ಬೆಂಗಳೂರು : ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಐದು ದಿನಗಳ ಕಾಲ ಲೋಕಾಯುಕ್ತ ಪೊಲೀಸ್ ಕಸ್ಟಡಿಗೆ ನೀಡಲು ಮಾ.28 ರಂದು ಆದೇಶ ಹೊರಡಿಸಿದೆ.
ಜಾಮೀನು ರದ್ದಾದ ನಂತರ ನಿನ್ನೆ ಸಂಜೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧಿಸಿದ್ದ ಲೋಕಾಯುಕ್ತ ಪೊಲೀಸರು, ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ಆರೋಪಿ ಶಾಸಕರ ವಿಚಾರಣೆ ನಡೆಸಿದ ಕೋರ್ಟ್, ಹೆಚ್ಚಿನ ವಿಚಾರಣೆಗಾಗಿ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಏಪ್ರಿಲ್ 1ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಮಾಡಾಳ್ ಅವರ ಪುತ್ರ ಕೆಎಎಸ್ ಅಧಿಕಾರಿ ಪ್ರಶಾಂತ್ ಮಾಡಾಳ್ ಅವರು ತಂದೆಯ ಪರವಾಗಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಬಳಿಕ ಶಾಸಕ ಕಚೇರಿ ಮತ್ತು ಮನೆಯಲ್ಲಿ 8 ಕೋಟಿ ರೂಪಾಯಿ ಹೆಚ್ಚು ನಗದು ಪತ್ತೆಯಾಗಿತ್ತು.