುಶಿಲ್ಪಿ ಪಿ.ಜಿ.ಜಗನ್ನಿವಾಸ ರಾವ್ ಪ್ರತಿಕ್ರಿಯಿಸಿ, ಜಾತ್ರೋತ್ಸವ ಸಂದರ್ಭದಲ್ಲಿ ಪುಷ್ಕರಣಿಯ ಸಂಪೂರ್ಣ ಅಭಿವೃದ್ಧಿ ಕಾಮಗಾರಿ ಬೇಕಾಗಿಲ್ಲ. ಕೇವಲ ಪುಷ್ಕರಣಿಯ ಮಧ್ಯಭಾಗದಲ್ಲಿರುವ ಕಟ್ಟೆಯ ಪುನರ್ ನಿರ್ಮಾಣ ಮಾತ್ರ ಈಗ ಬೇಕಾಗಿರುವುದು. ಇಲ್ಲಿರುವ ಪ್ರಮುಖ ವಿಷಯವೆಂದರೆ ಶಿವರಾತ್ರಿಯಿಂದ ಜಾತ್ರೆ ತನಕದ ನಡುವಿನ ಸಮಯದಲ್ಲಿ ಮಾತ್ರ ಕೆರೆಯ ಅಭಿವೃದ್ಧಿ ಸಾಧ್ಯ. ಯಾಕೆಂದರೆ ಈ ಸಮಯ ಬಿರುಬಿಸಿಲಿನಿಂದ ಕೂಡಿದ್ದು, ಸ್ವಲ್ಪ ಮಟ್ಟಿದಲ್ಲಿ ನೀರು ಕಡಿಮೆಯಾಗುತ್ತದೆ. ಮಳೆಗಾಲ, ಇತರ ದಿನಗಳಲ್ಲಿ ಕಾಮಗಾರಿ ಅಸಾಧ್ಯ ಎಂದು ತಿಳಿಸಿದ್ದಾರೆ.
ಈಗಾಗಲೇ ಕಟ್ಟೆ ನಿರ್ಮಾಣದ ಫೌಂಡೇಶನ್ ಕಾಮಗಾರಿ ಆರಂಭಗೊಂಡಿದ್ದು, ಈ ಕಾಮಗಾರಿ ಮುಗಿದ ಬಳಿಕ ಈಗಾಗಲೇ ತಂದಿರಿಸಿದ ಶಿಲಾಮಯ ಕಂಬ, ಮಾಡುಗಳನ್ನು ಕ್ರೇನ್ ಮೂಲಕ ಜೋಡಿಸುವ ಕೆಲಸ ಮಾತ್ರ ಇರುವುದು. ಇದು ಏ. 8ರೊಳಗೆ ಸಂಪೂರ್ಣ ಮುಗಿಯುತ್ತದೆ.
ಅಂದರೆ ಜಾತ್ರೆಗೆ ಶ್ರೀ ದೇವರ ಕೆರೆ ಆಯನಕ್ಕೆ ಯಾವುದೇ ಅಡ್ಡಿ ಆಗುವುದಿಲ್ಲ.
ಈ ಬಾರಿಯ ಜಾತ್ರೋತ್ಸವಕ್ಕೆ ತೆಪ್ಪ ಪುಷ್ಕರಣಿಗೆ ಇಳಿಯುವಷ್ಟು ನೀರು ಇದೆ. ತೆಪ್ಪ ಕಟ್ಟೆಯ ತನಕ ಹೋಗುವಷ್ಟು ಸ್ಥಳಾವಕಾಶ, ನೀರು ಇದೆ. ಆದರೆ ತೆಪ್ಪೋತ್ಸವ ಸಂದರ್ಭ ತೆಪ್ಪ ಕಟ್ಟೆಗೆ ಸುತ್ತಬರುವುದು ಮಾತ್ರ ಅಸಾಧ್ಯ. ಕಾಮಗಾರಿ ಹಿನ್ನೆಲೆಯಲ್ಲಿ ಕೆರೆಗೆ ಮಣ್ಣು ತುಂಬಿಸಿರುವುದರಿಂದ, ತೆಪ್ಪದಲ್ಲಿ ಸುತ್ತು ಬರಲು ಸಾಧ್ಯವಾಗದು.
ಲಕ್ಷದೀಪೋತ್ಸವಕ್ಕೆ ಮೊದಲು ಪುಷ್ಕರಣಿ ಕಾಮಗಾರಿ ಪೂರ್ಣ:
ಈ ಹಿನ್ನೆಲೆಯಲ್ಲಿ ದೈವಜ್ಞರನ್ನು ಸಂಪರ್ಕಿಸಿದ್ದು, ದೇವರ ಕಟ್ಟೆಗೆ ತೆಪ್ಪದಲ್ಲಿ ಪ್ರದಕ್ಷಿಣೆ ಹಾಕದಿದ್ದರೂ ತೊಂದರೆಯಿಲ್ಲ ಎಂದು ತಿಳಿಸಿರುತ್ತಾರೆ. ಮುಂದೆ ತೆಪ್ಪೋತ್ಸವ, ಕೆರೆ ಆಯನ ನಡೆಯುವುದು ಲಕ್ಷದೀಪೋತ್ಸವದಂದು. ಮುಂದಿನ ಪುಷ್ಕರಣಿಯ ಸಂಪೂರ್ಣ ಅಭಿವೃದ್ಧಿ ಕಾಮಗಾರಿ ಲಕ್ಷ ದೀಪೋತ್ಸವದ ತನಕ ನಡೆಯಲಿದೆ. ಲಕ್ಷದೀಪೋತ್ಸವದ ಮೊದಲು ದೇವಸ್ಥಾನದ ಪುಷ್ಕರಣಿ ಕಾಮಗಾರಿ ಸಂಪೂರ್ಣಗೊಳ್ಳಲಿದೆ ಎಂದು ಪಿ.ಜಿ. ಜಗನ್ನಿವಾಸ್ ರಾವ್ ತಿಳಿಸಿದ್ದಾರೆ.