ಕಾಂತಾರ ಸಿನಿಮಾದ ಪ್ರಭಾವದಿಂದಲೇ ಇಷ್ಟೆಲ್ಲ ಅಪಸವ್ಯ ಅಗುತ್ತಿರುವುದು ಎಂದು ಆಕ್ರೋಶ
ಮಂಗಳೂರು : ಕರಾವಳಿ ಹೊರತುಪಡಿಸಿ ಬೇರೆ ಎಲ್ಲೂ ದೈವಾರಾಧನೆಯ ಸಂಪ್ರದಾಯವಿಲ್ಲ. ಆದರೆ ಕಾಂತಾರ ಸಿನೆಮಾದ ಪ್ರಭಾವದಿಂದಾಗಿ ವಿವಿಧೆಡೆಯಲ್ಲಿ ದೈವರಾಧನೆ ಅಥವಾ ಅದನ್ನು ಹೋಲುವಂಥ ಆರಾಧನೆ ಮಾಡಿ ಜನರಿಗೆ ಮಂಕುಬುದ್ದಿ ಎರಚಲು ಯತ್ನಿಸುತ್ತಿರುವ ಘಟನೆಗಳು ಸಂಭವಿಸುತ್ತಿದ್ದು, ಇದನ್ನು ತುಳುನಾಡಿನವರು ಬಲವಾಗಿ ವಿರೋಧಿಸುತ್ತಿದ್ದಾರೆ.
‘ಕಾಂತಾರ’ ಸಿನಿಮಾ ಬಿಡುಗಡೆ ಆದ ನಂತರ ಬಹಳಷ್ಟು ಜನರಿಗೆ ಕರಾವಳಿ ಸಂಸ್ಕೃತಿ, ಪಂಜುರ್ಲಿ ದೈವದ ಪರಿಚಯ ಆಯ್ತು. ಆದರೆ ಕೆಲವೆಡೆ ಇದಕ್ಕೆ ತದ್ವಿರುದ್ಧವಾಗಿ ಪಂಜುರ್ಲಿ ದೈವದ ಹೆಸರು ಹೇಳಿಕೊಂಡು ಜನರಿಂದ ಹಣ ವಸೂಲಿ ಮಾಡುವ ದಂಧೆ ಕೂಡಾ ಶುರುವಾಗಿದೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಗಂಗಮ್ಮ ತಾಯಿಗೆ ಪಂಜುರ್ಲಿ ದೈವದಂತೆ ಅಲಂಕಾರ ಮಾಡಿರುವುದು ಕರಾವಳಿ ಜನರ ಕೋಪಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೊ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಜನರು ಕಾಮತಾರ ನಿರ್ದೇಶಕ, ನಟ ರಿಷಬ್ ಶೆಟ್ಟಿ ಮೇಲೆ ಅಸಮಾಧಾನಗೊಂಡಿದ್ದಾರೆ.
‘ಕಾಂತಾರ’ ಸಿನಿಮಾ ಬಿಡುಗಡೆ ಆದಾಗಿನಿಂದ ಇಂತಹ ಅವಾಂತರಗಳು ನಡೆಯುತ್ತಿವೆ. ಇದೀಗ ‘ಕಾಂತಾರ 2’ ಕೆಲಸಗಳು ನಡೆಯುತ್ತಿದ್ದು ಕೆಲವು ದಿನಗಳ ನಂತರ ಆ ಸಿನಿಮಾ ಕೂಡಾ ತೆರೆ ಕಾಣುತ್ತದೆ. ಕರಾವಳಿ ಹೊರತುಪಡಿಸಿ ಬೇರೆ ಎಲ್ಲೂ ದೈವಾರಾಧನೆಗೆ ಅವಕಾಶವಿಲ್ಲ. ಆದರೆ ಈಗ ರಾಜ್ಯದ ಮೂಲೆ ಮೂಲೆಯಲ್ಲೂ ಆಚರಣೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇದು ಎತ್ತ ಸಾಗಲಿದೆಯೋ, ಆದ್ದರಿಂದ ‘ಕಾಂತಾರ 2’ ಸಿನಿಮಾವನ್ನು ಬ್ಯಾನ್ ಮಾಡುವ ಮೂಲಕ ತುಳುನಾಡಿನ ಸಂಸ್ಕೃತಿಯನ್ನು ಕಾಪಾಡಬೇಕು ಎಂದು ಕೆಲವು ಕರಾವಳಿಗರು ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮತ್ತಿತರ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಕಾಂತಾರ’ ತಂಡ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಕೆಲವು ದಿನಗಳ ಹಿಂದೆ ಕೂಡಾ ಜನರು ಆರೋಪಿಸಿದ್ದರು. ಸಿನಿಮಾ ಮಾಡಿ ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಂಡ ‘ಕಾಂತಾರ’ ತಂಡ ಈಗ ದೈವಾರಾಧನೆಯನ್ನು ಈ ರೀತಿ ಬಳಕೆ ಮಾಡಿಕೊಳ್ಳುವವರ ವಿರುದ್ಧ ಮಾತನಾಡದೆ ಮೌನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಕಾಂತಾರ’ ಯಶಸ್ವಿಯಾದಾಗ ಕೆಲವರು ಚಿತ್ರದಲ್ಲಿ ದೈವ ಕೂಗುವುದನ್ನು ಅನುಕರಣೆ ಮಾಡಿ ರೀಲ್ಸ್ ಮಾಡಿದ್ದರು. ಆದರೆ ದೈವಕ್ಕೆ ಅವಮಾನವಾಗುವಂತ ಕೆಲಸ ಮಾಡಬೇಡಿ ಎಂದು ರಿಷಬ್ ಶೆಟ್ಟಿ ಮನವಿ ಮಾಡಿದ್ದರು. ಯುವತಿಯೊಬ್ಬಳು ಪಂಜುರ್ಲಿ ದೈವದ ವೇಷ ಹಾಕಿ ಕುಣಿದು ರೀಲ್ಸ್ ಮಾಡಿದ್ದಳು. ಆದರೆ ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಯುವತಿಗೆ ತನ್ನ ತಪ್ಪಿನ ಅರಿವಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ತಪ್ಪು ಕಾಣಿಕೆ ಸಲ್ಲಿಸಿ ಕ್ಷಮಿಸುವಂತೆ ಬೇಡಿಕೊಂಡಿದ್ದಳು.
ಸಾಂತಾಕ್ಲಾಸ್ ವೇಷ ಧರಿಸಿದ್ದ ವ್ಯಕ್ತಿಯೊಬ್ಬರು ‘ಕಾಂತಾರ’ ಚಿತ್ರದ ಕ್ಲೈಮಾಕ್ಸ್ ದೃಶ್ಯವನ್ನು ಅನುಕರಣೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ದೈವ ಕೂಗುವುದು, ಚಿತ್ರದ ಕ್ಲೈಮಾಕ್ಸ್‌ನಲ್ಲಿ ಪಂಜುರ್ಲಿ ದೈವ ಎಲ್ಲರ ಕೈ ಹಿಡಿದುಕೊಳ್ಳುವುದು, ನಂತರ ಬೆಂಕಿ ಪಂಜುಗಳನ್ನು ಹಿಡಿದು ಕಾಡಿನ ಒಳಗೆ ಓಡಿಹೋಗುವ ದೃಶ್ಯವನ್ನು ಈ ವ್ಯಕ್ತಿ ಅನುಕರಣೆ ಮಾಡಿದ್ದ. ಆತ ಹೀಗೆ ಮಾಡುವಾಗ ಸಮೀಪದಲ್ಲೇ ಇರುವ ಕೆಲವರು ಜೋರಾಗಿ ನಗುತ್ತಾ ಪಂಜುರ್ಲಿ ದೈವವನ್ನು ಅಪಹಾಸ್ಯ ಮಾಡಿದ್ದರು. ಈ ವಿಡಿಯೋ ಬಗ್ಗೆ ಕೂಡಾ ವಿರೋಧ ವ್ಯಕ್ತವಾಗಿತ್ತು. ದೈವದ ವಿಚಾರದಲ್ಲಿ ತಮಾಷೆ ಬೇಡ ಎಂದು ಕರಾವಳಿ ಮಂದಿ ಕಮೆಂಟ್ ಮಾಡಿ ಆ ಯುವಕನಿಗೆ ಬುದ್ಧಿ ಹೇಳಿದ್ದರು.