ಪುತ್ತೂರು: ಕುದ್ಮಾರು ಶಾಲಾ ನಿವೃತ್ತ ಶಿಕ್ಷಕ ಮದನ ಪೂಜಾರಿ ಅವರು ಮಾ. 16ರಂದು ನಿಧನರಾಗಿದ್ದು, ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಸಭಾಭವನದಲ್ಲಿ ಏ. 2ರ ಭಾನುವಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.
ಶಿಕ್ಷಕರಾಗಿ 35 ವರ್ಷಗಳ ಸಾರ್ಥಕ ವೃತ್ತಿ ಜೀವನ ನಡೆಸಿದವರು ಮದನ ಪೂಜಾರಿ ಅವರು. ಅವರು ಶಿಕ್ಷಕರಾಗಿದ್ದಷ್ಟು ಸಮಯ ಶಾಲೆಗಷ್ಟೇ ಶಿಕ್ಷಕರಾಗಿರಲಿಲ್ಲ, ಸಮಾಜಕ್ಕೆ ಶಿಕ್ಷಕರಾಗಿದ್ದದ್ದು ವಿಶೇಷತೆ. 35 ವರ್ಷಗಳಷ್ಟು ಸುದೀರ್ಘ ಅವಧಿಯಲ್ಲಿ ಅವರು ಶಿಕ್ಷಕರಾಗಿದ್ದುದರಿಂದ, ಕೆಲ ಮಕ್ಕಳ ತಂದೆಗೂ ಅವರೇ ಶಿಕ್ಷಕರಾಗಿದ್ದರು. ಆದ್ದರಿಂದಲೇ, ಮದನ ಪೂಜಾರಿ ಎಂದರೆ ಅತೀವ ಗೌರವ, ಪ್ರೀತಿ.
ಕುದ್ಮಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಅವರು, ಬಳಿಕ ಭಡ್ತಿ ಹೊಂದಿ ಮುಖ್ಯಶಿಕ್ಷಕರಾಗಿ ಅದೇ ಶಾಲೆಯಲ್ಲಿ ನಿವೃತ್ತಿ ಹೊಂದಿದ್ದರು.
ಎಸ್.ಎಂ. ಪೂಜಾರಿ ಎಂದೇ ಖ್ಯಾತರಾಗಿದ್ದ ಅವರು, ವಿದ್ಯಾರ್ಥಿಗಳ, ಊರವರ ಪ್ರೀತಿಗೆ ಪಾತ್ರರಾಗಿದ್ದರು. ಇದೀಗ ಅವರ ಶಿಷ್ಯರು, ಅಭಿಮಾನಿಗಳು ಊರು – ಪರವೂರುಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ.
ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಮದನ ಪೂಜಾರಿ ಅವರು, ವೃತ್ತಿಯ ಜೊತೆ ಸಾಮಾಜಿಕವಾಗಿಯೂ ಗುರುತಿಸಿಕೊಂಡವರು. ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಅವರು, ಕೆಲಂಬಿರಿ ಶ್ರೀ ಬ್ರಹ್ಮಬೈದೇರುಗಳ ಗರಡಿಯ ಆಡಳಿತ ಸಮಿತಿ ಅಧ್ಯಕ್ಷರಾಗಿ, ಪ್ರಸ್ತುತ ಗೌರವಾಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದವರು. ಬೆಳಂದೂರು ವಲಯ ಬಿಲ್ಲವ ಸಮಿತಿ ಅಧ್ಯಕ್ಷರಾಗಿ, ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ ಸಂಘದ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಪುತ್ತೂರು ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಕುದ್ಮಾರು ಬೇರಿಕೆಯಲ್ಲಿ ನಾಗಬ್ರಹ್ಮ ಆದಿ ಮುಗೇರ್ಕಳ ನೇಮೋತ್ಸವದಲ್ಲಿ ಆರಂಭದಿಂದಲೇ ಪಾಲ್ಗೊಳ್ಳುತ್ತಿದ್ದರು.
ಮದನ ಪೂಜಾರಿ ಅವರ ಶೈಕ್ಷಣಿಕ, ಸಾಮಾಜಿಕ ಸೇವೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ. ಮದನ ಪೂಜಾರಿ ಅವರ ಶಿಷ್ಯರು, ಅಭಿಮಾನಿಗಳು, ಹಿತೈಷಿಗಳು ಸೇರಿಕೊಂಡು ಸಾರ್ವಜನಿಕ ಶ್ರದ್ಧಾಂಜಲಿ ಸಭೆಯನ್ನು ಏ. 2ರಂದು ಏರ್ಪಡಿಸಿದ್ದಾರೆ.