ಎಸ್ಸೆಸ್ಸೆಲ್ಸಿಯ ಯಶೋಗಾಥೆಗಳು…

ನೀವೂ ಈ ಯಶೋಗಾಥೆಗಳ ಗುಂಪಿಗೆ ಸೇರಬಹುದು

(ಭಾಗ 5)

ನಾವು ಸಣ್ಣವರಿದ್ದಾಗ ಎಸ್ಸೆಸ್ಸೆಲ್ಸಿ, ಪಿಯುಸಿಗಳ ರ್ಯಾಂಕ್ ಘೋಷಣೆ ಆದಾಗ ಅವರನ್ನು ಬೆರಗು ಕಣ್ಣುಗಳಿಂದ ನೋಡುವುದೇ ಒಂದು ಸಂಭ್ರಮ. ಆಗೆಲ್ಲ ದೂರದರ್ಶನದಲ್ಲಿ ಅಂತಹ ಒಂದೆರಡು ಮಕ್ಕಳ ಸಂದರ್ಶನಗಳು ಪ್ರಸಾರ ಆಗುತ್ತಿದ್ದವು. ಮರುದಿನದ ಎಲ್ಲ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಫೋಟೊ, ಅವರ ಹೆತ್ತವರು ಸಿಹಿ ತಿನಿಸುವ ಫೋಟೊ ನಮಗಂತೂ ಭಾರಿ ಕ್ರೇಜ್ ಹುಟ್ಟಿಸುತ್ತಿದ್ದವು. ಆಗ ಎಸ್ಸೆಸ್ಸೆಲ್ಸಿ, ಪಿಯುಸಿ ಬೋರ್ಡ್‌ಗಳು ಕೇವಲ ಹತ್ತು ರ್ಯಾಂಕ್ ಕೊಡುತ್ತಿದ್ದವು ಮತ್ತು ಅವುಗಳಲ್ಲಿ ಸಿಂಹಪಾಲು ರಾಂಕನ್ನು ಬೆಂಗಳೂರಿನ ಎರಡು ಪ್ರತಿಷ್ಠಿತ ಕಾಲೇಜುಗಳು ಬಾಚಿ ಕೊಳ್ಳುತ್ತಿದ್ದವು.































 
 

ರ್ಯಾಂಕ್ ಪಡೆದವರು ರಾತ್ರಿ ಹಗಲಾಗುವ ಮೊದಲು ಸೆಲೆಬ್ರಿಟಿ

ರಾಂಕ್ ಪಡೆದವರು ರಾತ್ರಿ ಹಗಲು ಆಗುವುದರೊಳಗೆ ಸೆಲೆಬ್ರಿಟಿ ಆಗಿ ಬಿಡುತ್ತಿದ್ದರು. ಅದರಲ್ಲಿ ಕೂಡ ಎಸ್ಸೆಸ್ಸೆಲ್ಸಿ ರ್ಯಾಂಕ್ ಪಡೆಯುವವರು ಎಲ್ಲರೂ ಆಂಗ್ಲ ಮಾಧ್ಯಮದ ಮಕ್ಕಳೇ ಆಗಿರುತ್ತಿದ್ದರು. ಈ ಅಪವಾದವನ್ನು ನಿವಾರಣೆ ಮಾಡಲು ಬೋಎಡ್‌ ಇಂಗ್ಲಿಷ್ ಮಾಧ್ಯಮಕ್ಕೆ ಹತ್ತು, ಕನ್ನಡ ಮಾಧ್ಯಮಕ್ಕೆ ಹತ್ತು.. ಹೀಗೆ ಇಪ್ಪತ್ತು ರಾಂಕ್‌ಗಳನ್ನು ನೀಡಲು ಆರಂಭ ಮಾಡಿತು. ಮುಂದೆ ಕನ್ನಡ ಮಾಧ್ಯಮಕ್ಕೆ 20 ಮತ್ತು ಇಂಗ್ಲಿಷ್ ಮಾಧ್ಯಮಕ್ಕೆ 20 ಹೀಗೆ ರಾಂಕ್ ಕೊಡಲು ಆರಂಭ ಮಾಡಿತು. ಆಗೆಲ್ಲ ನಮ್ಮ ಸುತ್ತಮುತ್ತಲಿನ ವಿದ್ಯಾರ್ಥಿಗಳು ರಾಂಕ್ ಪಡೆಯಲು ಆರಂಭ ಮಾಡಿದರು. ಆಗೆಲ್ಲ ರಾಂಕ್ ಪಡೆಯಲು ಅಡ್ಡ ದಾರಿಗಳು ಆರಂಭವಾದವು ಎನ್ನುವ ಕೂಗಿನ ನಡುವೆ ಕೂಡ ಮಕ್ಕಳ ಪ್ರತಿಭೆಗಳ ಬಗ್ಗೆ ಇರುವ ನಮ್ಮ ಉತ್ಕಟ ಅಭಿಮಾನ ಕಡಿಮೆ ಆಗಲೇ ಇಲ್ಲ. ಅದು ಕಡಿಮೆ ಆಗುವ ಕ್ರೇಜ್ ಅಲ್ಲವೇ ಅಲ್ಲ.

ರಾಂಕ್‌ಗಳು ರದ್ದಾದವು

ಈ ರಾಂಕ್ ಪಡೆಯುವ ರೇಸಲ್ಲಿ ಮಕ್ಕಳ ಮೇಲೆ ಒತ್ತಡ ಹೆಚ್ಚಾಗುತ್ತಾ ಇದೆ ಮತ್ತು ಶಾಲೆಗಳು ಅಡ್ಡ ದಾರಿಯನ್ನು ಹಿಡಿಯುತ್ತಾ ಇವೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ಎರಡೂ ಬೋರ್ಡ್‌ಗಳು ರಾಂಕ್ ಪದ್ಧತಿ ಕೈಬಿಟ್ಟವು. ಆದರೆ ಶಾಲೆಗಳು ರಾಜ್ಯಕ್ಕೆ ಪ್ರಥಮ, ರಾಜ್ಯಕ್ಕೆ ದ್ವಿತೀಯ, ಜಿಲ್ಲೆಗೆ ಪ್ರಥಮ, ತಾಲೂಕಿಗೆ ಪ್ರಥಮ…ಹೀಗೆಲ್ಲ ಘೋಷಿಸಿಕೊಳ್ಳುವುದನ್ನು ಬಿಡಲೇ ಇಲ್ಲ. ನಮ್ಮ ಶಾಲೆಗಳಿಗೆ ಅವರ ಮಕ್ಕಳ ಪ್ರತಿಭೆಗಳಿಗಿಂತ ತಮ್ಮ ಶಾಲೆಗಳನ್ನು ಮಾರ್ಕೆಟ್ ಮಾಡೋದೆ ಆದ್ಯತೆ ಆಗಿತ್ತು ಅನ್ನುವುದನ್ನು ಒಪ್ಪಲೇ ಬೇಕು. ಏನಿದ್ದರೂ ರಾಂಕ್ ಪಡೆಯುವುದು ಕೂಡ ಒಂದು ಅನನ್ಯ ಪ್ರತಿಭೆ ಎಂದು ನಾನು ಒಪ್ಪಿಕೊಳ್ಳುತ್ತೇನೆ.

2016ರಲ್ಲಿ ಧೂಳೆಬ್ಬಿಸಿದ ಭದ್ರಾವತಿಯ ರಂಜನ್

ಆ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶ ಘೋಷಣೆ ಆದಾಗ ಇಡೀ ರಾಜ್ಯಕ್ಕೇ ಒಂದು ಶಾಕ್ ಕಾದಿತ್ತು. ಭದ್ರಾವತಿಯ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಆಗಿದ್ದ ರಂಜನ್ ಎಸ್ಸೆಸ್ಸೆಲ್ಸಿ ಬೋರ್ಡಿನ ಇತಿಹಾಸದಲ್ಲಿ ಮೊದಲ ಬಾರಿಗೆ 625/625 ಅಂಕ ಪಡೆದಿದ್ದ. ಆಗ ಟಿವಿ ಸ್ಟುಡಿಯೋದಿಂದ ಅವನ ಜತೆಗೆ ಲೈವಲ್ಲಿ ಕಾಲ್ ಮಾಡಿ ಮಾತಾಡಿದ್ದೆ. ಮರುದಿನ ಕರ್ನಾಟಕದ ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ರಂಜನ್ ಫೋಟೊ ವಿಜೃಂಭಿಸಿತ್ತು. ಅವನನ್ನು ಮುಖ್ಯಮಂತ್ರಿಗಳು ಬೆಂಗಳೂರಿಗೆ ಕರೆಸಿ ಸನ್ಮಾನ ಮಾಡಿದ್ದು ಆ ಕಾಲಕ್ಕೆ ಬಹಳ ದೊಡ್ಡ ಸುದ್ದಿ. ಸಾಕಷ್ಟು ಕುಹಕಿಗಳು ಅದು ಹೇಗೆ ಸಾಧ್ಯ? ಎಂದು ಪ್ರಶ್ನೆ ಎತ್ತಿದ್ದರು. ಕೋರ್ ವಿಷಯಗಳಲ್ಲಿ ಓಕೆ, ಆದರೆ ಭಾಷೆಗಳಲ್ಲಿ ಹೇಗೆ ಪೂರ್ತಿ ಅಂಕ ಕೊಡುತ್ತಾರೆ? ಎಂದೆಲ್ಲ ಕೇಳಿದಾಗ ಎಸ್ಸೆಸ್ಸೆಲ್ಸಿ ಬೋರ್ಡ್ ಅವನ ಆರೂ ವಿಷಯಗಳ ಉತ್ತರ ಪತ್ರಿಕೆಗಳನ್ನು ತನ್ನ ಜಾಲತಾಣದಲ್ಲಿ ಪಬ್ಲಿಷ್ ಮಾಡಿತ್ತು. ಅವನ ಉತ್ತರ ಪತ್ರಿಕೆಯಲ್ಲಿ ಒಂದು ಅಂಕ ಕೂಡ ಕಟ್ ಮಾಡುವ ಅವಕಾಶವೇ ಇರಲಿಲ್ಲ. ಅನಿಲ್ ಕುಂಬ್ಳೆ ಹತ್ತಕ್ಕೆ ಹತ್ತು ವಿಕೆಟ್ ಪಡೆದಂತೆ ಇತ್ತು ರಂಜನ್ ಯಶೋಗಾಥೆ.

ಮುಂದೆ ಅದೇ ಬೆಂಚ್ ಮಾರ್ಕ್ ಆಯ್ತು

ಮುಂದೆ ಎಸ್ಸೆಸ್ಸೆಲ್ಸಿ ಬೋರ್ಡ್ ರಾಂಕ್ ಘೋಷಣೆ ಮಾಡಲಿ ಅಥವಾ ಬಿಡಲಿ ಮುಂದಿನ ವರ್ಷಗಳಲ್ಲಿ 625/625 ಅಂಕ ಪಡೆಯುವುದೇ ಒಂದು ಸಂಪ್ರದಾಯ ಆಗಿ ಹೋಯಿತು. ಮುಂದಿನ ವರ್ಷ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅದೇ ಸಾಧನೆ ರಿಪೀಟ್ ಮಾಡಿದರು. 2021ರಲ್ಲಿ 157 ವಿದ್ಯಾರ್ಥಿಗಳು, 2022ರಲ್ಲಿ 145 ವಿದ್ಯಾರ್ಥಿಗಳು ಔಟ್ ಆಫ್ ಔಟ್ ಸ್ಕೋರ್ ಪಡೆದಿದ್ದಾರೆ. ಇದು ಮೊದಲ ಫಲಿತಾಂಶ ಘೋಷಣೆ ಆದಾಗ ಪಡೆದ ಸಂಖ್ಯೆ ಆಗಿದೆ. (ಮರುಮೌಲ್ಯಮಾಪನದಲ್ಲಿ ಹೆಚ್ಚುವರಿ ಅಂಕ ಪಡೆದು ಈ ಸಾಧನೆ ಮಾಡಿದವರ ಸಂಖ್ಯೆ ಅಷ್ಟೇ ಇದೆ). ಈಗ ನಮ್ಮ ಸುತ್ತಮುತ್ತಲಿನ ಶಾಲೆಯ ಮಕ್ಕಳೂ ಈ ಸಾಧನೆ ಮಾಡುವುದನ್ನು ನೋಡುವಾಗ ಮಕ್ಕಳ ಪ್ರತಿಭೆಗೆ ನಾವು ಸೆಲ್ಯೂಟ್ ಹೊಡೆಯದೆ ಇರಲು ಸಾಧ್ಯವೇ ಇಲ್ಲ.

ಕೊರೊನದ ವರ್ಷದಲ್ಲಿ ಸಾವಿರಾರು ಮಂದಿಗೆ ಫುಲ್ ಮಾರ್ಕ್ಸ್

ಒಂದು ವರ್ಷ ಕೊರೊನ ತೀವ್ರವಾಗಿದ್ದ ಸಂದರ್ಭದಲ್ಲಿ ಎಲ್ಲ ಪ್ರಶ್ನೆಗಳನ್ನು MCQ ಕೊಟ್ಟು ಬೋರ್ಡು ಪ್ರಯೋಗಾತ್ಮಕ ಪರೀಕ್ಷೆ ಮಾಡಿತು. ಆ ವರ್ಷ ಪರೀಕ್ಷೆಯನ್ನು ಬರೆದ ಎಲ್ಲ ಮಕ್ಕಳೂ (ತಾಂತ್ರಿಕ ಕಾರಣಕ್ಕೆ ಒಬ್ಬನನ್ನು ಬಿಟ್ಟು) ಪಾಸಾದರು. ಅದಕ್ಕಿಂತ ಹೆಚ್ಚಾಗಿ ಆ ವರ್ಷ ಸಾವಿರಾರು ಮಕ್ಕಳು 625/625 ಅಂಕ ಪಡೆದರು ಮತ್ತು ಕೊರೊನಕ್ಕೆ ಥ್ಯಾಂಕ್ಸ್ ಹೇಳಿದರು.
ಇಂತಹ ಸಾಧನೆ ಮಾಡಿದ ನೂರಾರು ವಿದ್ಯಾರ್ಥಿಗಳನ್ನು ನಾನು ಟಿವಿಯಲ್ಲಿ ಸಂದರ್ಶನ ಮಾಡಿದ್ದು ಅವರಲ್ಲಿ ಕೆಲವರ ಮನೆಗಳಿಗೂ ಹೋಗಿದ್ದೇನೆ. ಅಂತಹವರ ಕೆಲವು ಯಶೋಗಾಥೆಗಳು ನಿಮ್ಮ ಮುಂದೆ…

ಎಸ್ಸೆಸ್ಸೆಲ್ಸಿಯ ಯಶೋಗಾಥೆಗಳು…

1) ರಾಯಚೂರಿನ ಕೃಷಿ ಕಾರ್ಮಿಕನ ಮಗಳು 625/625 ಅಂಕಗಳನ್ನು ಪಡೆದಳು. ಆಕೆ ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದವಳು!
2) ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಟ್ರಂಕ್ ಹೊರುವ ಹಮಾಲಿಯ ಮಗ 625/625 ಅಂಕ ಪಡೆದಿದ್ದನು. ಅವನೂ ಸರಕಾರಿ ಶಾಲೆಯ ಕನ್ನಡ ಮಾಧ್ಯಮದ ಹುಡುಗ. ಯಾವ ಟ್ಯೂಷನ್ ಕ್ಲಾಸ್ ಕೂಡ ಹೋದವನು ಅಲ್ಲ.
3) ನನ್ನ ಟಿವಿ ಕಾರ್ಯಕ್ರಮಕ್ಕೆ ಬಂದಿದ್ದ ಅತ್ಯುತ್ತಮ ಶ್ರೇಣಿ ಪಡೆದಿದ್ದ ಹುಡುಗಿಯ ಮನೆಯಲ್ಲಿ ಕರೆಂಟ್ ಇರಲಿಲ್ಲ. ಆಕೆ ಕೂಡ ಕನ್ನಡ ಮಾಧ್ಯಮದ ಸರಕಾರಿ ಶಾಲೆಯ ಹುಡುಗಿ.
4) ನಾನು ಭೇಟಿ ಮಾಡಿದ ಶಿರಸಿಯ ಮುಸ್ಲಿಂ ಕುಟುಂಬದ ಹುಡುಗಿ ಕೂಡ 625/625 ಅಂಕ ಪಡೆದಿದ್ದಳು. ಆಕೆಯ ಅಪ್ಪ ಒಬ್ಬ ಸಾಮಾನ್ಯ ರಿಕ್ಷಾ ಚಾಲಕ ಆಗಿದ್ದರು. ಆಕೆ ಸರಕಾರಿ ಶಾಲೆಯ ಹುಡುಗಿ.
5) ಕುಮಟಾದ ಒಬ್ಬ ಟೆಂಪೊ ಚಾಲಕನ ಮಗಳು ಹಠ ಹಿಡಿದು ಓದಿ 625/625 ಅಂಕ ಪಡೆದು ಲೆಜೆಂಡ್ ಆಗಿದ್ದಳು. ಆಕೆ ಕೂಡ ಟ್ಯೂಷನ್ ಕ್ಲಾಸಿಗೆ ಹೋದವಳು ಅಲ್ಲ.
6) ದಕ್ಷಿಣ ಕನ್ನಡದ ಸುಬ್ರಹ್ಮಣ್ಯದ ಸಮೀಪದ ಒಬ್ಬ ಹುಡುಗ ಪ್ರತಿ ದಿನ 4-5 ಕಿಲೋ ಮೀಟರ್ ಬೈಸಿಕಲ್ ತುಳಿದು ಶಾಲೆಗೆ ಬರುತ್ತಿದ್ದ ಮತ್ತು ಮನೆಯಿಂದ ಟಿಫಿನ್ ಬಾಕ್ಸ್ ತೆಗೆದುಕೊಂಡು ಬಂದು ಮಧ್ಯಾಹ್ನದ ಊಟ ಮಾಡುತ್ತಿದ್ದ. ಆತನು ಕೂಡ 625/625 ಅಂಕ ಪಡೆದು ಸ್ಟಾರ್ ಆಗಿದ್ದ.
7) ಮೂಡಬಿದ್ರೆಯ ಒಬ್ಬ ವಿದ್ಯಾರ್ಥಿ ಔಟ್ ಆಫ್ ಮಾರ್ಕ್ಸ್ ತೆಗೆದುಕೊಂಡಿದ್ದ. ಆತ ಎಂಟನೇ ತರಗತಿಯಿಂದ ಪ್ರತಿ ಪರೀಕ್ಷೆಯಲ್ಲಿ ಒಂದು ಮಾರ್ಕ್ ಕಡಿಮೆ ತೆಗೆದುಕೊಂಡದ್ದೇ ಇಲ್ಲ ಎಂದು ಅವನ ಪ್ರಿನ್ಸಿಪಾಲ್ ನನಗೆ ಹೇಳಿದ್ದರು.
8) ಶಿವಮೊಗ್ಗದ ಒಬ್ಬ ಹುಡುಗ ಪರೀಕ್ಷೆ ಮುಗಿಸಿ ಬಂದವನೇ ತನಗೆ ಫುಲ್ ಮಾರ್ಕ್ ಎಂದು ಘೋಷಣೆ ಮಾಡಿದ್ದನು. ಆತ ಪ್ರತಿಭಾವಂತ ಆಗಿದ್ದರೂ ಆತನ ಮಾತು ಯಾರೂ ನಂಬಲಿಲ್ಲ. ರಿಸಲ್ಟ್ ಹಿಂದಿನ ದಿನವೇ 5 ಕಿಲೋ ಸ್ವೀಟ್ ತಂದು ಇಟ್ಟುಕೊಂಡಿದ್ದ. ಅವನಿಗೂ ರಿಸಲ್ಟ್ ಬಂದಾಗ 625 ಅಂಕ ಬಂದಿತ್ತು.
9) ಮಲ್ಪೆಯ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕಳೆದ ವರ್ಷ ರಾಜ್ಯ ಮಟ್ಟದಲ್ಲಿ ಸುದ್ದಿ ಆದ. ಅದಕ್ಕೆ ಕಾರಣ ಅವನು ಪ್ರತಿ ದಿನ (ಎಸ್ಸೆಸ್ಸೆಲ್ಸಿ ವರ್ಷವೂ ಸೇರಿದಂತೆ) ತನ್ನ ಅಪ್ಪನ ಜತೆ ಬೋಟಲ್ಲಿ ಹೋಗಿ ಫಿಶಿಂಗ್ ಮಾಡುತ್ತಿದ್ದ. ಬೆಳಗ್ಗೆ ಎರಡು ಗಂಟೆ ಮತ್ತು ಸಂಜೆ ಒಂದು ಗಂಟೆ, ಅದೂ ಸರಕಾರಿ ಶಾಲೆಯ ಹಿನ್ನೆಲೆಯ ಹುಡುಗ!
10) ಮತ್ತೊಬ್ಬಳು ನಮ್ಮೂರಿನ ಪ್ರತಿಭಾವಂತ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಹಿಂದಿನ ದಿನ ಬೆಂಗಳೂರಿಗೆ ಹೋಗಿ ಒಂದು ಖಾಸಗಿ ಸಂಸ್ಥೆಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದು ಇಡಿ ರಾತ್ರಿ ಜರ್ನಿ ಮಾಡಿಬಂದು ಪರೀಕ್ಷೆ ಬರೆದಿದ್ದಳು. ಆಕೆ ಪಡೆದ ಅಂಕಗಳು 623/625.
(ಮುಂದುವರಿಯುವುದು)
ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top