ಪುತ್ತೂರು: ರಾಜ್ಯ ಚುನಾವಣೆಗೆ ಮುಹೂರ್ತ ದಿನ ನಿಗದಿಯಾಗಿದ್ದು, ಮೇ 10ರಂದು ರಾಜ್ಯಾದ್ಯಂತ ಚುನಾವಣೆ ನಡೆಯಲಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದೆ.
ಪೂರ್ವಾಂಚಲದ 3 ರಾಜ್ಯಗಳ ಚುನಾವಣೆ ಬಳಿಕ ಇದೀಗ ದಕ್ಷಿಣ ಭಾರತದ ಚುನಾವಣೆಯನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿರುವ ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಕರ್ನಾಟಕದಲ್ಲಿ ಒಂದು ಹಂತದಲ್ಲಿ ಚುನಾವಣೆಯನ್ನು ನಡೆಸುವ ಬಗ್ಗೆ ಘೋಷಣೆ ಹೊರಡಿಸಿದ್ದಾರೆ.
ರಾಜ್ಯದ 224 ಕ್ಷೇತ್ರಗಳಿಗೆ ಮೇ 10ರಂದು ಚುನಾವಣೆ ನಡೆಯಲಿದ್ದು, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಏಪ್ರಿಲ್ 13ರಂದು ಗೆಜೆಟ್ ನೋಟಿಫಿಕೇಷನ್ ಆಗಲಿದೆ. ಏಪ್ರಿಲ್ 20ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ಏಪ್ರಿಲ್ 21ರಂದು ಸ್ಕ್ರುಟಿನಿ. 24ರಂದು ಹಿಂಪಡೆಯಲು ಕೊನೆ ದಿನ. ಮೇ 10ರಂದು ಚುನಾವಣೆ ನಡೆದು ಮೇ 13ರಂದು ಫಲಿತಾಂಶ ಹೊರಬೀಳಲಿದೆ.
ಮನೆಯಿಂದಲೇ ಮತದಾನಕ್ಕೂ ಅವಕಾಶ:
ಅಂಗವಿಕಲರಿಗೆ, ಹಿರಿಯ ನಾಗರಿಕರ ಮನೆ ಬಾಗಿಲಿಗೇ ಬರುವ ಮತದಾನ ಕೇಂದ್ರದ ಅಧಿಕಾರಿಗಳು, ಮತದಾನದ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ ಎನ್ನುವುದು ಈ ಬಾರಿಯ ವಿಶೇಷತೆ. ಆದರೆ ಅವರು ಮೊದಲೇ ಆಯೋಗದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ರಾಜ್ಯದಲ್ಲಿ ಒಟ್ಟು 5.21 ಕೋಟಿ ಮತದಾರರಿದ್ದಾರೆ. 9.17 ಲಕ್ಷ ಮಂದಿ ಇದೇ ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ.