ದೆಹಲಿ : ಈಶಾನ್ಯ ದೆಹಲಿಯ ನಂದ್ ನಾಗ್ರಿ ಪ್ರದೇಶದಲ್ಲಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುವ ಮೂಲಕ ಆತ್ಮಹತ್ಯೆಗೆ ಯತ್ನಿಸುತ್ತಿದ್ದ 25 ವರ್ಷದ ಯುವಕನನ್ನು ಪೊಲೀಸರು ಸಮಯ ಪ್ರಜ್ಞೆ ಮೆರೆಯುವ ಮೂಲಕ ಆತನ ಜೀವ ಉಳಿಸಿರುವ ಘಟನೆ ದೆಹಲಿಯಲ್ಲಿ ವರದಿಯಾಗಿದೆ.
ಫೇಸ್‌ಬುಕ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನ ಮಾಹಿತಿ ಪಡೆದು ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಂಡು ಪ್ರಾಣ ಉಳಿಸಿದ್ದಾರೆ. ಸೋಮವಾರ ರಾತ್ರಿ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿತು. ಸಂತ್ರಸ್ತನ ಫೇಸ್‌ಬುಕ್ ಐಡಿಗೆ ಲಿಂಕ್ ಮಾಡಲಾದ ಎರಡು ಫೋನ್ ನಂಬರ್‌ಗಳನ್ನು ಪೊಲೀಸ್ ತಂಡ ಟ್ರಾಕ್ ಮಾಡಿ ಅತನಿರುವ ಸ್ಥಳ ಪತ್ತೆ ಮಾಡಿ ಕೆಲವೇ ನಿಮಿಷಗಳ ಅಂತರದಲ್ಲಿ ಆತನ ಮನೆಗೆ ಧಾವಿಸಿದ್ದಾರೆ.
ಪೊಲೀಸ್ ತಂಡ ಮನೆಗೆ ಬಂದು ಆತನನ್ನು ರಕ್ಷಿಸಿದ್ದಾರೆ. ದೆಹಲಿ ಪೊಲೀಸ್‌ನ ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ (ಐಎಫ್‌ಎಸ್‌ಒ) ಘಟಕವು ನಂದ್ ನಾಗ್ರಿ ಪೊಲೀಸ್ ಠಾಣೆಯ ಎಸ್‌ಎಚ್‌ಒಗೆ ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮ ವೇದಿಕೆ (ಫೇಸ್‌ಬುಕ್) ಮಾಹಿತಿ ನೀಡಿದೆ ಎಂದು ಪೊಲೀಸ್ ಉಪ ಆಯುಕ್ತ ಜಾಯ್ ಟಿರ್ಕಿ ಹೇಳಿದ್ದಾರೆ.