ಪುತ್ತೂರು : ಅನಧಿಕೃತ ಮರಳು ದಂಧೆಯನ್ನು ಮಟ್ಟ ಹಾಕುವಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಅಧಿಕಾರಿಗಳ ತಂಡವನ್ನು ನಿರ್ಮಾಣ ಮಾಡಬೇಕಾದ ಅಗತ್ಯವಿದೆ ಎಂದು ಮಲೆನಾಡು ಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅನಧಿಕೃತವಾಗಿ ಮರಳುಗಳನ್ನು ಸಾಗಿಸಿ ಅಧಿಕೃತ ಬ್ಲಾಕ್ ಗಳಲ್ಲಿ ಸಂಗ್ರಹಿಸಿ ಬೇರೆ ಜಿಲ್ಲೆಗಳಿಗೆ ಸಪ್ಲೈ ಮಾಡಲಾಗುತ್ತಿದೆ. ಇದಕ್ಕೆ ದಾಖಲೆಗಳು ನಮ್ಮ ಬಳಿ ಇದೆ ಎಂದು ಹೇಳಿದರು.
ಮಾಹಿತಿ ಹಕ್ಕಿನ ಪ್ರಕಾರ ದ.ಕ. ಜಿಲ್ಲೆಯಲ್ಲಿ ನೂರರ ಸಮೀಪದಲ್ಲಿ ಅಧಿಕೃತ ಪರವಾನಿಗೆ ಇರುವ ಮರಳು ಬ್ಲಾಕ್ ಗಳಿದ್ದು, ಈ ಪೈಕಿ ಕಡಬದಲ್ಲಿ 8, ಪುತ್ತೂರು 1 ಹಾಗೂ ಬೆಳ್ತಂಗಡಿಯಲ್ಲಿ 6 ಬ್ಲಾಕ್ ಗಳಿವೆ. ಈ ಅಧಿಕೃತ ಬ್ಲಾಕ್ ಗಳನ್ನು ಬಳಸಿ ಜತೆಗೆ ಅಧಿಕಾರಿಗಳ ಶಾಮೀಲಿನಿಂದ ಈ ಅವ್ಯಾಹತ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಪರಿಣಾಮ ಬಡ ವರ್ಗದ ಜನರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ, ಸಮಸ್ಯೆ ಉಂಟಾಗಿದೆ. ಮರಳಿನ ಕೊರತೆ ಕಾಡುತ್ತಿದೆ. ಮರಳು ದಂಧೆಯಿಂದ ಆಗುವ ಭ್ರಷ್ಟಾಚಾರ, ಗೂಂಡಾಗಿರಿಗಳನ್ನು ಮಟ್ಟ ಹಾಕಲು ಉನ್ನತ ಮಟ್ಟದ, ಅನುಭವವುಳ್ಳ ಅಧಿಕಾರಿಗಳ ತಂಡವನ್ನು ಅನಧಿಕೃತ ಮರಳು ದಂಧೆ ನಡೆಸುವವರ ವಿರುದ್ಧ ಕಾರ್ಯಾಚರಣೆಗೆಂದೇ ರಚನೆ ಮಾಡಬೇಕಾಗಿದೆ ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ತಾಲೂಕು ಸಂಚಾಲಕ ಶೇಖರ್ ಉಪಸ್ಥಿತರಿದ್ದರು.