ಮೈತ್ರಿಯಲ್ಲಿ ಬಿರುಕು ಉಂಟಾದೀತು ಎಂದು ತಾಕೀತು
ಮುಂಬಯಿ : ಸಾವರ್ಕರ್ ಅವರನ್ನು ಅವಮಾನಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅವರ ಮಿತ್ರ ಪಕ್ಷವೇ ತಿರುಗಿ ಬಿದ್ದಿದೆ. ಸಾವರ್ಕರ್ ನಮ್ಮ ದೇವರು ಅವರನ್ನು ಅವಮಾನಿಸಿದರೆ ನಾವು ಸಹಿಸುವುದಿಲ್ಲ ಎಂದು ಮಹಾರಾಷ್ಟ್ರದಲ್ಲಿ ಕಾಂಗ್ರ್‌ನ ಮಿತ್ರ ಪಕ್ಷವಾಗಿರುವ ಶಿವಸೇನೆ (ಉದ್ಧವ್ ಬಣ) ಮುಖಂಡ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ರಾಹುಲ್ ಗಾಂಧಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಅವರು, ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾವು ಒಟ್ಟಾಗಿ ಹೋರಾಡಬೇಕಿದೆ, ಸಾವರ್ಕರ್ ಅವರು 14 ವರ್ಷಗಳ ಕಾಲ ಅಂಡಮಾನ್ ಜೈಲಿನಲ್ಲಿ ಊಹಿಸಲಾಗದ ಚಿತ್ರಹಿಂಸೆಗಳನ್ನು ಅನುಭವಿಸಿದ್ದಾರೆ. ಅವರ ತ್ಯಾಗವನ್ನು ನೆನೆಯಬೇಕೆ ವಿನಃ ಅವರನ್ನು ತೆಗಳಬಾರದು ಎಂದಿದ್ದಾರೆ.
ಪ್ರಧಾನಿ ನನ್ನ ಮುಂದಿನ ಭಾಷಣಕ್ಕೆ ಹೆದರಿದ್ದರಿಂದ ನನ್ನನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ನಾನು ಅವರ ಕಣ್ಣುಗಳಲ್ಲಿ ಭಯವನ್ನು ಕಂಡಿದ್ದೇನೆ. ಅದಕ್ಕಾಗಿಯೇ ನಾನು ಸಂಸತ್ತಿನಲ್ಲಿ ಮಾತನಾಡಲು ಅವರು ಬಯಸುವುದಿಲ್ಲ ಎಂದರು. ತಾವು ಬಿಜೆಪಿ ಕ್ಷಮೆಯಾಚನೆ ಮಾಡಬೇಕು ಎಂಬ ಕರೆಗೆ ಪ್ರತಿಕ್ರಿಯಿಸಿದ ಅವರು ನನ್ನ ಹೆಸರು ಸಾವರ್ಕರ್ ಅಲ್ಲ, ನಾನು ಗಾಂಧಿ, ನಾನು ಕ್ಷಮೆ ಕೇಳುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ರಾಹುಲ್ ಗಾಂಧಿಯವರು ಸಾವರ್ಕರ್ ಅವರನ್ನು ಕೀಳಾಗಿ ಕಾಣುವುದನ್ನು ಮುಂದುವರಿಸಿದರೆ ಪ್ರತಿಪಕ್ಷಗಳ ಮೈತ್ರಿಯಲ್ಲಿ ಬಿರುಕುಗಳು ಉಂಟಾಗುತ್ತವೆ ಎಂದು ಅವರು ಉದ್ಧವ್ ಹೇಳಿದ್ದಾರೆ